ಬೆಂಗಳೂರು: ತಿಂಡಿ-ತಿನಿಸಿನ ಗುಣಮಟ್ಟ ಹಾಗೂ ದರದ ಕಾರಣಕ್ಕೆ ಆದರಕ್ಕೆ ಪಾತ್ರವಾಗಿ, ರಾಷ್ಟ್ರಮಟ್ಟದ ಮಾಧ್ಯಮದಲ್ಲೂ ಸುದ್ದಿಯಾಗಿದ್ದ ಬೆಂಗಳೂರಿನ ʼತಾಜಾ ತಿಂಡಿʼ ಇದೀಗ ಮಾಧ್ಯಮದ ಮಂದಿಯಿಂದಾಗಿಯೇ ಮತ್ತೊಮ್ಮೆ ಗಮನ ಸೆಳೆದಿದೆ.
ಹೌದು.. ಖ್ಯಾತ ಪತ್ರಕರ್ತ, ʼವಿಶ್ವವಾಣಿʼಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಆಗಸ್ಟ್ 11ರ ರವಿವಾರ ʼತಾಜಾ ತಿಂಡಿʼಯಲ್ಲಿ ತಿನಿಸು ಸವಿದು ಅಲ್ಲಿನ ತಮ್ಮ ಅನುಭವ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಅವರು ಆ ಅನುಭವವನ್ನು ಖ್ಯಾತ ಐರಿಷ್ ಕವಿ-ನಾಟಕಕಾರ ಆಸ್ಕರ್ ವೈಲ್ಡ್ ಅವರ ಮಾತಿನ ಮೂಲಕ ಬಣ್ಣಿಸಿದ್ದಾರೆ.
ʼನಾನು ಇಂದು ಸಂಜೆ ನನ್ನ ಪತ್ನಿ ಮತ್ತು ಸ್ನೇಹಿತರೊಂದಿಗೆ ನನ್ನ ನೆಚ್ಚಿನ ಫುಡ್ ಜಾಯಿಂಟ್ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ತಾಜಾ ತಿಂಡಿಗೆ ಹೋಗಿದ್ದೆ. ಅಲ್ಲಿ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್ ಮತ್ತು ಮಸಾಲೆ ದೋಸೆ ಮಾತ್ರವಷ್ಟೇ ಸಿಗುವುದಾದರೂ ಸ್ವಚ್ಛ-ಹಿತ ಹಾಗೂ ಅಚ್ಚುಕಟ್ಟಾದ ವಾತಾವರಣವಿದೆ. ಅಲ್ಲಿನ ಗುಣಮಟ್ಟ, ನೈರ್ಮಲ್ಯ ಮತ್ತು ರುಚಿಗೆ ಸಾಟಿ ಇಲ್ಲʼ ಎಂದು ವಿಶ್ವೇಶ್ವರ ಭಟ್ಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼನಾನು ಸರಳವಾದ ಅಭಿರುಚಿಗಳನ್ನು ಹೊಂದಿದ್ದೇನೆ, ನಾನು ಯಾವಾಗಲೂ ಅತ್ಯುತ್ತಮವಾದದ್ದರಲ್ಲೇ ಸಂತೃಪ್ತʼ ಎಂದು ಆಸ್ಕರ್ ವೈಲ್ಡ್ ಹೇಳಿರುವ ಮಾತು ʼತಾಜಾ ತಿಂಡಿʼಗೆ ಸರಿಯಾಗಿ ಅನ್ವಯಿಸುತ್ತದೆ ಎಂದೂ ವಿಶ್ವೇಶ್ವರ ಭಟ್ಟರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋಪಾಡಿ ಶ್ರೀನಿವಾಸ್ ರಾವ್ ಅವರ ಮಾಲೀಕತ್ವದ ʼತಾಜಾ ತಿಂಡಿʼ ಇತ್ತೀಚೆಗೆ ಗುಣಮಟ್ಟ ಹಾಗೂ ದರದ ಕಾರಣಕ್ಕೆ ರಾಜ್ಯದ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಮಾತ್ರವಲ್ಲದೆ, ರಾಷ್ಟ್ರಮಟ್ಟದ ಮಾಧ್ಯಮದಲ್ಲೂ ಸುದ್ದಿಯಾಗಿ ಗಮನ ಸೆಳೆದಿತ್ತು.
ʼತಾಜಾ ತಿಂಡಿʼಯ ಜಯನಗರ ಶಾಖೆಯಲ್ಲಿನ ಗುಣಮಟ್ಟ ಹಾಗೂ ದರದ ಬಗ್ಗೆ ಗ್ರಾಹಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದು ಮಾಧ್ಯಮಗಳ ಗಮನ ಸೆಳೆದು, ಅದು ಸುದ್ದಿಯೂ ಆಗಿತ್ತು. ಇದೀಗ ವಿಶ್ವೇಶ್ವರ ಭಟ್ಟರಿಂದಾಗಿ ʼತಾಜಾ ತಿಂಡಿʼ ಇನ್ನೊಮ್ಮೆ ಗಮನ ಸೆಳೆದಿದೆ.
ಇದೂ ಓದಿ: ಹೋಟೆಲ್ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ದಾವಣಗೆರೆ ಬೆಣ್ಣೆ ದೋಸೆ, ಈಡೇರಲಿಲ್ಲ ಜಿಐ ಟ್ಯಾಗ್ ಪಡೆಯುವ ಆಸೆ: ಖಚಿತಪಡಿಸಿದ ಕೇಂದ್ರ ಸರ್ಕಾರ