ಒಳಗೇನಿದೆ!?

ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ಅಧಿಕಾರಿಗಳಿಂದ ತಪಾಸಣಾ ಅಭಿಯಾನ; ಹೋಟೆಲಿಗರು ಮಾಡಬೇಕಾದ್ದೇನು?

ಸಾಂಕೇತಿಕ ಚಿತ್ರ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಜಾಗೃತಿ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಅಭಿಯಾನದಿಂದಾಗಿ ಇದೇ ಶುಕ್ರವಾರ-ಶನಿವಾರ ರಾಜ್ಯಾದ್ಯಂತ ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಯಲಿದೆ.

ಆಗಸ್ಟ್‌ 30 ಮತ್ತು 31ರಂದು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿನ ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಯಲಿದ್ದು, ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು.

ಮಾತ್ರವಲ್ಲ, ಈ ತಪಾಸಣೆ ಪ್ರತಿ ತಿಂಗಳೂ ನಡೆಯಲಿದ್ದು, ತಿಂಗಳಲ್ಲಿ ಒಂದು ಆಹಾರ ಪದಾರ್ಥದಂತೆ ತಪಾಸಣೆ ನಡೆಸುವಂತೆ ಆಹಾರ ಸುರಕ್ಷತಾಧಿಕಾರಿಗಳಿಗೆ ಟಾರ್ಗೆಟ್‌ ಕೂಡ ನೀಡಲಾಗಿದೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ, ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಿರಂತರ ನಡೆಯಲಿರುವ ಈ ತಪಾಸಣೆಗಳ ಹಿನ್ನೆಲೆಯಲ್ಲಿ ಹೋಟೆಲಿಗರು ಏನೇನು ಜಾಗ್ರತೆ ವಹಿಸಬೇಕು ಎನ್ನುವ ಕುರಿತು ಹೋಟೆಲ್‌ ಉದ್ಯಮದವರಿಂದ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

ಹೋಟೆಲಿಗರು ಮಾಡಬೇಕಾದ್ದೇನು?
  • ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ತಪಾಸಣೆಗೆ ಬರಲಿರುವುದರಿಂದ ಎಫ್‌ಎಸ್‌ಎಸ್‌ಎಐ ನೋಂದಣಿ-ಪರವಾನಗಿ ಮಾಡಿಸಿಟ್ಟುಕೊಂಡಿರುವುದು.
  • ಕನಿಷ್ಠ ಪಕ್ಷ ಒಂದು ಹೋಟೆಲ್‌ಗೆ ಒಬ್ಬರಂತೆ ಫಾಸ್‌ಟ್ಯಾಕ್‌ ಟ್ರೇನಿಂಗ್‌ ಪಡೆದು, ಅದರ ಪ್ರಮಾಣಪತ್ರ ಇರಿಸಿಕೊಂಡಿರಬೇಕು.
  • ಎಲ್ಲರೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಹೋಟೆಲ್‌ ವಾತಾವರಣ ಶುಚಿಯಾಗಿ ಇರಿಸಿಕೊಳ್ಳುವ ಜೊತೆಗೆ ಹೋಟೆಲ್‌ ಸಿಬ್ಬಂದಿಯೂ ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು.
  • ಗೋಬಿ ಮಂಚೂರಿ, ಕಬಾಬ್ ಮುಂತಾದ ಪದಾರ್ಥಗಳಿಗೆ ಕೃತಕ ಬಣ್ಣ ಬಳಸಬಾರದು. ಅದಾಗ್ಯೂ ಬಣ್ಣ ಬಳಸಬೇಕಾದಾಗ ಎಫ್‌ಎಸ್‌ಎಸ್‌ಎಐ ಪ್ರಮಾಣಿತ ಅಧಿಕೃತ ಬಣ್ಣಗಳನ್ನೇ ಉಪಯೋಗಿಸಬೇಕು.
  • ಗಡುವು ಮೀರಿದ ಯಾವುದೇ ಪದಾರ್ಥಗಳನ್ನು ಉಪಯೋಗಿಸಬಾರದು.
  • ಗುಣಮಟ್ಟದ ಹಾಲು-ಮೊಸರು-ಚೀಸ್‌ ಪದಾರ್ಥಗಳನ್ನೇ ಬಳಸಬೇಕು.
  • ಎಲ್ಲಾ ಕಾರ್ಮಿಕರ ವೈದ್ಯಕೀಯ ಪರೀಕ್ಷೆ ನಿಯಮಿತವಾಗಿ ಮಾಡಿಸಿ, ಅದರ ಪ್ರಮಾಣಪತ್ರಗಳನ್ನು ಇರಿಸಿಕೊಂಡಿರಬೇಕು.
  • ಕ್ರಿಮಿನಾಶಕಕ್ಕೆ ಆಗಿಂದಾಗ್ಯೆ ಕ್ರಮಕೈಗೊಂಡು, ಆ ಕುರಿತು ದಾಖಲೆಯನ್ನೂ ಇಟ್ಟುಕೊಂಡಿರಬೇಕು.
  • ಅಡುಗೆ ಸ್ಥಳ, ಗ್ರೈಂಡರ್‌, ರೆಫ್ರಿಜರೇಟರ್‌, ಗೋದಾಮು, ಸ್ವಚ್ಛತಾ ಸ್ಥಳಗಳಲ್ಲಿ ಸದಾ ಶುಚಿತ್ವ ಕಾಪಾಡಬೇಕು.
  • ಕಾರ್ಮಿಕರಿಗೆ ಸಮವಸ್ತ್ರ ನೀಡುವ ಜೊತೆಗೆ, ಏಪ್ರಾನ್‌, ಗ್ಲೋವ್ಸ್‌, ಹೆಡ್‌ ಕ್ಯಾಪ್‌ಗಳನ್ನು ಧರಿಸುವಂತೆ ಸೂಚಿಸಬೇಕು.
  • ಗುಣಮಟ್ಟ ಹಾಗೂ ಸುರಕ್ಷೆ ಕಾಪಾಡುವುದು ನಿತ್ಯದ ಸಂಗತಿ ಆಗುವಂತೆ ಅದನ್ನು ರೂಢಿಗೊಳಿಸಬೇಕು.

ಇದೂ ಓದಿ: ಕೆಎಸ್‌ಎಚ್‌ಎ: ಆ. 31ರಂದು ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ; ಹೋಟೆಲ್‌ ಉದ್ಯಮದ ಸಾಧಕರಿಗೆ ಸನ್ಮಾನ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ