ಬೆಂಗಳೂರು: ಭಾರತದಲ್ಲಿ ಆಹಾರ ಸೇವಾ ಉದ್ಯಮದ ಆಳ ಅಗಾಧ, ಅಗಲ ವಿಶಾಲ. ಆದರೆ ಅಷ್ಟಕ್ಕೂ ಅದರ ಪ್ರಮಾಣ ಎಷ್ಟು ಎಂಬ ಕುರಿತು ಬಹುತೇಕರಿಗೆ ಮಾಹಿತಿ ಇರುವುದಿಲ್ಲ. ಆ ನಿಟ್ಟಿನಲ್ಲಿ ನ್ಯಾಷನಲ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮಹತ್ವದ ಕಾರ್ಯವೊಂದನ್ನು ಮಾಡುತ್ತಿದೆ.
ಅಂದರೆ ಎನ್‌ಆರ್‌ಎಐ ಕಳೆದ ಐದು ವರ್ಷಗಳಿಂದ ಭಾರತೀಯ ಆಹಾರ ಸೇವೆಗಳ ವರದಿ (ಇಂಡಿಯಾ ಫುಡ್ ಸರ್ವಿಸಸ್ ರಿಪೋರ್ಟ್-ಐಎಫ್‌ಎಸ್‌ಆರ್) ಬಿಡುಗಡೆ ಮಾಡುತ್ತಿದ್ದು, ಈ ವರ್ಷ ಐದನೇ ವರದಿಯನ್ನು ಬಿಡುಗಡೆ ಮಾಡಿದೆ. ಅರ್ಥಾತ್, ಎನ್‌ಆರ್‌ಎಐ ಐಎಫ್‌ಎಸ್‌ಆರ್-2024ರ ವರದಿ ಜುಲೈ 9ರಂದು ನವದೆಹಲಿಯ ದ ಲಲಿತ್ ಹೋಟೆಲ್‌ನಲ್ಲಿ ಬಿಡುಗಡೆ ಆಗಿದೆ.
ಬರೀ ಆಹಾರ ಸೇವಾ ಪ್ರಮಾಣದ ಬಗ್ಗೆಯಷ್ಟೇ ಅಲ್ಲದೆ, ಈ ಕ್ಷೇತ್ರದ ಕಾರ್ಯಾಚರಣೆ ವಿಧಾನಗಳು, ಹೂಡಿಕೆಯ ಕಾರ್ಯತಂತ್ರಗಳು, ಆಹಾರ ಸೇವನಾ ಪ್ರವೃತ್ತಿ ಮತ್ತು ಸುಸ್ಥಿರ ಉಪಕ್ರಮಗಳ ಬಗ್ಗೆಯೂ ಈ ವರದಿ ಒಳನೋಟವನ್ನು ಬೀರುತ್ತದೆ. ಉದ್ಯಮಿಗಳು ಮತ್ತು ಗ್ರಾಹಕರ ಅನುಭವ-ಅನಿಸಿಕೆಗಳ ವಿಶ್ಲೇಷಣೆಯ ಅಂಶಗಳನ್ನು ಕೂಡ ಈ ವರದಿ ಒಳಗೊಂಡಿರುತ್ತದೆ.
ಎನ್‌ಆರ್‌ಎಐ ಐಎಫ್‌ಎಸ್‌ಆರ್-2024ರ ಪ್ರಕಾರ 2024ರ ಆರ್ಥಿಕ ವರ್ಷದಲ್ಲಿ ಆಹಾರ ಸೇವೆಗಳ ಉದ್ಯಮದ ಮೌಲ್ಯ 5,69,487 ಕೋಟಿ ರೂ. ಆಗಿದೆ. ಇದು 2028ರ ಆರ್ಥಿಕ ವರ್ಷದ ಸುಮಾರಿಗೆ 7,76,511 ಕೋಟಿ ರೂ. ಆಗಲಿದೆ ಎಂದೂ ಈ ವರದಿ ಅಂದಾಜಿಸಿದೆ.
ಕೋವಿಡ್-19 ಸಾಂಕ್ರಾಮಿಕ ಕಾಲದ ಹಿನ್ನಡೆಯ ನಡುವೆಯೂ ಭಾರತದಲ್ಲಿ ಆಹಾರ ಸೇವಾ ಉದ್ಯಮ ಕ್ಷಿಪ್ರ ಪ್ರಗತಿ ಸಾಧಿಸಿದೆ. ಈ ಕ್ಷೇತ್ರ 85.5 ಲಕ್ಷ ಮಂದಿಗೆ ನೇರವಾಗಿ ಉದ್ಯೋಗ ಹಾಗೂ ಭಾರತೀಯ ಖಜಾನೆಗೆ 33,809 ಕೋಟಿ ರೂ. ಹಣದ ಹರಿವನ್ನು ನೀಡುತ್ತಿದೆ ಎಂದು ಎನ್‌ಆರ್‌ಎಐ ಅಧ್ಯಕ್ಷ, ಅಜ್ಯೂರ್ ಹಾಸ್ಪಿಟಾಲಿಟಿಯ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಕಬೀರ್ ಸೂರಿ ತಿಳಿಸಿದರು.
ಭಾರತದ ಜಿಡಿಪಿಗೆ ನಮ್ಮ ಆರ್ಥಿಕ ಕೊಡುಗೆ ಹೆಚ್ಚಿಸಲು ಹಾಗೂ ಆಹಾರ ಸೇವೆಗಳ ವಲಯದ ಮಾಹಿತಿಯ ಅತ್ಯಂತ ನಿಖರ ಮತ್ತು ನಿರ್ಣಾಯಕ ಮೂಲವಾಗಿ ಕಾರ್ಯನಿರ್ವಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಸಂಗತಿಗಳನ್ನು ಪ್ರಸ್ತುತಪಡಿಸುವುದು ಈ ವರದಿಯ ಪ್ರಾಥಮಿಕ ಉದ್ದೇಶ ಎಂದು ಅವರು ತಿಳಿಸಿದರು.
ಎನ್‌ಆರ್‌ಎಐ ಅಧ್ಯಕ್ಷ ಕಬೀರ್ ಸೂರಿ, ಉಪಾಧ್ಯಕ್ಷ ಸಾಗರ್ ದರ್ಯಾನಿ, ಪ್ರಣವ್ ರಂಗ್ಟಾ, ಎನ್‌ಆರ್‌ಎಐ ರಿಪೋರ್ಟ್ ಸ್ಟೀಯರಿಂಗ್ ಕಮಿಟಿ ಅಧ್ಯಕ್ಷ ನಿತಿನ್ ಸಲುಜ, ದ ಬೀರ್ ಕೆಫೆ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ಸಿಂಗ್, ಪೆಪ್ಸಿಕೊ ಇಂಡಿಯಾ ಕಸ್ಟಮರ್ ಡೆವೆಲಪ್‌ಮೆಂಟ್ ಡೈರೆಕ್ಟರ್ ಆನಂದ್ ಶರ್ಮಾ ಉಪಸ್ಥಿತರಿದ್ದರು.
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ಕ್ಲೌಡ್ ಕಿಚನ್ ಆ್ಯಂಡ್ ಫುಡ್ ಡೆಲಿವರಿ ಶೃಂಗಸಭೆ ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಇದೂ ಓದಿ: ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!