ಒಳಗೇನಿದೆ!?

ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!

ರಜತಗಿರಿಯ ಹಲಸಿನ ಖಾದ್ಯ ಮೇಳದಲ್ಲಿ ಮಂಗಲಾ ರಾಗ್‌ ಹೆಗಡೆ ಪುತ್ರಿ ಪ್ರಾಂಜಲಾ.

ಹೋಟೆಲ್‌ ಕ್ಷೇತ್ರಕ್ಕೆಂದೇ ವಿಶಿಷ್ಟವಾಗಿ ರೂಪಿಸಲಾಗಿರುವ ಕನ್ನಡದ ಪ್ರಪ್ರಥಮ ವೆಬ್‌ಸೈಟ್‌ ‘ಹೋಟೆಲ್‌ ಕನ್ನಡ.ಕಾಂ’, ಹೋಟೆಲಿಗರಿಗಷ್ಟೇ ಅಲ್ಲ, ಹೋಟೆಲ್ ಭಕ್ಷ್ಯ-ಭೋಜನ ಇಷ್ಟಪಡುವ ಗ್ರಾಹಕರಿಗೂ ನೆಚ್ಚಿನ ಜಾಲತಾಣ. ಅಂಥ ಗ್ರಾಹಕರು ತಮ್ಮ ನೆಚ್ಚಿನ ಹೋಟೆಲ್‌, ಅಲ್ಲಿನ ತಿಂಡಿಯ ರುಚಿ, ಅನುಭವಗಳನ್ನು ಹಂಚಿಕೊಳ್ಳಲೆಂದೇ ʼಸವಿದವರ ಸವಿಮಾತುʼ ಎಂಬ ಅಂಕಣವನ್ನು ಆರಂಭಿಸಲಾಗಿದೆ. ಅದರ ಮೊದಲ ಕಂತಾಗಿ ʼಇಂಗು ಮೆಣಸುʼ ಗೃಹೋತ್ಪನ್ನ ತಯಾರಕಿ ಮಂಗಲಾ ರಾಗ್‌ ಹೆಗಡೆ ಅವರು ʼರಜತಗಿರಿ ಪ್ಯಾಲೇಸ್‌ʼನಲ್ಲಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನೀವೂ ನಿಮ್ಮ ನೆಚ್ಚಿನ ಹೋಟೆಲ್‌, ಅಲ್ಲಿನ ತಿಂಡಿ-ತಿನಿಸಿನ ಅನುಭವ ʼಹೋಟೆಲ್‌ ಕನ್ನಡʼ ಜೊತೆ ಹಂಚಿಕೊಳ್ಳಬಹುದು. ನಿಮ್ಮ ಅನಿಸಿಕೆಯನ್ನು 150-200 ಪದಗಳಲ್ಲಿ ಬರೆದು ಪೋಟೋ ಸಹಿತ ನಮಗೆ ಇ-ಮೇಲ್‌ (hotelkannada@gmail.com) ಮಾಡಿ. ಆಯ್ದ, ಸೂಕ್ತಕಂಡ ಬರಹಗಳನ್ನು ಪ್ರಕಟಿಸಲಾಗುವುದು.

ಬಾಲ್ಯದಿಂದಲೂ ನನಗೆ ಹಲಸಿನ ಹಣ್ಣು ಎಂದರೆ ಪಂಚಪ್ರಾಣ. ನಮ್ಮದು ಮೂಲತಃ ಹಳ್ಳಿಯಾಗಿದ್ದರಿಂದ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೂ ಯಥೇಚ್ಛ ಹಲಸಿನಕಾಯಿ, ಹಣ್ಣುಗಳು ಸಿಗುತ್ತಿದ್ದವು. ಹಪ್ಪಳ-ಚಿಪ್ಸ್‌ನಿಂದ ಶುರುವಾಗಿ ಕಡುಬು, ಮುಳ್ಕದವರೆಗೆ ಅವೆಷ್ಟು ಪದಾರ್ಥಗಳನ್ನು ಮಾಡುತ್ತಿದ್ದೆವೋ ಲೆಕ್ಕಕ್ಕೇ ಇಲ್ಲ. ಈಗ ನಾವು ಪೇಟೆ ಸೇರಿಯಾಗಿದೆ. ಹಲಸಿನ ಕಾಯಿ ಸಿಕ್ರೆ ಹಣ್ಣು ಸಿಗಲ್ಲ, ಹಣ್ಣು ಸಿಕ್ರೆ ಕಾಯಿ ಸಿಗಲ್ಲ ಎಂಬಂತಾಗಿದೆ.

ಹೀಗಿದ್ದಾಗ ಮೊನ್ನೆ ಸ್ನೇಹಿತೆಯೊಬ್ಬರು ಹಲಸಿನ ಖಾದ್ಯ ಮೇಳದ ಮಾಹಿತಿಯನ್ನು ಕಳಿಸಿದರು. ಬಿಡುವುದುಂಟೇ..? ತಡ ಮಾಡಲೇ ಇಲ್ಲ.. ಹಲಸಿನ ಮೇಳವಿದ್ದ ʼರಜತಗಿರಿ ಪ್ಯಾಲೇಸ್ʼ ಹೋಟೆಲ್‌ಗೆ ಕುಟುಂಬಸಮೇತ ಹೋದ್ವಿ. ಬಹಳ ಜನ ಇದ್ರು, ಟೋಕನ್ ತಗೊಂಡು ಮೊದಲಿನ ಮಹಡಿಗೆ ಹೋದ್ವಿ.

ಹಲಸಿನ ಹಣ್ಣಿನ ಐಸ್‌ಕ್ರೀಮ್‌ ಸವಿಯುತ್ತಿರುವ ಪ್ರಾಂಜಲಾ.

 ʼರಜತಗಿರಿ ಪ್ಯಾಲೇಸ್ʼ ಎಂಬ ಈ ಹೊಟೆಲ್‌ಗೆ ನಾವು ಇದೇ ಮೊದಲ ಸಲ ಹೋಗಿದ್ದು. ಹೋಟೆಲ್‌ ಬಹಳ ಚೆಂದವಿದೆ, ಅಲ್ಲಿನವರ ಶಿಸ್ತು ಇನ್ನೂ ಚೆಂದ. ಹಲಸಿನ ಮೇಳದ ಊಟಕ್ಕೆ ಅಷ್ಟೊಂದು ಜನರು ಬಂದಿದ್ದರೂ ಎಲ್ಲರಿಗೂ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದರು.  ಎಷ್ಟು ಹೊತ್ತು ಕಾದರೂ, ಅಷ್ಟು ರಶ್ ಇದ್ದರೂ, ಒಬ್ಬರಿಗೂ ಸುಸ್ತಾಗದಂತೆ ಮನೆಗೆ ಬಂದ ನೆಂಟರಂತೆ ನೋಡಿಕೊಂಡರು. ಟೋಕನ್ ಪ್ರಕಾರವೇ ಒಳಗೆ ಬಿಟ್ಟರು.

ಒಳಗೆ ಹೋದ ನಂತರ ಮತ್ತಷ್ಟು ಆಶ್ಚರ್ಯ. ವಿಶಾಲವಾದ ಕೋಣೆ‌, ಅಲ್ಲಿ ಡೈನಿಂಗ್ ಟೇಬಲ್ಸ್. ಎಲ್ಲರೂ ಕುಳಿತುಕೊಂಡು ಸುಧಾರಿಸಿಕೊಂಡ ನಂತರ ಬಾಳೆ ಎಲೆ ಕೊಟ್ಟರು. ನಂತರ ನಿಧಾನವಾಗಿ ಎಲ್ಲವನ್ನೂ ಬಡಿಸಿದ್ರು. ಎಷ್ಟೊಂದು ವೆರೈಟಿ ಹಲಸಿನ ಖಾದ್ಯಗಳಿದ್ದವು, ವಾಹ್! ಯಾರು ಯಾವ ಪದಾರ್ಥವನ್ನು ಮತ್ತೊಮ್ಮೆ ಕೇಳಿದರೂ ತಂದು ಬಡಿಸುತ್ತಿದ್ದ ರೀತಿ ಅನುಕರಣೀಯ. ಊಟ ಮುಗಿಸಿ ಕೈ ತೊಳೆದು ಹೋಟೆಲ್‌ನಿಂದ ಹೊರಗೆ ಬರುವವರೆಗೂ ಪ್ರತಿಯೊಬ್ಬರೂ ನಡೆದುಕೊಂಡ ರೀತಿ ಎಲ್ಲಾ ಹೋಟೆಲ್‌ನವರು ಅನುಸರಿಸುವಂತಿದೆ. ಹಲಸಿನ ಹಣ್ಣಿನ ಪದಾರ್ಥಗಳಷ್ಟೇ ಇಷ್ಟವಾಗಿದ್ದು ಆ ಹೋಟೆಲ್‌ನವರ ನಡೆ-ನುಡಿ. ಹಣ ಕೊಟ್ಟು ಊಟಕ್ಕೆ ಹೋದರೂ ʼಯಾಕೆ ಬಂದ್ರೋ!ʼ ಅನ್ನುವಂತೆ ನಡೆಸಿಕೊಳ್ಳುವ ಕೆಲವು ಹೋಟೆಲ್‌ಗಳ ಮಧ್ಯ “ರಜತಗಿರಿ ಪ್ಯಾಲೇಸ್”  ಬಲು ಎತ್ತರದಲ್ಲಿ ನಿಲ್ಲುತ್ತದೆ. ಅವರು ಪ್ರೀತಿಯಿಂದ ಬಡಿಸುವುದನ್ನು ಸವಿಯಲು ಇನ್ನೊಮ್ಮೆ ಹೋಗಬೇಕು ಅಂತ ಅನಿಸುತ್ತಲೇ ಇದೆ. ಹೆಸರಿಗೆ ತಕ್ಕ ಹಾಗೆ ʼರಜತಗಿರಿ ಪ್ಯಾಲೇಸ್ʼ ಒಂಥರಾ ಅರಮನೆಯೂ ಹೌದು!

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ:ಅಬಕಾರಿ ಸಚಿವರಿಗೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಮನವಿ

ಇದೂ ಓದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ