ಬೆಂಗಳೂರು: ಕಬಾಬ್-ಮಂಚೂರಿಯನ್ಗಳ ಬಣ್ಣ ಬಯಲಾದ ಬೆನ್ನಿಗೇ ಚಹಾ ಪುಡಿಯ ಬಣ್ಣವೂ ಬಯಲಾಗಿದೆ. ಅರ್ಥಾತ್, ಚಹಾ ಪುಡಿಯಲ್ಲೂ ಹಾನಿಕಾರಕ ಕೃತಕ ಬಣ್ಣ ಬಳಸಿರುವುದು ಆಹಾರ ಸುರಕ್ಷತಾಧಿಕಾರಿಗಳ ಕಾರ್ಯಾಚರಣೆಯಿಂದಾಗಿ ಬಹಿರಂಗಗೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಚಹಾ ಪುಡಿಯ ವಿವಿಧ ಮಾದರಿಗಳನ್ನು ಸಂಗ್ರಹಿಸಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ)ದ ಅಧಿಕಾರಿಗಳು, ಅವುಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಹೀಗೆ ಪರೀಕ್ಷಿಸಲಾದ ಚಹಾ ಪುಡಿಯ 49 ಮಾದರಿಗಳ ಪೈಕಿ 45ರಲ್ಲಿ ಕೃತಕ ಬಣ್ಣ ಇರುವುದು ಖಚಿತವಾಗಿದೆ.
ಕಲಬೆರಕೆ: ಕೆಲವು ಚಹಾ ಪುಡಿಯಲ್ಲಿ ಕಲಬೆರಕೆ ಆಗಿರುವುದು ಕೂಡ ಕಂಡುಬಂದಿದೆ. ಕೃತಕ ಬಣ್ಣವನ್ನಷ್ಟೇ ಅಲ್ಲದೆ, ಕೆಲವರು ಹೆಚ್ಚಿನ ಲಾಭ ಗಳಿಸುವ ದುರುದ್ದೇಶದಿಂದ ಮರದ ಪುಡಿಯನ್ನೂ ಬಳಸಿರುವುದು ಕಂಡುಬಂದಿದೆ.
ಬ್ರ್ಯಾಂಡೆಡ್ ಪುಡಿಯಲ್ಲೂ ಮೋಸ
ಆಹಾರ ಸುರಕ್ಷತಾಧಿಕಾರಿಗಳು ವಿಶ್ಲೇಷಣೆಗೆ ಒಳಪಡಿಸಲಾಗಿರುವ ಚಹಾ ಪುಡಿಯ ಮಾದರಿಗಳಲ್ಲಿ ಬ್ರ್ಯಾಂಡೆಡ್ ಚಹಾ ಪುಡಿ ಕೂಡ ಇತ್ತು. ಅದರಲ್ಲೂ ಕೃತಕ ಬಣ್ಣ ಇರುವುದು ತಿಳಿದುಬಂದಿದೆ. ಅಂಥ ಚಹಾ ಪುಡಿ ತಯಾರಕರು ಮತ್ತು ಅವುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವವರ ವಿರುದ್ಧವೂ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದೇ ಮೊದಲೇನಲ್ಲ..
ಅಂದಹಾಗೆ ಚಹಾ ಪುಡಿಯಲ್ಲಿ ಕೃತಕ ಬಣ್ಣ ಇರುವ ಕುರಿತ ಪ್ರಕರಣಗಳು ಈ ಹಿಂದೆಯೂ ವರದಿಯಾಗಿದ್ದವು. ಅದಾಗ್ಯೂ ಮತ್ತೆ ಕೃತಕ ಬಣ್ಣ ಸೇರಿಸಿ ಮಾರಾಟ ಮಾಡುವ ಮೂಲಕ ಕಾನೂನು ಉಲ್ಲಂಘಿಸುವುದು ಮಾತ್ರವಲ್ಲದೆ, ಸಾರ್ವಜನಿಕರ ಆರೋಗ್ಯಕ್ಕೂ ಕಂಟಕ ತರುತ್ತಿರುವುದು ಮುಂದುವರಿದಿದೆ.
ಸಂಬಂಧಿತ ಸುದ್ದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಸಂಬಂಧಿತ ಸುದ್ದಿ: ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!
ಸಂಬಂಧಿತ ಸುದ್ದಿ: ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಿದ ಸರ್ಕಾರ



