ಒಳಗೇನಿದೆ!?

ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಬೆಂಗಳೂರು: ʼತಾಜಾ ತಿಂಡಿ..ʼ – ಈ ಹೋಟೆಲ್‌ ಹೆಸರು ಈಗ ನಿಮ್ಮ ಮನಸಲ್ಲೂ ತಾಜಾ ಆಗಿಯೇ ಇರುತ್ತದೆ. ಏಕೆಂದರೆ, ಕೆಲವು ದಿನಗಳ ಹಿಂದೆ ʼತಾಜಾ ತಿಂಡಿʼ ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಮಾತ್ರವಲ್ಲದೆ, ರಾಷ್ಟ್ರಮಟ್ಟದ ಮಾಧ್ಯಮದಲ್ಲೂ ಸುದ್ದಿಯಾಗಿತ್ತು. ಅಷ್ಟಕ್ಕೂ ʼತಾಜಾ ತಿಂಡಿʼ ಕುರಿತು ಹಾಗೆ ದೊಡ್ಡ ಸುದ್ದಿಯಾಗಲು ಕಾರಣ ಅಲ್ಲಿನ ಶುಚಿ-ರುಚಿಯಾದ ಆಹಾರ ಮತ್ತು ಆ ದರ.

ಹೌದು.. ಅಲ್ಲಿನ ಆ ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼಯ ಕುರಿತು ಅದರ ಮಾಲೀಕರಾದ ಗೋಪಾಡಿ ಶ್ರೀನಿವಾಸ ರಾವ್‌ ಅವರನ್ನು ʼಹೋಟೆಲ್‌ ಕನ್ನಡ.ಕಾಂʼ ಮಾತನಾಡಿಸಿದಾಗ, ಅವರು ಆ ರೇಟಿನ ಕುರಿತು ಮಾತ್ರವಲ್ಲದೆ, ಅದನ್ನು ಕಾಪಾಡಿಕೊಂಡು ಬಂದ ಸೀಕ್ರೇಟಿನ ಬಗ್ಗೆಯೂ ವಿವರಿಸಿದರು.

ʼತಾಜಾ ತಿಂಡಿʼಯ ಆರಂಭ ಹಾಗೂ ಅದನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿರುವುದರ ಹಿಂದೆ ಆಹಾರೋದ್ಯಮದಲ್ಲಿನ ನಾಲ್ಕು ದಶಕಗಳಿಗೂ ಅಧಿಕ ಅನುಭವ ಇದೆ. ಅಷ್ಟೂ ಅನುಭವ ಧಾರೆ ಎರೆದು ʼತಾಜಾ ತಿಂಡಿʼಯ ಶುಚಿ-ರುಚಿ ಕಾಪಾಡಿಕೊಂಡು ಬರುತ್ತಿರುವುದಾಗಿ ಗೋಪಾಡಿಯವರು ತಿಳಿಸಿದರು.

ಸಾರ್ವಕಾಲಿಕ ಆಹಾರ ಇಡ್ಲಿ

ದಕ್ಷಿಣ ಭಾರತದ ಆಹಾರವನ್ನು ಶುದ್ಧ ಹಾಗೂ ಸ್ವಾದಭರಿತವಾಗಿ ನೀಡುವುದಕ್ಕೆ ನಮ್ಮ ಆದ್ಯತೆ ಎಂದ ಅವರು ಆ ಪೈಕಿ ಇಡ್ಲಿ ಸಾರ್ವಕಾಲಿಕ ಹಾಗೂ ಸರ್ವರಿಗೂ ಹಿತ ಎನಿಸುವಂಥ ಆಹಾರ ಎಂದರು. ಮಕ್ಕಳಿಂದ ಹಿರಿಯರವರೆಗೆ ಎಲ್ಲ ವಯಸ್ಸಿನವರೂ ಯಾವ ಸಮಯದಲ್ಲಿ ಬೇಕಾದರೂ ಸೇವಿಸಬಹುದಾದ ಆಹಾರವೆಂದರೆ ಇಡ್ಲಿ ಮಾತ್ರ. ಅದೇ ಕಾರಣಕ್ಕೆ ನಾವು ಬಿಸಿಬಿಸಿಯಾದ ಇಡ್ಲಿ ಜೊತೆಗೆ ವಡೆ, ಮಸಾಲೆದೋಸೆ, ಕೇಸರಿ ಬಾತ್‌, ಕಾರಾ ಬಾತ್‌ ಮುಂತಾದ ತಿನಿಸುಗಳನ್ನೇ ಹೆಚ್ಚಾಗಿ ಮಾಡುತ್ತಿದ್ದೇವೆ ಎಂದು ಹೋಟೆಲ್‌ ಕ್ಷೇತ್ರದ ಕುರಿತು ಹಲವು ಸಂಗತಿಗಳನ್ನು ಶ್ರೀನಿವಾಸ್‌ ರಾವ್‌ ಹಂಚಿಕೊಂಡರು.

ಗ್ರಾಹಕರನ್ನು ಸಂತೃಪ್ತಿ ಪಡಿಸುವುದು ಹೇಗೆ?

ಹೋಟೆಲ್‌ ನಡೆಸುವ ಎಲ್ಲರೂ ಸಾಮಾನ್ಯವಾಗಿ ಬಯಸುವ ಬಹುಮುಖ್ಯ ಸಂಗತಿ ಎಂದರೆ ಗ್ರಾಹಕರ ಸಂತೃಪ್ತಿ. ಅದರ ಕುರಿತು ಶ್ರೀನಿವಾಸ ರಾಯರ ವ್ಯಾಖ್ಯಾನ ಹೀಗಿದೆ. ʼಬರೀ ರುಚಿಯಿಂದಷ್ಟೇ ಗ್ರಾಹಕರನ್ನು ಸಂತೃಪ್ತಿ ಪಡಿಸುತ್ತೇವೆ ಎಂದುಕೊಂಡರೆ ಎಲ್ಲರನ್ನೂ ಸಂತೃಪ್ತಿ ಪಡಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಕರ್ನಾಟಕದಲ್ಲೇ ಕರಾವಳಿ, ಉತ್ತರಕರ್ನಾಟಕ, ಬಯಲುಸೀಮೆ, ಮಂಡ್ಯ-ಮೈಸೂರು.. ಹೀಗೆ ಒಂದೊಂದು ಭಾಗದವರ ಟೇಸ್ಟ್‌ ಒಂದೊಂದು ಥರವಿದೆ. ಆದ್ದರಿಂದ ನಾವು ರುಚಿಯ ಜೊತೆಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಯಾಕಂದರೆ ಯಾವುದೇ ರುಚಿಯವರಾದರೂ, ಯಾವುದೇ ಭಾಗದವರಾದರೂ ಸ್ವಚ್ಛತೆ ಬಯಸುತ್ತಾರೆ. ಸ್ವಚ್ಛತೆ ಕಾಪಾಡುವ ಮೂಲಕ ನಾವು ಗ್ರಾಹಕರ ಸ್ವಾಸ್ಥ್ಯವನ್ನೂ ರಕ್ಷಿಸಿದಂತಾಗುತ್ತದೆʼ.

ಅದ್ಯಾವುದೂ ಅಲ್ಲ, ಇದು ಸರಿಯಾದ ದರ..

ಕೆಲವರು ʼತಾಜಾ ತಿಂಡಿʼಯಲ್ಲಿ ʼಕಡಿಮೆ ದರʼ ಎನ್ನುತ್ತಾರೆ, ಇನ್ನು ಕೆಲವರು ʼತಾಜಾ ತಿಂಡಿʼಯಲ್ಲಿ ʼಕೈಗೆಟುಕುವ ದರʼ ಎನ್ನುತ್ತಾರೆ. ಆದರೆ ಶ್ರೀನಿವಾಸ ರಾಯರು, ʼನಮ್ಮದು ಕಡಿಮೆ ದರವೂ ಅಲ್ಲ, ಕೈಗೆಟುಕುವ ದರವೂ ಅಲ್ಲʼ ಎನ್ನುತ್ತಾರೆ. ʼಹತ್ತು ರೂಪಾಯಿಯ ವಸ್ತುವನ್ನು 9 ರೂಪಾಯಿಗೋ 8 ರೂಪಾಯಿಗೋ ಕೊಟ್ಟರೆ ಅದು ಕಡಿಮೆ ದರ. ನಾವು ಹಾಗೆ ಕಡಿಮೆ ದರದಲ್ಲಿ ಕೊಡುತ್ತಿಲ್ಲ. ಇನ್ನು ಕೈಗೆಟುಕುವ ದರ ಎನ್ನುವುದು ಕೂಡ ಸರಿ ಆಗುವುದಿಲ್ಲ, ಏಕೆಂದರೆ ಒಬ್ಬೊಬ್ಬರ ಅಫೊರ್ಡೆಬಿಲಿಟಿ ಒಂದೊಂದು ಥರ ಇರುತ್ತದೆ. ಹೀಗಾಗಿ ಕಡಿಮೆ ಅಥವಾ ಕೈಗೆಟುಕುವ ಎನ್ನುವ ಬದಲು ನಾವು ಇದನ್ನು ʼಸರಿಯಾದ ದರʼ ಎನ್ನುತ್ತೇವೆʼ ಎಂದು ತಮ್ಮ ಆಹಾರಗಳ ದರದ ಕುರಿತು ಅವರು ಸ್ಪಷ್ಟತೆ ನೀಡಿದರು.

ರೇಟು-ಸೀಕ್ರೇಟು

ಇಡೀ ಹೋಟೆಲ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉತ್ತಮ ಸಾಮಗ್ರಿಗಳನ್ನು ಬಳಸಿಯೇ ಆಹಾರ ತಯಾರಿಸಲಾಗುತ್ತದೆ. ಶುಚಿ-ರುಚಿ, ಕ್ವಾಲಿಟಿ-ಕ್ವಾಂಟಿಟಿ ಯಾವುದರಲ್ಲೂ ರಾಜಿಯೇ ಇಲ್ಲ. ಹೀಗಿದ್ದರೂ ತಿಂಡಿ-ತಿನಿಸುಗಳ ರೇಟು ಹೆಚ್ಚಾಯ್ತು ಎನ್ನುವಂತಿರುವುದಿಲ್ಲವಲ್ಲ ಎಂಬುದರ ಹಿಂದಿನ ಸೀಕ್ರೇಟನ್ನೂ ಶ್ರೀನಿವಾಸರಾಯರು ತಿಳಿಸಿದರು.

ಗೋಪಾಡಿ ಶ್ರೀನಿವಾಸ್‌ ರಾವ್‌, ಮಾಲೀಕರು, ತಾಜಾ ತಿಂಡಿ.

ಕರಾರುವಾಕ್‌ ವಿಧಾನ, ಕಡಿಮೆ ತ್ಯಾಜ್ಯ ಮತ್ತು ಅಧಿಕ ಪ್ರಮಾಣ ನಮ್ಮ ಈ ದರದ ಹಿಂದಿನ ರಹಸ್ಯ. ಮೊದಲನೆಯದಾಗಿ ಆಹಾರ ತಯಾರಿಸುವಾಗ ಏನೇನು ಮಾಡಬೇಕೋ ಅದನ್ನು ನಾವು ಶಿಸ್ತುಬದ್ಧವಾಗಿ ಚಾಚೂತಪ್ಪದೇ ಮಾಡುತ್ತೇವೆ. ಅಡುಗೆಯಲ್ಲಿನ ನಿಗದಿತ ವಿಧಾನವನ್ನು, ಶಿಸ್ತನ್ನು ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ. ಎರಡನೆಯದಾಗಿ ಆಹಾರ ತಯಾರಿ ವೇಳೆ ಯಾವುದೇ ಕಾರಣಕ್ಕೂ ಸಾಮಗ್ರಿಗಳು ಪೋಲಾಗಲು ಬಿಡುವುದಿಲ್ಲ. ಮೂರನೆಯದಾಗಿ ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತೇವೆ. ಇವೆಲ್ಲದರಿಂದ ಬರುವ ಲಾಭವನ್ನು ನಾವು ಇರಿಸಿಕೊಳ್ಳುವ ಬದಲು ಅದನ್ನು ಗ್ರಾಹಕರಿಗೆ ತಲುಪಿಸುತ್ತೇವೆ. ಅದೇ ಕಾರಣಕ್ಕೆ ನಾವು ಆ ದರದಲ್ಲಿ ಗ್ರಾಹಕರಿಗೆ ತಿಂಡಿ-ತಿನಿಸು ಕೊಡಲು ಸಾಧ್ಯವಾಗುತ್ತಿದೆ ಎಂದು ʼತಾಜಾ ತಿಂಡಿʼ ಮಾಲೀಕರು ತಿಳಿಸಿದರು.

ತೂಕ ತಪ್ಪದ ಪಾಕ

ನಮ್ಮಲ್ಲಿ ಒಂದು ಇಡ್ಲಿ ಹೆಚ್ಚೂಕಡಿಮೆ 60 ಗ್ರಾಮ್ಸ್‌ ಇರುತ್ತದೆ, ವಡೆ 45 ಗ್ರಾಮ್ಸ್‌, ಮಸಾಲೆ ದೋಸೆ 140-150 ಗ್ರಾಮ್ಸ್‌, ಕಾಫಿ-ಟೀ 70 ಎಂ.ಎಲ್. ಇರುತ್ತದೆ. ಇವೆಲ್ಲವನ್ನೂ ಯಂತ್ರ ಬಳಸದೆ ಮನುಷ್ಯರೇ ತಯಾರಿಸುವುದರಿಂದ ಒಂಚೂರು ಆಚೀಚೆ ಆಗಬಹುದೇ ಹೊರತು ಎಲ್ಲವೂ ಬಹುತೇಕ ನಿರ್ದಿಷ್ಟ ಅಳತೆಯಲ್ಲೇ ಇರುತ್ತವೆ. ನಾವು ಆ ದರದಲ್ಲಿ ಆಹಾರ ಕೊಡಲು ಇದು ಕೂಡ ಒಂದು ಪ್ರಮುಖ ಕಾರಣ ಎಂದರು ಶ್ರೀನಿವಾಸ್‌ ರಾವ್.

ಡಬ್ಬಿ-ಪಾತ್ರೆ ತಂದರೆ ಮಾತ್ರ ಪಾರ್ಸೆಲ್‌

ಆಹಾರದ ವಿಚಾರದಲ್ಲಿ ಗ್ರಾಹಕರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸುವ ಶ್ರೀನಿವಾಸ ರಾಯರಿಗೆ ಪರಿಸರ ಕಾಳಜಿಯೂ ಅಷ್ಟೇ ಇದೆ. ಹೀಗಾಗಿ ತಾವು ಯಾವುದೇ ಕಾರಣಕ್ಕೂ ಪೊಟ್ಟಣ ಕಟ್ಟಿ ಆಹಾರ ನೀಡುವುದಿಲ್ಲ. ಡಬ್ಬಿ ಇಲ್ಲವೇ ಪಾತ್ರೆ ತಂದರೆ ಮಾತ್ರ ಪಾರ್ಸೆಲ್‌ ಕೊಡುತ್ತೇವೆ ಎನ್ನುತ್ತಾರೆ. ಪಾರ್ಸೆಲ್‌ ಕೊಡಲು ಆರಂಭಿಸಿದರೆ ಪ್ಲ್ಯಾಸ್ಟಿಕ್‌ ಬಳಸಬೇಕಾಗುತ್ತದೆ, ಅದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ ಪರಿಸರಕ್ಕೂ ಮಾರಕ. ಆದ್ದರಿಂದ ನಾವು ಪಾರ್ಸೆಲ್‌ ನೀಡುತ್ತಿಲ್ಲ. ಕರೊನಾದಂಥ ಸಮಯದಲ್ಲಿ ಎಲ್ಲರೂ ಪಾರ್ಸೆಲ್‌ ನೀಡುತಿದ್ದರೂ ನಾವು ಡಬ್ಬಿ-ಪಾತ್ರೆ ತಂದವರಿಗಷ್ಟೇ ಕೊಟ್ಟಿದ್ದೇವೆ ಹೊರತು ಪೊಟ್ಟಣ ಕಟ್ಟಿ ಕೊಟ್ಟಿಲ್ಲ. ಪಾರ್ಸೆಲ್‌ ಕೊಡಬಾರದು ಎಂಬ ಕಾರಣಕ್ಕೆ ನಾವು ಆನ್‌ಲೈನ್‌ ಬುಕಿಂಗ್‌ ಪಡೆಯುತ್ತಿಲ್ಲ. ಪಾರ್ಸೆಲ್‌ ನೀಡಲು ಆರಂಭಿಸಿದರೆ ನಾವು ಇನ್ನೂ ಹೆಚ್ಚು ವ್ಯಾಪಾರ ಮಾಡಬಹುದಾದರೂ ಅಂಥ ವ್ಯವಹಾರದ ಬಗ್ಗೆ ನಮಗೆ ಆಸಕ್ತಿ ಇಲ್ಲ ಎನ್ನುತ್ತಾರೆ.

ಕಾಸ್ಟ್‌ ಕಟಿಂಗ್‌ ಎಂದರೆ ಬರೀ ಹಣ ಉಳಿಸೋದಲ್ಲ..

ಆಗಲೇ ಹೇಳಿದಂತೆ ನಾವು ಏನನ್ನೂ ಪೋಲು ಮಾಡುವುದಿಲ್ಲ, ಎಲ್ಲೆಲ್ಲಿ ಏನೆಲ್ಲ ಉಳಿಸಬಹುದೋ ಅವೆಲ್ಲವನ್ನೂ ಸಾಧ್ಯವಾದಷ್ಟೂ ಉಳಿಸುತ್ತೇವೆ. ಕಾಸ್ಟ್‌ ಕಟಿಂಗ್‌ ಎಂದರೆ ಹಲವರು ಬರೀ ಹಣ ಉಳಿಸುವುದು ಎಂದುಕೊಂಡಿದ್ದಾರೆ. ನಮ್ಮ ಪ್ರಕಾರ ಕಾಸ್ಟ್‌ ಕಟಿಂಗ್‌ ಎಂದರೆ ಹಣ ಉಳಿಸುವುದಷ್ಟೇ ಅಲ್ಲ. ನೋಡಿ.. ನಾವು ಕಡಿಮೆ ನೀರು ಖರ್ಚು ಮಾಡುತ್ತಿದ್ದೇವೆ, ನೀರು ಉಳಿಸುವುದು ಎಂದರೆ ಪ್ರಾಣ ಉಳಿಸಿದಂತೆ. ಅಡುಗೆ ಅನಿಲವನ್ನು ಸರಿಯಾಗಿ ಬಳಸುವ ಮೂಲಕ ನಾವು ಎಲ್‌ಪಿಜಿ ಉಳಿಸುತ್ತಿದ್ದೇವೆ. ಇದು ದೇಶದ ಆರ್ಥಿಕತೆಗೆ ಕೊಡುಗೆ ಕೊಟ್ಟ ಹಾಗೆ. ಶೇ.10ರಷ್ಟು ಗ್ಯಾಸ್‌ ಉಳಿಸಿದರೂ ಅಷ್ಟರಮಟ್ಟಿಗೆ ಆಮದು ತಗ್ಗಿಸಿದಂತಾಗಿದೆ, ಆ ಮೂಲಕ ದೇಶಕ್ಕೆ ಹೊರೆ ಕಡಿಮೆ ಆಗಿಸಿದಂತಾಗುತ್ತದೆ ಎಂದರು ಶ್ರೀನಿವಾಸ್‌ ರಾವ್.

ತಾಜಾ ತಿಂಡಿಯ ಸ್ವಚ್ಛ ಅಡುಗೆ ಸ್ಥಳ
ಎರಡು ಶಾಖೆಗಳು

ಬೆಂಗಳೂರಿನಲ್ಲಿ ತಾಜಾ ತಿಂಡಿಯ ಎರಡು ಶಾಖೆಗಳಿವೆ. ಜಯನಗರ 4ನೇ ಟಿ ಬ್ಲಾಕ್‌ನ 26ನೇ ಮುಖ್ಯರಸ್ತೆ ಹಾಗೂ ಬನಶಂಕರಿ 3ನೇ ಹಂತದ ಡಾ.ಪುನೀತ್‌ ರಾಜಕುಮಾರ್‌ ರಸ್ತೆಯಲ್ಲಿ ತಾಜಾ ತಿಂಡಿ ಹೋಟೆಲ್‌ಗಳಿವೆ. ಎರಡೂ ಕಡೆ ಅದೇ ಶುಚಿ-ರುಚಿ ಹಾಗೂ ದರವಿದೆ.

ಇದೂ ಓದಿ: ಹೋಟೆಲ್‌ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ

ಇದೂ ಓದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಇದೂ ಓದಿ: ಹೋಟೆಲ್‌ ಓನರ್‌ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ