ಬೆಂಗಳೂರು: ಲಂಚ ನೀಡುವಂತೆ ಹೋಟೆಲಿಗರನ್ನು ಪೀಡಿಸುತ್ತಿದ್ದ ಹಾಗೂ ಕರ್ತವ್ಯ ನಿರ್ಲಕ್ಷ್ಯ ತೋರಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಹಾರ ಸುರಕ್ಷತಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಬಿಬಿಎಂಪಿ ದಕ್ಷಿಣ ವಲಯದ ಆಹಾರ ಸುರಕ್ಷತಾಧಿಕಾರಿ ಎಚ್. ಸುರೇಶ್ ಅಮಾನತುಗೊಂಡವರು. ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಕೆ. ನದೀಮ್ ಆಹ್ಮದ್ ಅವರು ಆರೋಪಿತ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸುರೇಶ್ ಅವರು ಹೋಟೆಲ್ ಸೇರಿದಂತೆ ವಿವಿಧ ಆಹಾರ ಉದ್ಯಮಗಳಿಗೆ ಭೇಟಿ ನೀಡಿ, ತಪಾಸಣೆ ಮಾಡುವ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಆಹಾರ ಉದ್ದಿಮೆದಾರರಿಂದ ದೂರುಗಳು ಬಂದಿವೆ.
ಜೊತೆಗೆ, ಮಲ್ಲೇಶ್ವರದ ಮಂತ್ರಿಮಾಲ್‌ನಲ್ಲಿರುವ ಹೋಟೆಲ್‌ಗಳು, ಸೂಪರ್ ಮಾರುಕಟ್ಟೆಗಳು ಹಾಗೂ ಐಸ್‌ಕ್ರೀಂ ಪಾರ್ಲರ್‌ಗಳನ್ನು ಆಗಸ್ಟ್ 3ರಂದು ಪರಿಶೀಲಿಸಿದ ಸಂದರ್ಭದಲ್ಲಿ ಎರಡು ವಿಧದ ಮೊಟ್ಟೆಗಳು ಕಂಡುಬಂದಿದ್ದವು. ಈ ಮೊಟ್ಟೆಗಳು ಹೊಂಗಸಂದ್ರದ ಕಂಪನಿಯೊಂದರಿಂದ ಪೂರೈಕೆಯಾಗಿದ್ದು, ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸುರೇಶ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ವರದಿ ನೀಡಿಲ್ಲ. ಆರು ತಿಂಗಳ ಮಾಸಿಕ ವರದಿಯನ್ನೂ ಸಲ್ಲಿಸಿಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಲಂಚಕ್ಕೆ ಬೇಡಿಕೆ ಮತ್ತು ಕರ್ತವ್ಯ ನಿರ್ಲಕ್ಷತೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಇಲಾಖೆ ವಿಚಾರಣೆ ಬಾಕಿ ಇರಿಸಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಕೆಎಸ್‌ಎಚ್‌ಎ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭಿನಂದನೆ
ಇದೂ ಓದಿ: ‘ತಾಜಾ ತಿಂಡಿ’ಯೂ, ಖ್ಯಾತ ಐರಿಷ್ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್!