ಇಡ್ಲಿ-ವಡೆ, ಕೇಸರಿಬಾತ್-ಕಾರಾಬಾತ್, ದೋಸೆ, ರೈಸ್‌ಬಾತ್.. ಎಂದು ಹೋಟೆಲ್ ಮೆನುನಲ್ಲಿ ಇರುವ ವಿವಿಧ ತಿನಿಸುಗಳಂತೆ ಹೋಟೆಲ್ ಕ್ಷೇತ್ರದ ಸಮಸ್ಯೆಗಳು, ದರ ನಿಗದಿಗೆ ಮಾನದಂಡ, ಕಾರ್ಮಿಕರ ಅಭಾವ, ಉದ್ಯಮದಲ್ಲಿನ ಸ್ಪರ್ಧೆ, ತಂತ್ರಜ್ಞಾನದ ಬಳಕೆ, ಹೋಟೆಲ್ ಮ್ಯಾನೇಜ್‌ಮೆಂಟ್, ಉದ್ಯಮಿಗಳಲ್ಲಿ ಜಾಗೃತಿ ಮುಂತಾದ ಹಲವು ವಿಚಾರಗಳ ಕುರಿತು ಒಂದೇ ಸಿಟ್ಟಿಂಗ್‌ನಲ್ಲಿ ಮಾತನಾಡಿದವರು ಖ್ಯಾತ ಹೋಟೆಲೋದ್ಯಮಿ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳರು.
ʼಬೆಂಗಳೂರು ಹೋಟೆಲುಗಳ ಸಂಘʼದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ʼಹೋಟೆಲ್ ಕನ್ನಡ.ಕಾಂʼ ನಡೆಸಿದ ಸಂದರ್ಶನದಲ್ಲಿ ʼಉಡುಪಿ ಶ್ರೀ ಕೃಷ್ಣ ಭವನʼದ ಮಾಲೀಕರಾದ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಅವರು ಈ ಎಲ್ಲ ವಿಚಾರಗಳನ್ನು ಹಂಚಿಕೊಂಡರು.
ʼಇನ್ನು ಒಂದು ವರ್ಷದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆʼ ಎನ್ನುತ್ತಲೇ ಮಾತಿಗಾರಂಭಿಸಿದ ಅವರು, ಹಲವು ಸಂಗತಿಗಳ ಬಗ್ಗೆ ತಮ್ಮ ಸ್ಪಷ್ಟ ಕಲ್ಪನೆಗಳನ್ನು ಬಹಿರಂಗಪಡಿಸಿದರು. ʼಹೋಟೆಲ್ ಉದ್ಯಮದವರಿಗೆ ಸಾಕಷ್ಟು ಸಮಸ್ಯೆಗಳಿವೆʼ ಎಂಬುದರಿಂದ ಹಿಡಿದು, ʼಸಮಸ್ಯೆ ಬಂದರೆ ನಾವಿದ್ದೇವೆʼ ಎನ್ನುವವರೆಗೆ ಹೋಟೆಲೋದ್ಯಮದ ಕುರಿತು ತಮ್ಮ ಸುದೀರ್ಘ ಅನುಭವದ ಆಲೋಚನೆಗಳನ್ನು ಅನಾವರಣಗೊಳಿಸಿದರು.
ʼಸಂಘಕ್ಕೆ ಒಂದು ಸ್ವಂತ ಕಚೇರಿ ಮಾಡಬೇಕು, ಸಂಘದ್ದೇ ಒಂದು ಜಾಗವಿದೆ, ಅದರ ಸದ್ಬಳಕೆಗೆ ಒಂದು ದಾರಿ ಆಗಬೇಕುʼ ಎನ್ನುತ್ತ ಹೋಟೆಲ್ ಉದ್ಯಮವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿದರು. ʼಉದ್ಯಮದಲ್ಲಿ ಸಾಕಷ್ಟು ತಾಪತ್ರಯಗಳಿವೆ, ಅವುಗಳಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರವಿದೆ, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಜಾರಿಯಲ್ಲಿದೆʼ ಎಂದರು.
ʼಕಸ ವಿಲೇವಾರಿ, ಫುಟ್‌ಪಾತ್ ವ್ಯಾಪಾರ, ದರ ನಿಗದಿ ಮಾನದಂಡ, ಉದ್ಯಮದಲ್ಲಿನ ಸ್ಪರ್ಧೆ ಹೋಟೆಲ್ ಕ್ಷೇತ್ರವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಾಗಿದ್ದು, ಆ ಕುರಿತು ಹೋಟೆಲ್‌ನವರನ್ನು ಜಾಗೃತಿಗೊಳಿಸಬೇಕಾದ ಅಗತ್ಯವೂ ಇದೆ. ನಾವು ಫುಟ್‌ಪಾತ್ ವ್ಯಾಪಾರಿಗಳನ್ನು ನೋಡಿ ದರ ನಿಗದಿ ಮಾಡಬಾರದು, ದರ ನಿಗದಿಗೆ ನಮಗೆ ಅವರು ಮಾನದಂಡ ಆಗಬಾರದು, ಆ ಕುರಿತು ಹೋಟೆಲಿಗರಿಗೆ ತಿಳಿ ಹೇಳಬೇಕು, ಕೆಲವರಿಗೆ ಅದು ಅರ್ಥವಾಗುತ್ತದೆ, ಇನ್ನು ಕೆಲವರಿಗೆ ನಾವು ಹೇಳುತ್ತಿದ್ದರೆ ಕ್ರಮೇಣ ಅರ್ಥವಾಗುತ್ತದೆ, ನಾವು ಆ ಪ್ರಯತ್ನ ಮಾಡಬೇಕು, ಮಾಡುತ್ತಿದ್ದೇವೆʼ ಎಂದರು.
ತೆರೆದಿದ್ದಷ್ಟೇ ಗೊತ್ತಾಗುತ್ತಿದೆ, ಮುಚ್ಚಿದ್ದು ಗೊತ್ತಾಗ್ತಿಲ್ಲ..
ʼಹೋಟೆಲ್ ಕ್ಷೇತ್ರದಲ್ಲಿ ನಾನಾ ಥರದ ಕಾಂಪಿಟಿಷನ್ ಇದೆ. ಈಗ ವೆಜ್ ಹೋಟೆಲ್‌ನವರಿಗೆ ನಾನ್ ವೆಜ್‌ನವರೂ ಕಾಂಪಿಟಿಷನ್ ಆಗಿದ್ದಾರೆ. ಯಾಕಂದರೆ ಅವರೂ ಚೀಪ್ ರೇಟಲ್ಲಿ ಕೊಡುತ್ತಿದ್ದಾರೆ. ವೆಜ್‌ನವರಿಗೆ ಅದೂ ಏಟೇ. ಮತ್ತೊಂದೆಡೆ ಹೋಟೆಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ, ವ್ಯಾಪಾರ ಹಂಚಿ ಹೋಗುತ್ತಿದೆ. ಈಗ ಹೊಸದಾಗಿ ಹೋಟೆಲ್ ತೆರೆಯುವವರು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದಾರೆ, ಹೀಗಾಗಿ ಹೋಟೆಲ್‌ಗಳು ತೆರೆದಿದ್ದಷ್ಟೇ ಗೊತ್ತಾಗುತ್ತಿದೆ, ಅವುಗಳಲ್ಲಿ ಎಷ್ಟೋ ಹೋಟೆಲ್‌ಗಳು ಮುಚ್ಚಿಹೋಗುತ್ತಿವೆ, ಅದು ಬಹಳಷ್ಟು ಮಂದಿಗೆ ಗೊತ್ತಾಗುತ್ತಿಲ್ಲʼ ಎಂದರು.
ಟೆಕ್ನಾಲಜಿ ಅಂದ್ರೆ ಹೇಗೆ?
ಹೋಟೆಲ್‌ನಲ್ಲಿ ತಂತ್ರಜ್ಞಾನ ಬಳಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊಳ್ಳರು, ʼಟೆಕ್ನಾಲಜಿ ಅಂದ್ರೆ ಹೇಗೆ? ಇದೊಂದು ದೊಡ್ಡ ಪ್ರಶ್ನೆʼ ಎಂದರು. ʼಕೆಲವೆಡೆ ಕೆಲಸಕ್ಕೆ ರೋಬೋ ಬಂದಿದೆ, ಅವೆಲ್ಲ ಎರಡು ದಿನ ನಡೆಯುತ್ತದೆ ಅಷ್ಟೇ. ಅಷ್ಟಕ್ಕೂ ಅಡುಗೆ ಮಾಡುವುದಕ್ಕೆ ಟೆಕ್ನಾಲಜಿ ಬರಲು ಸಾಧ್ಯವಿಲ್ಲ. ಯಾಕಂದ್ರೆ, ಇಲ್ಲಿ ಏನೇ ಮಾಡಿದರೂ ಅದಕ್ಕೆ ಮನುಷ್ಯನ ಕೈ ಸ್ಪರ್ಶ ಇರಬೇಕು, ಇಲ್ಲಂದ್ರೆ ಆ ರುಚಿ ಬರುವುದಿಲ್ಲ. ಬಿಲ್ಲಿಂಗ್‌ನಲ್ಲಿ, ಸ್ಟೋರ್‌ನಲ್ಲಿ ಅಳವಡಿಸುವಂಥ ಟೆಕ್ನಾಲಜಿಗಳು ಬಂದಿವೆ, ಅದನ್ನು ತುಂಬಾ ಮಂದಿ ಅಳವಡಿಸಿಕೊಂಡಿಲ್ಲ, ಅದನ್ನು ಅಳವಡಿಸಿಕೊಳ್ಳಿ ಎಂದು ಹೇಳುತ್ತಿದ್ದೇವೆʼ ಎಂದರು. ಈ ಮೂಲಕ ತಂತ್ರಜ್ಞಾನವನ್ನು ಎಲ್ಲಿ ಅಳವಡಿಸಿಕೊಂಡರಷ್ಟೇ ಉತ್ತಮ ಎನ್ನುವುದನ್ನು ಸೂಚ್ಯವಾಗಿ ಹೇಳಿದರು.
ಮ್ಯಾನ್ ಮ್ಯಾನೇಜ್‌ಮೆಂಟ್ ಒಂದು ಆರ್ಟ್
ʼಹೋಟೆಲ್ ಮ್ಯಾನೇಜ್‌ಮೆಂಟ್ ಕಲಿಯಲು ವಿದ್ಯಾರ್ಥಿಗಳು ಬರುತ್ತಿಲ್ಲʼ ಎಂಬ ವರದಿಯೊಂದು ಇತ್ತೀಚೆಗೆ ಪ್ರಕಟವಾಗಿತ್ತು ಎಂಬ ಪ್ರಶ್ನೆಗೆ ಅವರು, ʼಹೋಟೆಲ್ ಮ್ಯಾನೇಜ್‌ಮೆಂಟ್‌ಗಿಂತಲೂ ಮ್ಯಾನ್ ಮ್ಯಾನೇಜ್‌ಮೆಂಟ್ ಅತಿಮುಖ್ಯʼ ಎಂದರು. ಅದರಲ್ಲೂ ಹೋಟೆಲ್ ಮ್ಯಾನೇಜ್‌ಮೆಂಟ್ ಕಲಿತು, ಅದನ್ನು ಇಲ್ಲಿ ಇಂಪ್ಲಿಮೆಂಟ್ ಮಾಡಲು ಆಗಲ್ಲ. ʼನೀನು ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡಲ್ವಾ?ʼ ಅಂತ ನನಗೆ ಯಾರೋ ಕೇಳಿದ್ದರು. ಆದರೆ ನನ್ನ ಪ್ರಕಾರ ಮ್ಯಾನ್ ಮ್ಯಾನೇಜ್‌ಮೆಂಟ್ ಈಸ್ ಆರ್ಟ್, ನೂರಾರು ಜನರನ್ನು ನಿಭಾಯಿಸುವ ಸಾಮರ್ಥ್ಯ ಬರಬೇಕು, ಜನರ ಜೊತೆ ಸಂಪರ್ಕ ಇಟ್ಟುಕೊಂಡು, ಅರ್ಥ ಮಾಡಿಕೊಂಡು ಮುಂದೇನು ಅಂತ ಅಂದಾಜಿಸುವುದು ಒಂದು ಕಲೆ, ಅದು ಎಲ್ಲರಿಗೂ ಬರುವುದಿಲ್ಲ, ಅದು ಫೀಲ್ಡ್‌ನಲ್ಲಿ ಇದ್ದಾಗ ಮಾತ್ರ ಬರುತ್ತದೆ. ನಾನು ಹೋಟೆಲ್ ಮ್ಯಾನೇಜ್‌ಮೆಂಟ್ ಕಲಿತಿದ್ದು ಫೀಲ್ಡ್‌ನಲ್ಲಿ, ನೀವು ನನಗೆ ʼಅಡುಗೆ ಮಾಡಿʼ ಅಂದ್ರೆ ಬರಲ್ಲ, ಆದರೆ ಅಡುಗೆಯಲ್ಲಿನ ತಪ್ಪು ಕಂಡು ಹಿಡಿಯಿರಿ ಅಂದ್ರೆ ಎಲ್ಲರಿಗಿಂತ ಜಾಸ್ತಿ ಕಂಡು ಹಿಡಿಯುತ್ತೇನೆʼ ಎನ್ನುತ್ತಾರೆ ಹೊಳ್ಳರು.
ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ 5-6 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಷ್ಟು ಖರ್ಚು ಮಾಡಿ ಹೊರಗೆ ಬಂದರೆ ಸಿಗುವುದು 25-30 ಸಾವಿರ ರೂಪಾಯಿ ಸಂಬಳದ ಕೆಲಸ. ಅದಕ್ಕೇ ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಜನರು ಹೋಗುತ್ತಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ವೃತ್ತಿಗೆ ಮರ್ಯಾದೆ ಕೊಡಬೇಕು..
ʼಇಪ್ಪತ್ತೈದು ವರ್ಷಗಳ ಹಿಂದೆ ಕಾರ್ಮಿಕರ ಸಮಸ್ಯೆ ತೀರಾ ಇರಲಿಲ್ಲ. ಈಗ ಅದು ಕ್ರಮೇಣ ಜಾಸ್ತಿ ಆಗುತ್ತಲೇ ಬಂದಿದೆ. ಹೋಟೆಲ್ ಕೆಲಸ ಮಾಡುವವರಿಗೆ ಹುಡುಗಿ ಕೊಡಲ್ಲ ಎಂಬಂಥ ಪರಿಸ್ಥಿತಿಯೂ ಇತ್ತು. ಇನ್ನು ಕೆಲವರು ಹೋಟೆಲ್ ಕೆಲಸಕ್ಕೆ ಬರುವುದಿಲ್ಲ. ಇದು ಹೀಗೇ ಇರುತ್ತದೆ, ಮುಂದುವರಿಯುತ್ತದೆʼ ಎಂದು ಕಾರ್ಮಿಕರ ಸಮಸ್ಯೆ ಕುರಿತು ಮಾತನಾಡಿದ ಹೊಳ್ಳರು, ʼಜನರ ಮನಸ್ಥಿತಿ ಬದಲಾಗಬೇಕು. ವೃತ್ತಿಯಲ್ಲಿನ ಘನತೆ ಎನ್ನುತ್ತಾರಲ್ವ, ಅದು ಬರಬೇಕುʼ ಎಂದರು. ʼಯಾವ ಕೆಲಸವನ್ನೇ ಮಾಡುತ್ತಿರಲಿ, ಕಾರ್ಮಿಕರಿಗೆ.. ಅವರ ಕೆಲಸಕ್ಕೆ ಮರ್ಯಾದೆ ಕೊಡಬೇಕು. ವೇಯ್ಟರ್‌ಗೆ ನೂರು ರೂಪಾಯಿ ಟಿಪ್ಸ್ ಕೊಡುವಾಗ ಕ್ಲೀನರ್‌ಗೆ 20 ರೂಪಾಯಿಯಷ್ಟಾದರೂ ಟಿಪ್ಸ್ ಕೊಡಬೇಕು. ಆಗ ಅವರಿಗೆ ಸಿಗುವ ಆ ಖುಷಿಯೇ ಬೇರೆ, ನಾನು ಅದನ್ನು ಮಾಡುತ್ತಿದ್ದೇನೆʼ ಎಂದೂ ಹೇಳಿದರು.
ಈ ಮನೋಭಾವವೂ ಕಾರ್ಮಿಕರ ಅಭಾವಕ್ಕೆ ಕಾರಣ
ʼಹೋಟೆಲ್ ಇಂಡಸ್ಟ್ರಿಗೆ ಬರುವವರ ಸಂಖ್ಯೆ ಜಾಸ್ತಿ ಆಗಿದೆ. ಆದರೆ ಈಗ ಎಲ್ಲರಿಗೂ ವೈಟ್ ಕಾಲರ್ ಕೆಲಸ ಬೇಕು, ಈಗ ಬರುವವರು ತುಂಬಾ ಜನ ಕ್ಯಾಷಿಯರ್ ಕೆಲಸ ಕೊಡಿ ಎನ್ನುತ್ತಾರೆ. ನಾನು ನೋಡಿದಂತೆ ಯಾರೂ ಹೊಸಬರಿಗೆ ಕ್ಯಾಷಿಯರ್ ಕೆಲಸ ಕೊಡುವುದಿಲ್ಲ. ಆದರೂ ಈಗ ಕೆಲವರು ಬಂದು ಅದನ್ನೇ ನೇರವಾಗಿ ಕೇಳುತ್ತಾರೆ. ಮ್ಯಾನೇಜರ್, ಕಿಚನ್ ಸೂಪರ್‌ವೈಸರ್ ಕೆಲಸ ಕೊಡಿ ಎಂದು ಕೇಳುತ್ತಾರೆ ವಿನಃ ಕಿಚನ್‌ನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವುದಿಲ್ಲ. ಈಗ ಏನಾಗಿದೆ ಅಂದ್ರೆ ಮೈ ಗಲೀಜಾಗಬಾರದು, ಆದರೆ ದುಡ್ಡು ಬೇಕು. ಕಾರ್ಮಿಕರ ಅಭಾವಕ್ಕೆ ಈ ಮನೋಭಾವ ಕೂಡ ಕಾರಣʼ ಎನ್ನುವುದು ಹೊಳ್ಳರ ಅನಿಸಿಕೆ.
ಹಿನ್ನೆಲೆಯೇ ಇಲ್ಲದವರ ಹೋಟೆಲ್..
ನಮ್ಮ ಉದ್ಯಮಕ್ಕೆ ಹೋಟೆಲಿಗರಲ್ಲದವರೂ ತುಂಬಾ ಜನ ಬರುತ್ತಿದ್ದಾರೆ, ʼನಾನು ಬಂಡವಾಳ ಹಾಕುತ್ತೇನೆ, ನೀವು ನಡೆಸ್ತೀರಾ?ʼ ಎಂದು ಈ ಉದ್ಯಮಕ್ಕೆ ಬರುವವರು ಜಾಸ್ತಿ ಆಗಿದ್ದಾರೆ. ಅಂಥವರಿಗೆ ಹೋಟೆಲ್‌ನ ಯಾವುದೇ ಹಿನ್ನೆಲೆ ಇರುವುದಿಲ್ಲ, ಹೋಟೆಲ್ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ನಾವು ದೋಸೆಯವನಿಗೆ ಇಷ್ಟು ಎಂದು ಒಂದು ಸಂಬಳ ನಿಗದಿ ಮಾಡಿದ್ದರೆ, ಅವರು ಅದರ ದುಪ್ಪಟ್ಟು ಸಂಬಳ ಕೊಟ್ಟುಬಿಡುತ್ತಾರೆ. ಅದು ನಮಗೆ ಸಮಸ್ಯೆ, ಆಗ ನಾವೂ ಅಷ್ಟೇ ಕೊಡಬೇಕಾಗುತ್ತದೆ. ಉದ್ಯಮಕ್ಕೆ ಹೊಸಬರಾದವರ ಕಾಂಪಿಟಿಷನ್‌ನಲ್ಲಿ ಹೀಗೆಲ್ಲ ಆಗುತ್ತಿದೆ. ಪಕ್ಕದ ಹೋಟೆಲ್ ನೋಡಿ ಬೆಲೆ ನಿಗದಿ ಮಾಡುವಾಗ ಪಕ್ಕದ ಹೋಟೆಲ್‌ನವರು ಎಷ್ಟು ಸಂಬಳ ಕೊಡುತ್ತಿದ್ದಾರೆ ಎಂಬುದನ್ನೂ ನೋಡಬೇಕು, ಆದರೆ ಅದನ್ನು ಮಾಡುತ್ತಿಲ್ಲʼ ಎನ್ನುತ್ತ ಅನಾರೋಗ್ಯಕರ ಸ್ಪರ್ಧೆಯ ಬಗ್ಗೆ ಹೊಳ್ಳರು ವಿವರಿಸಿದರು.
ಕನಿಷ್ಠ ಹತ್ತು ವರ್ಷಗಳ ಮುಂದಾಲೋಚನೆ ಇರಲಿ..
ಹೋಟೆಲ್ ಸ್ವಂತ ಜಾಗದಲ್ಲೇ ಇದ್ದರೆ ಒಳ್ಳೆಯದು, ಆದರೆ ಎಲ್ಲರಿಗೂ ಆ ಅವಕಾಶ-ಅನುಕೂಲ ಇಲ್ಲ. ಹೀಗಾಗಿ ಬಾಡಿಗೆ ಜಾಗದಲ್ಲಿ ಇರುವ ಹೋಟೆಲ್‌ಗಳೇ ಹೆಚ್ಚು. ಹಾಗೆ ಬಾಡಿಗೆ ಜಾಗದಲ್ಲಿ ಹೋಟೆಲ್ ಮಾಡುವವರಲ್ಲಿ ಮುಂದಿನ ಹತ್ತು ವರ್ಷಗಳ ಮುಂದಾಲೋಚನೆ ಇರಬೇಕು. ಯಾಕಂದ್ರೆ, ಈಗ 1 ಲಕ್ಷ ರೂಪಾಯಿ ಇರುವ ಬಾಡಿಗೆ ಇನ್ನು ಹತ್ತು ವರ್ಷಗಳಲ್ಲಿ 2-2.5 ಲಕ್ಷ ರೂಪಾಯಿ ಆಗಿರುತ್ತದೆ. ಆದರೆ ವ್ಯಾಪಾರ ಅಲ್ಲಿಗೇ ಸ್ಥಗಿತವಾಗಿರುತ್ತದೆ. ಒಂದು ಲಕ್ಷ ರೂಪಾಯಿ ಇದ್ದ ವ್ಯವಹಾರ ಹೆಚ್ಚೆಂದರೆ ಒಂದೂವರೆ ಲಕ್ಷ ರೂಪಾಯಿ ಆಗಬಹುದು. ಜೊತೆಗೆ ಬಾಡಿಗೆ, ಸಂಬಳ, ಎಲ್ಲ ಖರ್ಚುಗಳೂ ಜಾಸ್ತಿ ಆಗಿರುತ್ತವೆ. ಪರಿಣಾಮವಾಗಿ ಲಾಭದ ಮಾರ್ಜಿನ್ ಕಡಿಮೆ ಆಗುತ್ತ ಬಂದಿರುತ್ತದೆ, ಹಾಗಾದಾಗ ಒಂದು ದಿನ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆʼ ಎಂಬುವುದು ಹೊಳ್ಳರ ಲೆಕ್ಕಾಚಾರ.
ಒಎನ್‌ಡಿಸಿಗೆ ಉತ್ತೇಜನ ಸಿಗಲಿ..
ಸ್ವಿಗ್ಗಿ-ಜೊಮ್ಯಾಟೊದಂಥ ಆನ್‌ಲೈನ್ ವಹಿವಾಟಿನ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ, ʼಆನ್‌ಲೈನ್ ಕೆಲವರಿಗೆ ತುಂಬಾ ಅನುಕೂಲ, ಅದು ಇದ್ದೇ ಇರುತ್ತದೆ, ಅದರೊಂದಿಗೆ ಹೊಂದಿಕೊಂಡು ಹೋಗಬೇಕು. ಅದಾಗ್ಯೂ ಅವರು ಹೊಟೇಲಿಗರನ್ನು ಕಂಟ್ರೋಲ್ ಮಾಡಲು ಯತ್ನಿಸುತ್ತಿದ್ದಾರೆ. ಅದು ಸಾಧ್ಯವಾಗದ ಹಾಗೆ ನಾವು ಸಂಘದಿಂದ ಪ್ರಯತ್ನ ಮಾಡುತ್ತಿದ್ದೇವೆ. ಮತ್ತೊಂದೆಡೆ ಆನ್‌ಲೈನ್ ವ್ಯವಹಾರಕ್ಕೆಂದೇ ʼಒಎನ್‌ಡಿಸಿʼ ಎಂಬ ಸರ್ಕಾರಿ ವ್ಯವಸ್ಥೆಯೇ ಇದೆ, ಅದರಲ್ಲಿ ಕಮಿಷನ್ ಕಡಿಮೆ, ನಾವು ಅದನ್ನು ಉತ್ತೇಜಿಸಬೇಕುʼ ಎಂದ ಹೊಳ್ಳರು, ಆ ಬಗ್ಗೆ ಸರ್ಕಾರದ ಜೊತೆ ಸಮಾಲೋಚನೆ ನಡೆದಿದ್ದು, ಇನ್ನೊಂದು ಸುತ್ತಿನ ಮಾತುಕತೆ ನಡೆಯಬೇಕಿದೆ ಎಂದೂ ಹೇಳಿದರು.
ಪರಿಣತರನ್ನು ಕೇಳಿ ಪ್ರವೇಶ ಮಾಡಿ..
ಹೋಟೆಲ್ ಉದ್ಯಮ ಚೆನ್ನಾಗಿದೆ, ಒಳ್ಳೆಯ ರೀತಿಯಲ್ಲಿ ಬೆಳೆಸಿಕೊಂಡು ಹೋಗುವುದಾದರೆ ಖಂಡಿತ ಬನ್ನಿ, ಒಳ್ಳೇ ರೀತಿ ನಡೆಸಿಕೊಂಡು ಹೋಗುವುದಾದರೆ ಇಲ್ಲಿ ಯಾರಿಗೂ ತೊಂದರೆ ಆಗುವುದಿಲ್ಲ, ಆದರೆ ಹಾಗೆ ನಡೆಸಿಕೊಂಡು ಹೋಗುವುದು ಸುಲಭ ಅಲ್ಲ. ಇನ್ನೊಬ್ಬರನ್ನು ನೋಡಿ ಸುಲಭ ಅಂತ ಅಂದುಕೊಂಡು ಬರುವ ಹಾಗಿದ್ದರೆ ದಯವಿಟ್ಟು ಬರಬೇಡಿ. ಹೊರಗಡೆಯಿಂದ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತದೆ. ಹೀಗಾಗಿ ಹೊಸದಾಗಿ ಉದ್ಯಮಕ್ಕೆ ಬರುವವರು ಪರಿಣತರ ಜೊತೆ ಕೇಳಿ, ಸಲಹೆ ಪಡೆದೇ ಪ್ರವೇಶ ಮಾಡಿ ಎಂಬುದು ಹೋಟೆಲ್ ಕ್ಷೇತ್ರಕ್ಕೆ ಬರಬಯಸುವವರಿಗೆ ಸುಬ್ರಹ್ಮಣ್ಯ ಹೊಳ್ಳರ ಕಿವಿಮಾತು.
ಹೋಟೆಲಿಗರು ಸಂಘಕ್ಕೆ ಯಾಕೆ ಬರಬೇಕು, ಸಂಘಕ್ಕೆ ಯಾಕೆ ದುಡ್ಡು ಕೊಡಬೇಕು ಅಂತ ಕೇಳಿದರೆ ನಮಗೆ ಯಾವುದೇ ಕೆಲಸ ಇರುವುದಿಲ್ಲ. ಅದರ ಬದಲು ಸಂಘಕ್ಕೆ ಸದಸ್ಯರಾಗಿ ಏನು ಕೆಲಸ-ಸಹಾಯ ಆಗಬೇಕೋ ಅದನ್ನು ಮಾಡಿಸಿಕೊಳ್ಳಬೇಕು.
| ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಅಧ್ಯಕ್ಷರು, ಬೆಂಗಳೂರು ಹೋಟೆಲುಗಳ ಸಂಘ (ರಿ.)
ಸಮಸ್ಯೆಗಳನ್ನು ಗಮನಕ್ಕೆ ತನ್ನಿ..
ಹೋಟೆಲಿಗರಿಗೆ ಸಮಸ್ಯೆ ಬಂದರೆ ನಾವಿದ್ದೇವೆ, ಇಲ್ಲಂದ್ರೆ ನಾವು ಬೇಕಾಗಿಲ್ಲ. ಸಂಘ ಸದಾ ಇದ್ದೇ ಇರುತ್ತದೆ, ಹಾಗಂತ ಸಂಘ ಹುಡುಕಿಕೊಂಡು ಹೋಗಿ ಮಾಡುವ ಕೆಲಸ ಇಲ್ಲ. ಹತ್ತು ಜನಕ್ಕೆ ಸಮಸ್ಯೆ ಆದಾಗ ನಮಗೆ ಗೊತ್ತಾಗುತ್ತದೆ, ಆ ವಿಚಾರವಾಗಿ ಸರ್ಕಾರದ ಹತ್ತಿರ ಹೋಗಬೇಕು ಎನ್ನುವುದು ನಮಗೆ ತಿಳಿಯುತ್ತದೆ. ಆಗಲೇ ನಮಗೆ ಕೆಲಸ ಬರುವುದು, ಇಲ್ಲದಿದ್ದರೆ ಎಲ್ಲ ಹೋಟೆಲೂ ಚೆನ್ನಾಗಿದೆ ಅಂತ ನಾವೂ ಸುಮ್ಮನಿರುತ್ತೇವೆʼ ಎನ್ನುತ್ತ ಸಂಘದ ಕಾರ್ಯವೈಖರಿ ಬಗ್ಗೆ ಹೇಳಿದ ಅವರು, ಹೋಟೆಲಿಗರು ತಮ್ಮ ಸಮಸ್ಯೆಗಳನ್ನು ಸಂಘದ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು.
ಈ ಬಗ್ಗೆ ಇನ್ನಷ್ಟು ವಿವರಿಸಿದ ಅವರು, ʼದಿನಾ ಹುಡುಕಿಕೊಂಡು ಹೋಗಿ ಕೆಲಸ ಮಾಡಲು ಆಗುವುದಿಲ್ಲ, ಈಗ ಎಫ್‌ಎಸ್‌ಎಸ್‌ಎಐನವರ ದಾಳಿ ಹೆಚ್ಚಾಗಿದೆ, ಅಧಿಕಾರಿಗಳಿಂದ ಎಲ್ಲೆಡೆ ತಪಾಸಣೆ ನಡೆಯುತ್ತಿದೆ, ಸದ್ಯಕ್ಕೆ ಅದೇ ಸಮಸ್ಯೆ. ಹೀಗಾಗಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ನಾವು ಈಗ ಎಲ್ಲರಿಗೂ ಜಾಗೃತಿ ಮೂಡಿಸುತ್ತಿದ್ದೇವೆʼ ಎಂದರು. ʼಅದೇ ರೀತಿ, ತೆರಿಗೆ ವಿಚಾರವಾಗಿ ಇಂಥ ಕ್ರಮಗಳನ್ನು ಅನುಸರಿಸಿ ಎಂದೂ ಹೇಳುತ್ತಿದ್ದೇವೆ, ಉದ್ಯಮಕ್ಕೆ ಸಂಬಂಧಿತ ಯಾವುದೇ ವಿಷಯ ಗೊತ್ತಿಲ್ಲದಿದ್ದರೆ ಕೇಳಿ, ನಾವು ಸಹಾಯ ಮಾಡುತ್ತೇವೆ. ಎಷ್ಟೋ ಜನರಿಗೆ ಕೆಲವು ಸಂಗತಿಗಳ ಅರಿವು ಇರುವುದಿಲ್ಲ, ಹೇಗೋ ವ್ಯವಹಾರ ಮಾಡುತ್ತಿರುತ್ತಾರೆ, ಅದಕ್ಕೆ ನಾವು ಅವರನ್ನು ದೂಷಿಸುವ ಹಾಗಿಲ್ಲ, ಯಾಕಂದರೆ ಅವರ ಹಿನ್ನೆಲೆ ಹಾಗಿರುತ್ತದೆ. ಅಂಥವರಿಗೆ ಸಂಘ ಸಹಾಯಕ್ಕೆ ಬರುತ್ತದೆʼ ಎಂದು ಬಿಎಚ್‌ಎ ನೂತನ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೊಳ್ಳರು ಭರವಸೆ ನೀಡಿದ್ದಾರೆ.
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಹೋಟೆಲ್ ಓನರ್ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!