ಒಳಗೇನಿದೆ!?

ವಿದ್ಯುತ್‌ ಸಂಪರ್ಕ ನಾಳೆಯಿಂದಲೇ ಕಡಿತ; ಯಾರಿಗೆಲ್ಲ ಅನ್ವಯ? ಇಲ್ಲಿದೆ ವಿವರ…

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್‌ಸಿ)ದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ನಾಳೆಯಿಂದಲೇ ಪವರ್‌ ಕಟ್‌ ಮಾಡಲು ಮುಂದಾಗಿದೆ.

ಹೌದು.. ಗಡುವು ಮೀರಿದ್ದರೂ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವವರನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ, ಸೆಪ್ಟೆಂಬರ್‌ 1ರಿಂದಲೇ ಅಂಥವರ ವಿದ್ಯುತ್‌ ಸಂಪರ್ಕ ಕಡಿತ ಮಾಡಲಿದೆ.

ಅರ್ಥಾತ್‌, ವಿದ್ಯುತ್‌ ಬಿಲ್ ಬಂದ 30 ದಿನಗಳ ಬಳಿಕವೂ ಶುಲ್ಕ ಪಾವತಿಸದಿದ್ದರೆ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಅಂಥ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಇದು ಸೆಪ್ಟೆಂಬರ್‌ 1ರ ಭಾನುವಾರದಿಂದಲೇ ಅನ್ವಯಿಸುವಂತೆ ಜಾರಿಗೆ ಬರಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಗೃಹ, ವಾಣಿಜ್ಯ, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ ದಿನದೊಳಗೆ ಶುಲ್ಕ ಪಾವತಿಸದಿದ್ದಲ್ಲಿ ರೀಡಿಂಗ್‌ಗೆ ಬರುವ ದಿನ, ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಇದುವರೆಗೆ ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟ‌ರ್‌ ಮಾಪನ ಮಾಡಿದ ಬಳಿಕ, ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್‌ಮೆನ್‌ಗಳ ಜೊತೆ ಮಾಪಕ ಓದುಗರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಇನ್ನು ಮುಂದೆ ಮಾಪಕ ಓದುಗರೊಂದಿಗಿನ ಲೈನ್‌ಮೆನ್‌ಗಳು ವಿದ್ಯುತ್‌ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ.

ವಿದ್ಯುತ್ ಬಿಲ್ ಪಾವತಿಗೆ ಅಂತಿಮ ದಿನಾಂಕದವರೆಗೆ (ಅಂದರೆ ಬಿಲ್ ನೀಡಿದ 15 ದಿನಗಳು) ಯಾವುದೇ ಬಡ್ಡಿ ಇಲ್ಲದೆ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅದಾಗ್ಯೂ, ಅಂತಿಮ ದಿನದ 30 ದಿನಗಳ ಬಳಿಕವೂ ಗ್ರಾಹಕರು ಶುಲ್ಕ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಹೀಗಾದಾಗ ರಶೀದಿ ತೋರಿಸಿ..

ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದಾಗ ಕೆಲವೊಮ್ಮೆ ಬೆಸ್ಕಾಂ ಸಾಫ್ಟ್‌ವೇರ್‌ನಲ್ಲಿ ವಿವರ ನಮೂದಾಗದೆ ಬಾಕಿ ತೋರಿಸುವ ಸಾಧ್ಯತೆ ಇರುತ್ತದೆ. ಅಂಥ ಸಂದರ್ಭದಲ್ಲಿ ವಿದ್ಯುತ್ ಕಡಿತಕ್ಕೆ ಮುಂದಾದರೆ, ಸಿಬ್ಬಂದಿಗೆ ಬಿಲ್ ರಶೀದಿ ತೋರಿಸಿದರೆ ಕಡಿತ ಮಾಡುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಇದೂ ಓದಿ: ಕೆಎಸ್‌ಎಚ್‌ಎ: ಆ. 31ರಂದು ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ; ಹೋಟೆಲ್‌ ಉದ್ಯಮದ ಸಾಧಕರಿಗೆ ಸನ್ಮಾನ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ