ಒಳಗೇನಿದೆ!?

ನಾನು ನಂದಿನಿ, ಮಾರ್ಕೆಟ್‌ಗೆ ಬರ್ತೀನಿ..; ಕೆಎಂಎಫ್‌ನಿಂದಲೂ ಇಡ್ಲಿ-ದೋಸೆ ಹಿಟ್ಟು

ಬೆಂಗಳೂರು: ಹೋಟೆಲ್‌ಗೆ ಹೋಗಿ ʼಇಡ್ಲಿ-ದೋಸೆʼ ಪಾರ್ಸೆಲ್‌ ತರುವ ಥರವೇ ʼಇಡ್ಲಿ-ದೋಸೆ ಹಿಟ್ಟುʼ ತರುವ ಜಮಾನ ಬಂದು ವರ್ಷಗಳೇ ಉರುಳಿವೆ. ಹೀಗಾಗಿಇಡ್ಲಿ-ದೋಸೆ ಮಾರಾಟ ಮಾಡುವಂತೆ ‘ಇಡ್ಲಿ-ದೋಸೆ ಹಿಟ್ಟು’ ತಯಾರಿಸಿ ಮಾರುವಂಥ ಉದ್ಯಮವೂ ಬೆಳೆದಿದೆ. ಇದೀಗ ಆ ನಿಟ್ಟಿನಲ್ಲಿ ‘ಕರ್ನಾಟಕ ಹಾಲು ಮಹಾಮಂಡಳ’ (ಕೆಎಂಎಫ್‌) ಕೂಡ ಮುಂದಾಗಿದೆ. ಅಂದರೆ, ʼನಂದಿನಿʼ ಬ್ರ್ಯಾಂಡ್‌ನ ಇಡ್ಲಿ-ದೋಸೆ ಹಿಟ್ಟು (ಬ್ಯಾಟರ್) ಸದ್ಯದಲ್ಲೇ ಮಾರ್ಕೆಟ್‌ನಲ್ಲಿ ಸಿಗಲಿದೆ.

ಕನ್ನಡಿಗರ ಜನಮನ ಗೆದ್ದಿರುವ ‘ನಂದಿನಿ’ ಈ ಮೂಲಕ ಕರ್ನಾಟಕದ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ನಂದಿನಿ ಬ್ರ್ಯಾಂಡ್‌ನ ʼರೆಡಿ ಟು ಕುಕ್‌ʼ ಇಡ್ಲಿ-ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ಈಗಾಗಲೇ ಮಾಹಿತಿ ಬಹಿರಂಗಪಡಿಸಿದ್ದಾರೆ.

‘ಹಾಲು, ಬ್ರೆಡ್‌, ಬನ್‌, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ, ಚೀಸ್‌ ಸೇರಿ ಹಲವು ಉತ್ಪನ್ನಗಳನ್ನು ನಾವು ಈಗಾಗಲೇ ನೀಡುತ್ತಿದ್ದೇವೆ. ಈಗ ಇಡ್ಲಿ-ದೋಸೆ ಹಿಟ್ಟನ್ನೂ ಕೊಡಲು ನಾವು ಮನಸು ಮಾಡಿದ್ದು, ಇದು ಬೆಂಗಳೂರಿನ ಜನರಿಗೆ ಅತ್ಯಂತ ಅನುಕೂಲಕರವಾಗಿ ಪರಿಣಮಿಸುವ ಜೊತೆಗೆ, ಅವರಿಗೆ ಅನುದಿನದ ಅಚ್ಚುಮೆಚ್ಚಿನ ಉತ್ಪನ್ನವಾಗುವ ಆಶಯವನ್ನೂ ನಾವು ಹೊಂದಿದ್ದೇವೆ’ ಎಂಬುದಾಗಿ ಜಗದೀಶ್‌ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬೆಟರ್‌ ಬ್ಯಾಟರ್‌

ಬೇರೆ ಇಡ್ಲಿ-ದೋಸೆ ಹಿಟ್ಟುಗಳಿಗೆ ಹೋಲಿಸಿದರೆ ಇದು ʼಬೆಟರ್‌ ಬ್ಯಾಟರ್‌ʼ ಎನ್ನುವುದು ಕೆಎಂಎಫ್‌ ಅಭಿಮತ. ನಂದಿನಿಯ ಇಡ್ಲಿ-ದೋಸೆ ಹಿಟ್ಟಿನಲ್ಲಿ ಹಾಲಿನ ಉಪ ಉತ್ಪನ್ನ ʼವೇ ಪ್ರೊಟೀನ್‌ʼ ಇದ್ದು ಅದು ಹೆಚ್ಚಿನ ರುಚಿ ನೀಡುತ್ತದೆ. ಈ ಕುರಿತಂತೆ ಈಗಾಗಲೇ ಪ್ರಯೋಗ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಲಭಿಸಿದೆ ಎಂದು ಕೆಎಂಎಫ್‌ ಎಮ್‌ಡಿ ಹೇಳಿದ್ದಾರೆ.

ನುರಿತವರಿಂದಲೇ ತಯಾರಿ

ನಂದಿನಿ ರೆಡಿ ಟು ಕುಕ್‌ ಬ್ಯಾಟರ್‌ ಎಂದಾಕ್ಷಣ ಇದನ್ನು ಕೆಎಂಎಫ್‌ನಿಂದಲೇ ತಯಾರಿಸಲಾಗುತ್ತದೆ ಅಂತೇನೂ ಅಲ್ಲ. ಕೆಎಂಎಫ್‌ ಕೆಲವು ಮಾರ್ಗಸೂಚಿಗಳೊಂದಿಗೆ ಇದನ್ನು ನುರಿತ ತಯಾರಕರಿಂದಲೇ ಉತ್ಪಾದಿಸಿ ನಂದಿನಿ ಬ್ರ್ಯಾಂಡ್‌ನಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಸಂಸ್ಥೆ ಈ ಕ್ಷೇತ್ರದಲ್ಲಿ ಪರಿಣತಿ ಪಡೆದಿರುವ ಕೆಲವು ತಯಾರಕರ ಜೊತೆ ಈಗಾಗಲೇ ಮಾತುಕತೆ ನಡೆಸಿದೆ. 450 ಮತ್ತು 900 ಗ್ರಾಮ್ಸ್‌ ಪೊಟ್ಟಣದಲ್ಲಿ ಈ ಇಡ್ಲಿ-ದೋಸೆ ಹಿಟ್ಟು ಲಭ್ಯವಿರಲಿದ್ದು, ವರ್ಷಕ್ಕೆ ಅಂದಾಜು ಒಂದು ಲಕ್ಷ ಕೆ.ಜಿ.ಯಷ್ಟು ಇಡ್ಲಿ-ದೋಸೆ ಹಿಟ್ಟು ತಯಾರಿಸಿ ಮಾರುವ ಗುರಿ ಕೆಎಂಎಫ್‌ ಇರಿಸಿಕೊಂಡಿದೆ. ಟೆಂಡರ್‌ ಮೂಲಕ ನುರಿತ ತಯಾರಕರಿಗೆ ಇಡ್ಲಿ-ದೋಸೆ ಹಿಟ್ಟು ತಯಾರಿಸುವ ಜವಾಬ್ದಾರಿ ವಹಿಸಲಿದೆ. ಅಧಿಕೃತ ಸಂಸ್ಥೆಗಳು ಕೆಎಂಎಫ್‌ನ ಗುಣಮಟ್ಟ ಹಾಗೂ ನಿಯಮಗಳ ಚೌಕಟ್ಟಿಗೆ ಒಳಪಟ್ಟು ಇವುಗಳನ್ನು ತಯಾರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೂ ಓದಿ: ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!

ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?

ಇದೂ ಓದಿ: ಹೋಟೆಲ್‌ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ