ಒಳಗೇನಿದೆ!?

ನಾನು ನಂದಿನಿ, ಡೆಲ್ಲೀಲೂ ಸಿಗ್ತೀನಿ; ರಾಷ್ಟ್ರ ರಾಜಧಾನಿಯಲ್ಲೂ ಕೆಎಂಎಫ್‌ ಹಾಲು!

ನವದೆಹಲಿ: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ʼನಂದಿನಿʼ ಹಾಲು ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೆ ನಂದಿನಿ ಹಾಲು ಪೂರೈಸುತ್ತಿರುವ ಕೆಎಂಎಫ್, ಅಕ್ಟೋಬರ್‌ನಿಂದ ದೆಹಲಿಗೆ ದಿನಕ್ಕೆ 2.5 ಲಕ್ಷ ಲೀಟರ್ ನಂದಿನಿ ಹಾಲು ಸರಬರಾಜು ಮಾಡಲು ಮುಂದಾಗಿದೆ. 

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ನೇತೃತ್ವದ ಅಧಿಕಾರಿಗಳ ತಂಡ ಈ ಸಂಬಂಧ ದೆಹಲಿಗೆ ಭೇಟಿ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಸುಮಾರು 70 ವಿತರಕರ ಜೊತೆಗೆ ಸಭೆಗಳನ್ನು ನಡೆಸಿದೆ. ಮಾತ್ರವಲ್ಲದೆ, ವಿವಿಧ ಹಾಲು ಉತ್ಪನ್ನ ಘಟಕಗಳಿಗೂ ಭೇಟಿ ನೀಡಿ ಮಾತುಕತೆ ನಡೆಸಿದೆ.

ಕರ್ನಾಟಕದಲ್ಲಿ ಈಗ ಅಂದಾಜು 1 ಕೋಟಿ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ. ಸದ್ಯ ಆಂಧ್ರಪ್ರದೇಶಕ್ಕೆ ದಿನಕ್ಕೆ 2.5 ಲಕ್ಷ ಲೀಟರ್‌,  ಮಹಾರಾಷ್ಟ್ರಕ್ಕೆ 2.5 ಲಕ್ಷ ಲೀಟರ್ ಮತ್ತು ತಮಿಳುನಾಡಿಗೆ 40 ಸಾವಿರ ಲೀಟರ್‌ ಹಾಲನ್ನು  ಕೆಎಂಎಫ್ ಪೂರೈಸುತ್ತಿದೆ. ಉತ್ತರ ಭಾರತದ ಮಾರುಕಟ್ಟೆಗೂ ಅದನ್ನು ಪೂರೈಕೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ ಎಂದು ಎಂ.ಕೆ. ಜಗದೀಶ್‌ ಮಾಹಿತಿ ನೀಡಿದ್ದಾರೆ. 

ಮೊದಲ ಹಂತದಲ್ಲಿ ದೆಹಲಿಗೆ ದಿನಕ್ಕೆ 2.5 ಲಕ್ಷ ಲೀಟರ್ ಪೂರೈಸಲು ಯೋಜನೆ ಹಾಕಿಕೊಂಡಿದ್ದೇವೆ.  ಆರು ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಅದನ್ನು ಹೆಚ್ಚಿಸುವ ಚಿಂತನೆ ಇದೆ. ನಂದಿನಿ ಹಾಲನ್ನು ರೈತರಿಂದ ಲೀಟರ್‌ಗೆ 32 ರೂಪಾಯಿಗೆ ಖರೀದಿಸುತ್ತಿದ್ದೇವೆ. ನವದೆಹಲಿಯಲ್ಲಿ ಹಾಲಿನ ಬೆಲೆ ಲೀಟರ್‌ಗೆ 54 ರೂಪಾಯಿ ಇದೆ. ಕರ್ನಾಟಕದಿಂದ ದೆಹಲಿಗೆ ಹಾಲು ತರುವುದು ಬಹುದೊಡ್ಡ ಸವಾಲು. ಇದಕ್ಕೆ ಕಡಿಮೆ ಎಂದರೆ 53 ಗಂಟೆಗಳಾದರೂ ಬೇಕು ಎಂದರು.

ಹಾಸನ ಹಾಲು ಒಕ್ಕೂಟ ದೆಹಲಿಗೆ ಹಾಲು ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ ಭೋಪಾಲ್‌, ಇಂದೋರ್‌ ಹಾಗೂ ಉಜ್ಜಯಿನಿಯಲ್ಲಿ ನಂದಿನಿ ಹಾಲು ಪೂರೈಸುವ ಯೋಜನೆ ಕೂಡ ಇದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟದ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಬೆಂಗಳೂರು ಹೋಟೆಲುಗಳ ಸಂಘದ ಮನವಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ