ಬೆಂಗಳೂರು: ರಾಜಧಾನಿಯಲ್ಲಿನ ಹೋಟೆಲಿಗರ ಸಂಘಟಿತ ಶಕ್ತಿ ಆಗಿರುವ ʼಬೆಂಗಳೂರು ಹೋಟೆಲುಗಳ ಸಂಘʼ ಮಾಡಿಕೊಂಡಿದ್ದ ಮನವಿಯಂತೆ ಎರಡು ಪ್ರಮುಖ ಬೇಡಿಕೆಗಳನ್ನು ಸರ್ಕಾರ-ಪಾಲಿಕೆ ಈಡೇರಿಸಿದೆ. ಈ ಮೂಲಕ ಹೋಟೆಲಿಗರಿಗೆ ಅನುಕೂಲವಾಗಿದ್ದು, ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಹತ್ತು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿರುವ ರಾತ್ರಿ ವೇಳೆಯ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ 1 ಗಂಟೆ (1am) ವರೆಗೆ ವಿಸ್ತರಿಸಿದ್ದಾಗಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದ ಪಾಲಿಕೆ ವ್ಯಾಪ್ತಿಗಳಲ್ಲಿನ ಬಾರ್ & ರೆಸ್ಟೋರೆಂಟ್‌ನವರಿಗೆ ಅನುಕೂಲವಾಗಲಿದೆ.
ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿ ಆಗಿದ್ದ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು, ಬಾರ್ & ರೆಸ್ಟೋರೆಂಟ್‌ಗಳನ್ನು ತೆರೆದಿಡಲು ನೀಡಿರುವ ಪ್ರಸ್ತುತ ಅವಧಿಯನ್ನು ರಾತ್ರಿಯಲ್ಲಿ ಇನ್ನೂ ಒಂದು ಗಂಟೆ ವಿಸ್ತರಣೆ ಮಾಡಬೇಕು ಎಂಬುದಾಗಿ ಮನವಿ ಮಾಡಿಕೊಂಡಿದ್ದರು. ಇದೀಗ ಆ ಬೇಡಿಕೆ ಈಡೇರಿದ್ದು, ಸರ್ಕಾರದ ನಿರ್ಧಾರವನ್ನು ಪಿ.ಸಿ. ರಾವ್ ಸ್ವಾಗತಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಪಾವತಿಗಿರುವ ಒನ್ ಟೈಮ್ ಸೆಟಲ್‌ಮೆಂಟ್ (ಒಟಿಎಸ್) ವ್ಯವಸ್ಥೆಗೆ ವಿಧಿಸಿದ್ದ ಗಡುವನ್ನು ಮೊನ್ನೆಯಷ್ಟೇ ಜುಲೈ 31ರಿಂದ ಆ. 31ರ ವರೆಗೆ ವಿಸ್ತರಿಸಿತ್ತು. ಅದನ್ನು ಇನ್ನೂ ಒಂದು ತಿಂಗಳು ಅಂದರೆ ಸೆ. 30ರ ವರೆಗೆ ವಿಸ್ತರಿಸುವುದಾಗಿಯೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದು, ಆ ಕುರಿತು ಶೀಘ್ರದಲ್ಲೇ ಸುತ್ತೋಲೆ ಹೊರಡಿಸುವುದಾಗಿ ತಿಳಿಸಿದ್ದಾರೆ.
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗಿರುವ ಒನ್ ಟೈಮ್ ಸೆಟಲ್‌ಮೆಂಟ್ (ಒಟಿಎಸ್) ವ್ಯವಸ್ಥೆ ಜುಲೈ 31ರಂದು ಮುಗಿಯಲಿದ್ದು, ಅದನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಕೆಲವು ದಿನಗಳ ಹಿಂದೆ ಮನವಿ ಮಾಡಿಕೊಂಡಿದ್ದರು.
ಬೆಂಗಳೂರು ಹೋಟೆಲುಗಳ ಸಂಘ ಮಾಡಿಕೊಂಡಿದ್ದ ಮನವಿಯಂತೆ ಸರ್ಕಾರ ಮತ್ತು ಪಾಲಿಕೆ ಎರಡೂ ಬೇಡಿಕೆಗಳನ್ನು ಈಡೇರಿಸಿದ್ದು, ಹೋಟೆಲಿಗರಿಗೆ ಹೆಚ್ಚಿನ ಅನುಕೂಲ ಆಗುವಂತಾಗಿದೆ.
ಬಾರ್ & ರೆಸ್ಟೋರೆಂಟ್‌ಗಳು ಮೊದಲು ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಲು ಅವಕಾಶವಿತ್ತು. ಈಗ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲೂ ಅವುಗಳನ್ನು ರಾತ್ರಿ 1 ಗಂಟೆ ವರೆಗೆ ತೆರೆದಿಡಲು ನೀಡಿರುವ ಅವಕಾಶವನ್ನು ಸ್ವಾಗತಿಸುತ್ತಿದ್ದೇವೆ.
| ಪಿ.ಸಿ. ರಾವ್, ಗೌರವಾಧ್ಯಕ್ಷರು, ಬೆಂಗಳೂರು ಹೋಟೆಲುಗಳ ಸಂಘ (ರಿ.)
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?