ಬೆಂಗಳೂರು: ಎಪ್ಪತ್ತು ವರ್ಷಗಳ ಇತಿಹಾಸ ಇರುವ ʼಕರ್ನಾಟಕ ರಾಜ್ಯ ಹೋಟೆಲುಗಳ ಸಂಘʼದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ, ʼಸ್ವಾತಿ ಗ್ರೂಪ್ʼನ ಜಿ.ಕೆ. ಶೆಟ್ಟಿ ಅವರಿಗೆ ʼಕರ್ನಾಟಕ ರಕ್ಷಣಾ ವೇದಿಕೆʼಯ ಬೆಂಬಲ, ಸಹಕಾರ ಹಾಗೂ ಪ್ರೋತ್ಸಾಹಗಳು ಲಭಿಸಿವೆ.
ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷರಾಗಿ ಜಿ.ಕೆ. ಶೆಟ್ಟಿ ಅವರ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಆಗುತ್ತಿದ್ದಂತೆ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು, ಹೋಟೆಲ್ ಕ್ಷೇತ್ರದ ಸಂಘಗಳಿಂದ ಸರಣಿ ಸನ್ಮಾನಗಳು ನಡೆಯಲಾರಂಭಿಸಿವೆ.
ಪ್ರಪ್ರಥಮವಾಗಿ ʼಬೆಂಗಳೂರು ಹೋಟೆಲುಗಳ ಸಂಘʼದವರು ಅವರನ್ನು ಸನ್ಮಾನಿಸಿ ಗೌರವಿಸಿದರು. ಅದರ ಬೆನ್ನಿಗೇ ʼಮೈಸೂರು ಹೋಟೆಲ್ ಮಾಲೀಕರ ಸಂಘʼದವರೂ ಜಿ.ಕೆ.ಶೆಟ್ಟಿ ಅವರನ್ನು ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಇದೀಗ ʼಕರ್ನಾಟಕ ರಕ್ಷಣಾ ವೇದಿಕೆʼಯಿಂದಲೂ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿರುವ ʼಕರ್ನಾಟಕ ರಾಜ್ಯ ಹೋಟೆಲುಗಳ ಸಂಘʼದ ಕಚೇರಿಗೆ ಶುಕ್ರವಾರ ಆಗಮಿಸಿದ್ದ ʼಕರ್ನಾಟಕ ರಕ್ಷಣಾ ವೇದಿಕೆʼ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಹಾಗೂ ʼಕರ್ನಾಟಕ ರಕ್ಷಣಾ ವೇದಿಕೆʼ ಬೆಂಗಳೂರು ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಟ್ಟಿ ಅವರು ಕೆಎಸ್‌ಎಚ್‌ಎ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಅವರು ಸಂಘದ ಖಜಾಂಚಿ ಎಂ.ವಿ. ರಾಘವೇಂದ್ರ ರಾವ್ ಅವರನ್ನೂ ಅಭಿನಂದಿಸಿ ಸನ್ಮಾನಿಸಿದರು.
ಸುದೀರ್ಘ ಇತಿಹಾಸ ಇರುವ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘಕ್ಕೆ ಇದೇ ಮೊದಲ ಸಲ ಬಂಟ್ಸ್ ಸಮುದಾಯದವರು ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ತುಂಬಾ ಸಂತೋಷದ ಸಂಗತಿ. ರಾಜ್ಯದ ಎಲ್ಲ ಕಡೆ, ಎಲ್ಲ ಕ್ಷೇತ್ರದಲ್ಲೂ ಇರುವ ಬಂಟರ ಸಮುದಾಯಕ್ಕೆ ಕೆಎಸ್‌ಎಚ್‌ಎ ಚುಕ್ಕಾಣಿ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಅಲ್ಲದೆ, ಜಿ.ಕೆ. ಶೆಟ್ಟಿಯವರು ಸರ್ವ ಸಮುದಾಯದವರ ಜೊತೆ ಸಾಮರಸ್ಯ ಹೊಂದಿದ್ದು, ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲ ಸಮರ್ಥ ವ್ಯಕ್ತಿ. ಅವರ ನೇತೃತ್ವದಲ್ಲಿ ಕೆಎಸ್‌ಎಚ್‌ಎ ಇನ್ನಷ್ಟು ಬೆಳೆಯಲಿ, ಹೋಟೆಲ್ ಉದ್ಯಮವೂ ಮತ್ತಷ್ಟು ಬೆಳಗಲಿ ಎಂದು ಹಾರೈಸುತ್ತಿದ್ದೇನೆ.
| ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.
“ನಾವು ʼಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ʼ ರಚನೆ ಮಾಡಿದ್ದಾಗ ನಮಗೆ ಹೋಟೆಲ್ ಸಂಘದವರು ಹಾಗೂ ಹೋಟೆಲಿಗರು ಸಾಕಷ್ಟು ಬೆಂಬಲ ನೀಡಿದ್ದರು. ಹಾಗೆಯೇ ಹೋಟೆಲಿಗರ ಹೋರಾಟದ ಸಂದರ್ಭದಲ್ಲೂ ನಾವು ಸಹಾಯ ಮಾಡಿದ್ದೆವು. ಹೋಟೆಲ್‌ನವರಿಗೆ ಸಮಸ್ಯೆಯಾದಾಗ ಅರ್ಧರಾತ್ರಿಯಲ್ಲೂ ಸ್ಪಂದಿಸಿದ್ದೆವು, ಇನ್ನುಮುಂದೆಯೂ ಹೋಟೆಲಿಗರಿಗೆ ಏನಾದರೂ ಸಮಸ್ಯೆ ಆದಾಗ ಹಗಲು-ರಾತ್ರಿ ಎನ್ನದೆ ನೆರವಿಗೆ ಬರಲು ಕರವೇ ಸಿದ್ಧವಿದೆ. ಹೋಟೆಲ್ ಕ್ಷೇತ್ರದ ಹಿತಾಸಕ್ತಿಗಾಗಿ ಕೆಎಸ್‌ಎಚ್‌ಎ ಕೈಗೊಳ್ಳುವ ಕಾರ್ಯಕ್ರಮಗಳಿಗೆ ತಮ್ಮ ಕಡೆಯಿಂದ ಎಲ್ಲ ಸಹಕಾರ-ಪ್ರೋತ್ಸಾಹ ಇರಲಿದೆ” ಎಂದು ಪ್ರವೀಣ್ ಕುಮಾರ್ ಶೆಟ್ಟಿ ಅವರು ಬೆಂಬಲ ವ್ಯಕ್ತಪಡಿಸಿದರು.
ʼಹೋಟೆಲಿಗರು ಕರ್ನಾಟಕ ಹಾಗೂ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವಂತಾಗಲಿ. ಕೆಎಸ್‌ಎಚ್‌ಎ ಮತ್ತು ಹೋಟೆಲಿಗರಿಂದ ಕನ್ನಡದ ಕಾರ್ಯಕ್ರಮಗಳು ನಡೆಯುವಂತಾಗಲಿ. ಹೋಟೆಲ್‌ಗಳಲ್ಲಿ ಕನ್ನಡಿಗರಿಗೇ ಹೆಚ್ಚಿನ ಉದ್ಯೋಗಾವಕಾಶ ಸಿಗುವಂತಾಗಲಿʼ ಎಂದು ಪ್ರವೀಣ್ ಕುಮಾರ್ ಶೆಟ್ಟಿಯವರು ಆಶಯ ವ್ಯಕ್ತಪಡಿಸಿದರು.
ಇದೂ ಓದಿ: ಕೆಎಸ್‌ಎಚ್‌ಎ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ಸನ್ಮಾನ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!