ಮುಂಬೈ: ಸಂಸದರೊಬ್ಬರ ಆಪ್ತ ಸಹಾಯಕನ ಸೋಗಿನಲ್ಲಿ ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕರೊಬ್ಬರಿಗೆ 11.2 ಲಕ್ಷ ರೂಪಾಯಿ ವಂಚಿಸಿದ್ದಾನೆ. ʼಬಡೆಮಿಯಾʼಗೆ ಧೋಖಾ ಮಾಡಿರುವ ಆತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸೂರಜ್ ಆರ್. ಕಲವ್ ಎಂಬಾತನೇ ಆರೋಪಿ. ಶಿವಸೇನೆ ಯುಬಿಟಿ ಬಣದ ಸಂಸದ ಅರವಿಂದ ಸಾವಂತ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಈ ಕೃತ್ಯವೆಸಗಿದ್ದಾನೆ. ಆತನನ್ನು ಮುಂಬೈ ಪೊಲೀಸರು ಆ.7ರ ಬುಧವಾರ ಬಂಧಿಸಿದ್ದಾರೆ. ಈ ಬಗ್ಗೆ ಹೋಟೆಲ್ ಮಾಲೀಕ ಜಮಾಲ್ ಮೊಹಮ್ಮದ್ ಯಾಸಿನ್ ಶೇಖ್ ಕಾಲಾಚೌಕಿ ಪೊಲೀಸ್ ಸ್ಟೇಷನ್‌ಗೆ ದೂರು ನೀಡಿದ್ದರು.
ಮುಂಬೈನ ಕೊಲಬಾದಲ್ಲಿ ಇರುವ 78 ವರ್ಷಗಳ ಹಳೆಯ ʼಬಡೆಮಿಯಾ ರೆಸ್ಟೋರೆಂಟ್ʼಗೆ ಕಳೆದ ತಿಂಗಳಲ್ಲಿ ಕರೆ ಮಾಡಿದ್ದ ಸೂರಜ್, ತನ್ನನ್ನು ಶಿವಸೇನೆ ಯುಬಿಟಿ ಬಣದ ಸಂಸದ ಅರವಿಂದ ಸಾವಂತ್ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡಿದ್ದ.
ಕೇಂದ್ರ ಮುಂಬೈನ ಲಾಲ್‌ಬಾಗ್ ಜಂಕ್ಷನ್‌ನ ಭಾರತ್ ಮಾತಾ ವಿಳಾಸಕ್ಕೆ ಫುಡ್ ಆರ್ಡರ್ ಮಾಡಿದ್ದ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನದ ಅವಧಿಯಲ್ಲಿ ಆಹಾರ ಬೇಕು ಎಂದು ಬುಕಿಂಗ್ ಮಾಡಿದ್ದು, ಅಧಿವೇಶನ ಮುಗಿದ ಬಳಿಕ ಕೊನೆಯಲ್ಲಿ ಒಂದೇ ಕಂತಿನಲ್ಲಿ ಎಲ್ಲ ಬಿಲ್ ಚುಕ್ತಾ ಮಾಡುವುದಾಗಿ ಹೇಳಿದ್ದ. ವೆಜ್ ಮತ್ತು ನಾನ್-ವೆಜ್ ಬಿರಿಯಾನಿ ಹಾಗೂ ಗುಲಾಬ್ ಜಾಮೂನ್ ಇತ್ಯಾದಿ ತರಿಸಿಕೊಂಡಿದ್ದ.
ಈ ಮಧ್ಯೆ ಹೋಟೆಲ್ ಮಾಲೀಕರು ತಮ್ಮ ಪುತ್ರಿಗೆ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸೀಟು ಸಿಗದ್ದರಿಂದ ಸಂಸದರ ಪಿಎಂ ಎಂದು ಹೇಳಿಕೊಂಡಿರುವ ಸೂರಜ್ ಸಹಾಯ ಕೋರಿದ್ದರು. ಆಗ ಸೀಟು ಕೊಡಿಸುವ ಭರವಸೆ ನೀಡಿದ್ದ ಸೂರಜ್, ಡೊನೇಷನ್-ಫೀಸ್ ಎಂದು ಹೇಳಿ ಹೋಟೆಲ್ ಮಾಲೀಕರಿಂದ 9.27 ಲಕ್ಷ ರೂ. ಪಡೆದಿದ್ದ.
ಹಣದಲ್ಲಿ ಸ್ವಲ್ಪ ಯುಪಿಐ ಹಾಗೂ ಸ್ವಲ್ಪ ನಗದು ರೂಪದಲ್ಲಿ ಪಡೆದಿದ್ದ ಸೂರಜ್, ಬಳಿಕ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸಿರಲಿಲ್ಲ. ಕಾಲೇಜು ಸೀಟು ಕೂಡ ಕೊಡಿಸಿರಲಿಲ್ಲ. ಕರೆ ಸ್ವೀಕರಿಸುವುದನ್ನೂ ನಿಲ್ಲಿಸಿದಾಗ ಮೋಸ ಹೋದ ಬಗ್ಗೆ ಅರಿವಾದ ಹೋಟೆಲ್ ಮಾಲೀಕರು, ಒಟ್ಟು 11.2 ಲಕ್ಷ ರೂ. ವಂಚಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?