ಮೈಸೂರು: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ರಿ.) ಇದರ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ, ʼಸ್ವಾತಿ ಗ್ರೂಪ್ʼನ ಜಿ.ಕೆ. ಶೆಟ್ಟಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರಲಾರಂಭಿಸಿದೆ.
ಬೆಂಗಳೂರು ಹೋಟೆಲುಗಳ ಸಂಘವು ಬುಧವಾರ ಜಿ.ಕೆ. ಶೆಟ್ಟಿ ಅವರನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಂಘದ ಕಾರ್ಯಕಾರಿ ಸಮಿತಿ ಸಭೆ ಸಂದರ್ಭ ಅನೌಪಚಾರಿಕವಾಗಿ ಸನ್ಮಾನಿಸಿದ್ದು, ಅದೇ ದಿನ ಮೈಸೂರಿನಲ್ಲೂ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ, ಉಪಾಧ್ಯಕ್ಷರಾದ ಮಧುಕರ್ ಎಂ. ಶೆಟ್ಟಿ, ರವಿಶಾಸ್ತ್ರಿ ಅವರನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಜಿ.ಕೆ. ಶೆಟ್ಟಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ನಾರಾಯಣ ಗೌಡರು, ʼತಮ್ಮ ಅವಧಿಯಲ್ಲಿ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಇನ್ನಷ್ಟು ಉನ್ನತಿ ಕಾಣಲಿ, ಹೋಟೆಲೋದ್ಯಮಿಗಳಿಗೆ ಮತ್ತಷ್ಟು ಅನುಕೂಲಗಳು ಆಗಲಿʼ ಎಂದು ಜಿ.ಕೆ. ಶೆಟ್ಟಿ ಅವರಿಗೆ ಶುಭ ಹಾರೈಸಿದರು.
ʼಮೈಸೂರು ಹೋಟೆಲ್ ಮಾಲೀಕರ ಸಂಘವು ಅತ್ಯಂತ ಹಳೆಯ ಜಿಲ್ಲಾ ಹೋಟೆಲ್ ಸಂಘಗಳಲ್ಲಿ ಒಂದಾಗಿದ್ದು, ರಾಜ್ಯ ಹೋಟೆಲುಗಳ ಸಂಘದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಾತ್ರವಲ್ಲದೆ, ಸರ್ಕಾರಿ ಇಲಾಖೆಗಳಲ್ಲಿ ಉತ್ತಮ ಸಂಪರ್ಕವನ್ನೂ ಹೊಂದಿದೆ. ಈ ಸಂಘವು ಶಕ್ತಿಶಾಲಿ ಆಗಿರುವುದರಿಂದ ಸಂಘದ ಸದಸ್ಯರಾಗಿರುವ ಹೋಟೆಲ್ ಮಾಲೀಕರಿಗೆ ಯಾರೂ ತೊಂದರೆ ಕೊಡುತ್ತಿಲ್ಲ. ಅಲ್ಲದೆ ಈ ಸಂಘವು ಎಲ್ಲ ವರ್ಗದವರಿಗೂ ಸಹಾಯ ಮಾಡುತ್ತಿದೆʼ ಎಂದು ಜಿ.ಕೆ. ಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೈಸೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮಾತ್ರವಲ್ಲದೆ, ಮಾಜಿ ಅಧ್ಯಕ್ಷರಾದ ಎಂ. ರಾಜೇಂದ್ರ, ಸುಧಾಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಚಾಮುಂಡೇಶ್ವರಿಯ ದರ್ಶನ
ಮೈಸೂರಿಗೆ ಆಗಮಿಸಿದ್ದ ಜಿ.ಕೆ.ಶೆಟ್ಟಿ ಅವರು ಮೈಸೂರು ಹೋಟೆಲ್ ಮಾಲೀಕರ ಸಂಘದ ಸದಸ್ಯರೊಂದಿಗೆ ಗುರುವಾರ ಬೆಳಗ್ಗೆ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೆಎಸ್‌ಎಚ್‌ಎ ಮತ್ತು ಹೋಟೆಲಿಗರ ಪರವಾಗಿ ಪ್ರಾರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಕೆಎಸ್‌ಎಚ್‌ಎ ಉಪಾಧ್ಯಕ್ಷ ಮಧುಕರ್ ಶೆಟ್ಟಿ, ಕೆಪಿಎಚ್‌ಆರ್‌ಎ ಮಾಜಿ ಅಧ್ಯಕ್ಷ ಎಂ.ರಾಜೇಂದ್ರ, ಹೋಟೆಲ್ ಉದ್ಯಮಿಗಳಾದ ಸುಬ್ರಹ್ಮಣ್ಯ ತಂತ್ರಿ, ಕೆ. ಪ್ರಕಾಶ ಶೆಟ್ಟಿ, ಉಗ್ರಯ್ಯ, ಕೆ. ಭಾಸ್ಕರ್ ಶೆಟ್ಟಿ, ಸತೀಶ್ ಪಾಂಡುರಂಗ, ಪ್ರಭಾಕರ್ ಮತ್ತಿತರರು ಜೊತೆಗಿದ್ದರು.
ಬಳಿಕ ಎಲ್ಲರೂ ಜೊತೆಯಾಗಿ ಮೈಸೂರಿನ ಕೆ.ಸಿ. ಬಡಾವಣೆಯಲ್ಲಿ ಇರುವ ಚಂದ್ರು ಅವರ ಮಾಲೀಕತ್ವದ ʼಹಳ್ಳಿ ಹಟ್ಟಿʼಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು. ಹೋಟೆಲ್‌ನ ಚಿಬಲು ಇಡ್ಲಿ, ಬೆಲ್ಲದ ಕೇಸರಿಬಾತ್ ಮತ್ತಿತರ ಆಹಾರ ಸೇವಿಸಿ ಮೆಚ್ಚುಗೆಯನ್ನೂ ಸೂಚಿಸಿ ಶುಭ ಹಾರೈಸಿದರು.
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮನವಿ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?