ಒಳಗೇನಿದೆ!?

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಗಡುವು ವಿಸ್ತರಿಸಲು ಬೆಂಗಳೂರು ಹೋಟೆಲುಗಳ ಸಂಘದ ಆಗ್ರಹ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಪಾವತಿಯ ಗಡುವನ್ನು ವಿಸ್ತರಿಸುವಂತೆ ಎಲ್ಲೆಡೆಯಿಂದ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಈಗಾಗಲೇ ಒತ್ತಾಯಿಸಿದ್ದು, ಇದೀಗ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ಕೂಡ ಆಗ್ರಹ ವ್ಯಕ್ತಪಡಿಸಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗಿರುವ ಒನ್‌ ಟೈಮ್‌ ಸೆಟಲ್‌ಮೆಂಟ್‌ (ಒಟಿಎಸ್‌) ವ್ಯವಸ್ಥೆ ಜುಲೈ 31ರಂದು ಮುಗಿಯಲಿದ್ದು, ಅದನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್‌ ಆಗ್ರಹಿಸಿದ್ದಾರೆ.

ʼಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆ (One Time Settlement – OTS) ಜಾರಿಗೊಳಿಸಲಾಗಿದ್ದು, ಆಸ್ತಿ ತೆರಿಗೆ ಬಾಕಿ ಮೇಲೆ ಪಾವತಿಸಬೇಕಾದ ಬಡ್ಡಿ ಸಂಪೂರ್ಣ ಮನ್ನಾ ಮಾಡಿರುವುದು ಹಾಗೂ ದಂಡದ ಮೊತ್ತ ಶೇ.50ರಷ್ಟು ಇಳಿಸಿ ಜುಲೈ 31ರವರೆಗೆ ಕಾಲಾವಕಾಶ ನೀಡಿರುವುದು ಸ್ವಾಗತಾರ್ಹ. ಇದರಿಂದ ಹೆಚ್ಚಿನ ಹೊಟೇಲು ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಪಿ.ಸಿ. ರಾವ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʼಹೀಗಿದ್ದರೂ ಹಲವು ಹೊಟೇಲುಗಳಲ್ಲಿ ಕಟ್ಟಡದ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತದ ನಿರ್ಣಯ ತೆಗೆದುಕೊಳ್ಳಲು ತಡವಾಗುತ್ತಿದೆ. ಇದರ ಜೊತೆಗೆ ಬಹಳಷ್ಟು ಕಟ್ಟಡ ಮಾಲೀಕರಿಗೆ ತೆರಿಗೆ ಪಾವತಿಸಲು ತಕ್ಷಣ ಹಣದ ವ್ಯವಸ್ಥೆ ಮಾಡಿಕೊಳ್ಳಲು ತೊಂದರೆ ಆಗುತ್ತಿದೆ. ಈ ಕಾರಣದಿಂದ ತಾವು ಜಾರಿಗೊಳಿಸಿರುವ ಒಟಿಎಸ್‌ ಯೋಜನೆಯ ಅವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಬೇಕಾಗಿ ಕೇಳಿಕೊಳ್ಳುತ್ತೇವೆʼ ಎಂದು ಪಿ.ಸಿ.ರಾವ್‌ ಮನವಿ ಮಾಡಿಕೊಂಡಿದ್ದಾರೆ.

ʼಗಡುವು ವಿಸ್ತರಣೆ ಮಾಡುವುದರಿಂದ ಇನ್ನೂ ತೆರಿಗೆ ಪಾವತಿಸದೇ ಇರುವ ಬಹಳಷ್ಟು ಜನರು ಅದರ ಸದುಪಯೋಗ ಪಡೆದುಕೊಳ್ಳಬಹುದು ಹಾಗೂ ಮುಂದಿನ ಸಾಲಿನಿಂದ ಕ್ರಮಬದ್ಧವಾಗಿ ಪಾವತಿಸಲು ಅನುಕೂಲವಾಗಲಿದೆ. ಇದಲ್ಲದೆ ಬಿಬಿಎಂಪಿಗೆ ಹೆಚ್ಚಿನ ತೆರಿಗೆ ಕೂಡ ಸಂಗ್ರಹವಾಗಲಿದೆʼ ಎಂದು ಅಭಿಪ್ರಾಯಪಟ್ಟಿರುವ ಪಿ.ಸಿ.ರಾವ್‌, ʼಆಗಸ್ಟ್ 31ರವರೆಗೆ ಅವಧಿ ವಿಸ್ತರಿಸುವ ಮೂಲಕ ಬೆಂಗಳೂರು ನಗರದ ಮತ್ತಷ್ಟು ಫಲಾನುಭವಿಗಳಿಗೆ ಸಹಕರಿಸಿʼ ಎಂಬುದಾಗಿ ವಿನಂತಿಸಿಕೊಂಡಿದ್ದಾರೆ.

ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್

ಇದೂ ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮನವಿ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ಹೋಟೆಲ್‌ ಓನರ್‌ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ