ನವದೆಹಲಿ: ರಾಜ್ಯದಲ್ಲಿ ಪ್ರಸಿದ್ಧಿ ಆಗಿರುವ ದಾವಣಗೆರೆ ಬೆಣ್ಣೆ ದೋಸೆಗೆ ಜಿಯಾಗ್ರಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಪಡೆಯುವ ಆಸೆ ಸದ್ಯಕ್ಕಿನ್ನೂ ಈಡೇರಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರವೇ ಸ್ಪಷ್ಟನೆಯನ್ನು ನೀಡಿದೆ.
ದಾವಣಗೆರೆ ಬೆಣ್ಣೆ ದೋಸೆ ಸಂಬಂಧ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನಲ್ಲಿ ಕೇಳಿದ್ದ ಪ್ರಶ್ನೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ಉತ್ತರ ನೀಡುವ ಮೂಲಕ ಜಿಐ ಟ್ಯಾಗ್ ಸಿಕ್ಕಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ.
ದಾವಣಗೆರೆ ಬೆಣ್ಣೆ ದೋಸೆ ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಹೀಗಾಗಿ, ಜಿಐ ಟ್ಯಾಗ್‌ಗೆ ಅರ್ಹತೆ ಪಡೆಯುವುದಿಲ್ಲ. ದಾವಣಗೆರೆ ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದನ್ನು ತಯಾರಿಸಿ ಮಾರಾಟ ಮಾಡುವುದರಿಂದ ಇದೊಂದು ಸಾಮಾನ್ಯ ತಿನಿಸು. ಇದರಿಂದಾಗಿ ಜಿಐ ಟ್ಯಾಗ್‌ಗೆ ಅರ್ಹತೆ ಪಡೆಯಲು ಪೂರ್ವಾಪೇಕ್ಷಿತ ವಿಶಿಷ್ಟ ಅಂಶ ಇಲ್ಲವಾಗಿದೆ ಎಂದು ಜಿತಿನ್ ಪ್ರಸಾದ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದಾವಣಗೆರೆಯ ಯಾವುದೇ ವ್ಯಕ್ತಿ ದೇಶದ ಇತರ ಸ್ಥಳಗಳಿಗೆ ಹೋದಾಗ ಬೆಣ್ಣೆ ದೋಸೆ ಕೇಳುತ್ತಾರೆ. ಅದೊಂದು ಕ್ರೇಜ್ ಹುಟ್ಟಿಸುವ ತಿನಿಸು. ನಾನು ಸಂಸತ್ತಿಗೆ ತೆರಳಿದ್ದಾಗ ಬೆಣ್ಣೆ ದೋಸೆ ಬಗ್ಗೆ ಅನೇಕರು ಕೇಳಿದ್ದರು. ಹೀಗಾಗಿ, ಜಿಐ ಟ್ಯಾಗ್ ಪಡೆಯುವುದು ಎಷ್ಟು ಮುಖ್ಯ ಎಂಬುದು ತಿಳಿದುಬಂತು ಎಂದು ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದ್ದಾರೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!