ಬೆಂಗಳೂರು: ರಾಜ್ಯದ ಒಂದು ಸಣ್ಣ ಭಾಗದ, ಒಂದು ತಾಲೂಕಿನ ಜನರಷ್ಟೇ ಮಾತನಾಡುವ ಕುಂದಾಪುರ ಕನ್ನಡ ಭಾಷೆಯ ಹಬ್ಬವನ್ನು ರಾಜಧಾನಿ ಬೆಂಗಳೂರಿನಲ್ಲಿ, ಅದರಲ್ಲೂ ಅರಮನೆ ಮೈದಾನದಲ್ಲಿ ಆಯೋಜಿಸುವುದು ಎಂದರೆ ಸಣ್ಣ ಸಂಗತಿಯೇನಲ್ಲ.
ಆದರೆ ಅಂಥ ದೊಡ್ಡ ಕಾರ್ಯ ʼವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನʼ ಆಚರಣೆ ಆರಂಭಿಸಿದ ಆರೇ ವರ್ಷಗಳಲ್ಲಿ ಸಾಧ್ಯವಾಗಿದೆ. ಅರ್ಥಾತ್, ʼಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರುʼ ಹಮ್ಮಿಕೊಂಡಿರುವ ಐದನೇ ವರ್ಷದ ವಿಶ್ವ ಕುಂದಾಪುರ ಕನ್ನಡ ದಿನ (ಮಧ್ಯೆ ಕರೊನಾ ಕಾರಣಕ್ಕೆ ಒಂದು ವರ್ಷ ಆಗಿರಲಿಲ್ಲ) ಈ ಸಲ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವಿಶೇಷವೆಂದರೆ ಇಷ್ಟು ವರ್ಷ ಬರೀ ಒಂದು ದಿನ ನಡೆಯುತ್ತಿದ್ದ ಈ ಕುಂದಾಪ್ರ ಕನ್ನಡ ಹಬ್ಬ ಈ ಸಲ ಎರಡು ದಿನ ನಡೆಯಲಿದೆ.
ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಆಚರಣೆಯ ದಿನ ಹಾಗೂ ಸ್ಥಳ ಘೋಷಣೆಯ ʼವಾಲ್ಗʼ ಕಾರ್ಯಕ್ರಮ ಜುಲೈ 7ರಂದು ಬೆಂಗಳೂರಿನ ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಿತು. ಸ್ಥಳ-ದಿನಾಂಕ ಘೋಷಣೆಯ ಈ ಕಾರ್ಯಕ್ರಮಕ್ಕೂ ನೂರಾರು ಜನರು ಸೇರಿದ್ದು ವಿಶೇಷವಾಗಿತ್ತು. ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ ಆಯೋಜನೆ ಸಾಧ್ಯವಾಗಿದ್ದು ಹೇಗೆ ಎಂಬ ಸಂಗತಿಯೂ ಇದೇ ಸಂದರ್ಭದಲ್ಲಿ ಬಹಿರಂಗವಾಯಿತು.
ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಅವುಗಳಿಗೆ ಬೃಹತ್ ಜನಸ್ತೋಮ ಹರಿದುಬಂದಿದ್ದು, ಕಳೆದ ವರ್ಷ ಬಂದಿದ್ದವರಲ್ಲಿ ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದ ʼಕುಂದಾಪ್ರ ಕನ್ನಡ ಪ್ರತಿಷ್ಠಾನʼದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು, ಅರಮನೆ ಮೈದಾನ ನಿಗದಿಯಾದ ಬಗೆಯನ್ನೂ ವಿವರಿಸಿದರು.
ಕಳೆದ ವರ್ಷದ ಕುಂದಾಪ್ರ ಕನ್ನಡ ಹಬ್ಬಕ್ಕೆ ಸೇರಿದ್ದ ಕಿಕ್ಕಿರಿದ ಜನಸ್ತೋಮವನ್ನು ಕಂಡ ಹೋಟೆಲೋದ್ಯಮಿ ಗೋಪಾಲ್ ಶೆಟ್ಟಿ ಅವರು, ಬೆಂಗಳೂರಿನಲ್ಲಿ ಮುಂದಿನ ಕುಂದಾಪ್ರ ಕನ್ನಡ ಹಬ್ಬವನ್ನು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕಾರ್ಯಕ್ರಮ ಆಯೋಜನೆಯ ಸ್ಥಳಕ್ಕೇ ಸುಮಾರು 25 ಲಕ್ಷ ರೂ. ಖರ್ಚು ಮಾಡುವುದು ಸ್ವಲ್ಪ ಕಷ್ಟದ ಸಂಗತಿಯೇ ಆಗಿತ್ತು ಎಂದ ದೀಪಕ್ ಶೆಟ್ಟಿ, ಈ ಹಿನ್ನೆಲೆಯಲ್ಲಿ ನಡೆದ ಒಂದು ಘಟನೆಯನ್ನು ಉಲ್ಲೇಖಿಸಿದರು.
ಇತ್ತೀಚೆಗೆ ಒಂದು ದಿನ ಊರಿಗೆ ಹೋಗಲು ನಾನು ವಿಮಾನನಿಲ್ದಾಣದಲ್ಲಿದ್ದೆ. ಅಂದು ವಿಮಾನ ಹೊರಡುವುದು ತಡವಾಗಿತ್ತು. ಹೀಗಾಗಿ ಏರ್‌ಪೋರ್ಟ್‌ನಲ್ಲಿ ಕಾಯುವಂತಾಗಿದ್ದಾಗ ನಮ್ಮೂರಿನ ಒಬ್ಬರು ವ್ಯಕ್ತಿ ಬಂದು ಮಾತನಾಡಿಸಿದರು. ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಅವರು ಇದ್ದಕ್ಕಿದ್ದಂತೆ ಕುಂದಾಪುರ ಕನ್ನಡ ದಿನಾಚರಣೆ ಕುರಿತು ಪ್ರಸ್ತಾಪಿಸಿ, ʼಈ ಸಲ ಎಲ್ಲಿ ಆಚರಣೆ?ʼ ಎಂದು ಕೇಳಿದರು. ʼಕುಂದಾಪುರ ಕನ್ನಡ ಹಬ್ಬವಂತೂ ಮಾಡಲೇಬೇಕು, ಎಲ್ಲಿ ಅನ್ನೋದೇ ಸದ್ಯ ಗೊಂದಲ ಆಗಿದೆ. ಯಾಕಂದರೆ, ಕಳೆದ ಸಲ ಸೇರಿದ್ದ ಜನರ ಪ್ರಮಾಣ ನೋಡಿದರೆ ಈ ಸಲ ಬಂಟರ ಸಂಘದಲ್ಲಂತೂ ಮಾಡಲು ಸಾಧ್ಯವಿಲ್ಲ, ಬೇರೆ ಎಲ್ಲಾದರೂ ಜಾಗ ಹುಡುಕಬೇಕುʼ ಎಂದು ಹೇಳಿದೆ. ಆಗ ಅದಕ್ಕೆ ಪ್ರತಿಕ್ರಿಯಿಸಿದ ಅವರು, ʼನೋಡಿ ನೀವು ಕುಂದಾಪ್ರ ಕನ್ನಡ ಹಬ್ಬ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡುವುದಾದರೆ ಸ್ಥಳ ಕುರಿತ ಪೂರ್ತಿ ಖರ್ಚು ನಾನು ನೋಡಿಕೊಳ್ಳುತ್ತೇನೆʼ ಎಂದುಬಿಟ್ಟರು. ಅವರು ಮತ್ಯಾರೂ ಅಲ್ಲ, ಹೋಟೆಲೋದ್ಯಮಿ, ಎ.ಎಸ್.ಕ್ಯಾಟರರ್ಸ್ ಮಾಲೀಕ ಸತೀಶ್ ಶೆಟ್ಟರು ಎಂದು ಕುಂದಾಪ್ರ ಕನ್ನಡ ಹಬ್ಬಕ್ಕೆ ಅರಮನೆ ಮೈದಾನ ನಿಗದಿಯಾದ ಬಗೆಯನ್ನು ದೀಪಕ್ ಶೆಟ್ಟಿ ತಿಳಿಸಿದರು. ಬಳಿಕ ಸತೀಶ್ ಶೆಟ್ಟಿಯವರ ಮೂಲಕವೇ ಕುಂದಾಪ್ರ ಕನ್ನಡ ದಿನಾಚರಣೆಯ ಸ್ಥಳ ಘೋಷಣೆಯನ್ನು ಮಾಡಿಸಲಾಯಿತು. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕುಂದಾಪ್ರ ಕನ್ನಡ ಹಬ್ಬದ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಹಬ್ಬದ ಪ್ರೊಮೊ ಕೂಡ ಬಿಡುಗಡೆ ಮಾಡಲಾಯಿತು.
ಕುಂದಾಪ್ರ ಕನ್ನಡ ಹಬ್ಬದ ಆಚರಣೆ ಕುರಿತು ಮತ್ತಷ್ಟು ವಿವರಣೆ ನೀಡಿದ ದೀಪಕ್ ಶೆಟ್ಟಿ, ಎರಡು ದಿನಗಳ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ‘ನಾಕ್ ಘನಾ ಸುರ್ಲ್’ ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ ‘ನುಡಿ ಚಾವಡಿ’ ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವರು ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಕೂಡ ಇರಲಿದೆ ಎಂದು ಮಾಹಿತಿ ನೀಡಿದರು.
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕ ನಿರ್ದೇಶಕ ಆರ್.ಉಪೇಂದ್ರ ಶೆಟ್ಟಿ, ಹೋಟೆಲೋದ್ಯಮಿ ಸತೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದು ಸಣ್ಣ ಆಲೋಚನೆ ಅಲ್ಲ. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಪ್ರಯತ್ನ. ಕುಂದಾಪುರ ಸಂಸ್ಕೃತಿಗೆ ಸಂಬಂಧಿಸಿದ ದೊಡ್ಡ ಪ್ರಯೋಗವೊಂದನ್ನು ಮಾಡುತ್ತಿದ್ದು, ಇದೇ ಕುಂದಾಪುರ ಕನ್ನಡ ಹಬ್ಬದ ಸಂದರ್ಭದಲ್ಲೇ ಸಾಕಾರಗೊಳ್ಳುವ ಸಾಧ್ಯತೆ ಇದೆ.
| ರವಿ ಬಸ್ರೂರು, ಖ್ಯಾತ ಸಂಗೀತ ನಿರ್ದೇಶಕ.
ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.
ಇತರ ಪ್ರಮುಖ ಕಾರ್ಯಕ್ರಮಗಳ ಪಟ್ಟಿ
- ‘ಹಂದಾಡ್ತ ನೆಗ್ಯಾಡಿ‘: ಕುಂದಾಪ್ರ ಕನ್ನಡದ ನಗೆ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಪ್ರಹಸನ.
- ‘ಬಯಲಾಟ‘: ಗ್ರಾಮೀಣ ಕ್ರೀಡೋತ್ಸವ
- ‘ರಥೋತ್ಸವ‘: ಹಬ್ಬದ ರೀತಿಯಲ್ಲೇ ಭಾವಬೀದಿಯಲ್ಲಿ ಭಾಷೆಯ ತೇರು.
- ‘ಪೆಟ್ಟ್ ಒಂದೇ, ಸ್ವರ ಬೇರೆ‘: ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ.
- ‘ಭುಜಬಲದ ಪರಾಕ್ರಮ‘: ಹಗ್ಗಜಗ್ಗಾಟ 8 ಊರಿನ ಹೆಸರಲ್ಲಿ ತಂಡ.
- ‘ಯಬ್ಯಾ ಸೌಂಡೇ‘: ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ
- ‘ಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್‘: ವಿಶೇಷ ನೃತ್ಯ ಪ್ರದರ್ಶನ
- ‘ಗಂಡಿನ್ ಪಿಚ್ಚರ್ ಬಿಡ್ತ್‘: ವಿಶೇಷ ಕಿರುಚಿತ್ರ ಪ್ರದರ್ಶನ
- ‘ನಮ್ ಊರ್ಮನಿ ಪಿಚ್ಚರ್ ಯಾಕ್ಟ್ರ್ಸ್‘: ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮ.
- ‘ಕುಂದಾಪ್ರ ಸಂತಿ‘: ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ.
- ‘ಹೊಟ್ಟಿ ಕಂಡದ್ ನಾವೇ ಸೈ‘: ಕರಾವಳಿಯ ವಿಶೇಷ ಖಾದ್ಯ ಮೇಳ.
ಸಂಬಂಧಿತ ಸುದ್ದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಸಂಬಂಧಿತ ಸುದ್ದಿ: ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಸಂಬಂಧಿತ ಸುದ್ದಿ: ಪಿ.ಸಿ.ರಾವ್ @ 70: ಅರಮನೆ ಮೈದಾನದಲ್ಲಿ ಜನ್ಮದಿನದ ಅದ್ಧೂರಿ ಸಂಭ್ರಮ