ಚೆನ್ನೈ: “ನಮಗೆ ಬರೀ ಬನ್ ಕೊಡಿ, ಕ್ರೀಮ್ ಮತ್ತು ಜಾಮ್ ನಾವೇ ಹಾಕಿಕೊಳ್ಳುತ್ತೇವೆ ಎಂದು ಗ್ರಾಹಕರು ದೂರುತ್ತಾರೆ..” ಎಂಬುದಾಗಿ ಹೋಟೆಲ್ ಮಾಲೀಕರೊಬ್ಬರು ವಿತ್ತ ಸಚಿವರಿಗೆ ಅಹವಾಲು ಸಲ್ಲಿಸಿದ್ದು ಹಾಗೂ ಆ ಬಳಿಕದ ಬೆಳವಣಿಗೆ ಇದೀಗ ಭಾರಿ ಸುದ್ದಿಯಾಗಿದೆ.
ಮಾತ್ರವಲ್ಲದೆ, ಆ ಕುರಿತ ವಿಡಿಯೋ ಕೂಡ ವೈರಲ್ ಆಗಿದ್ದು, ನಂತರ ಹೋಟೆಲ್ ಮಾಲೀಕರು ಮಾತ್ರವಲ್ಲದೆ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಕೂಡ ಕ್ಷಮೆ ಯಾಚಿಸುವಂತಾಗಿದೆ. ಅಷ್ಟಕ್ಕೂ ಇಷ್ಟೆಲ್ಲ ನಡೆಯಲು ಪ್ರಮುಖ ಕಾರಣವಾಗಿದ್ದು ಜಿಎಸ್‌ಟಿ ವಿಚಾರ.
ಆಹಾರಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧಿತ ಸಮಸ್ಯೆಗಳನ್ನು ತಮಿಳುನಾಡಿನ ಶ್ರೀ ಅನ್ನಪೂರ್ಣ ರೆಸ್ಟೋರೆಂಟ್ ಮಾಲೀಕ, ತಮಿಳುನಾಡು ಹೋಟೆಲ್ ಓನರ್ಸ್ ಫೆಡರೇಷನ್ ಅಧ್ಯಕ್ಷರೂ ಆಗಿರುವ ಶ್ರೀನಿವಾಸನ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದಿದ್ದಾರೆ.
ಕೊಯಮತ್ತೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 11ರಂದು ಆಯೋಜಿಸಲಾಗಿದ್ದ ವಿತ್ತ ಸಚಿವರು ಹಾಗೂ ಉದ್ಯಮಗಳ ಮಾಲೀಕರ ನಡುವಿನ ಸಂವಾದದಲ್ಲಿ ಅವರು ಆಹಾರಗಳ ಮೇಲಿನ ಜಿಎಸ್‌ಟಿ ವಿಧಿಸುವಿಕೆಯಲ್ಲಿನ ಸಂಕೀರ್ಣತೆ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಗಮನ ಸೆಳೆದರು.
“ಸಿಹಿತಿನಿಸುಗಳ ಮೇಲೆ ಶೇ.5 ಜಿಎಸ್‌ಟಿ ಇದ್ದರೆ ಖಾರ ಪದಾರ್ಥಗಳ (ಸವರೀಸ್) ಮೇಲೆ ಶೇ.18 ಜಿಎಸ್‌ಟಿ ಇದೆ. ಕ್ರೀಮ್ ತುಂಬಿದ ಬನ್‌ಗಳ ಮೇಲೆ ಶೇ. 18 ಜಿಎಸ್‌ಟಿ ಇದ್ದರೆ, ಬರೀ ಬನ್ ಮೇಲೆ ಜಿಎಸ್‌ಟಿ ಇಲ್ಲ. ʼನಮಗೆ ಬರೀ ಬನ್ ಕೊಡಿ, ಕ್ರೀಮ್ ಮತ್ತು ಜಾಮ್ ನಾವೇ ಹಾಕಿಕೊಳ್ಳುತ್ತೇವೆʼ ಎಂದು ಗ್ರಾಹಕರು ದೂರುತ್ತಾರೆ” ಎಂದು ಶ್ರೀನಿವಾಸನ್ ವಿತ್ತ ಸಚಿವರಿಗೆ ಅಹವಾಲು ಸಲ್ಲಿಸಿದರು. ಶ್ರೀನಿವಾಸನ್ ಅವರ ಈ ಮಾತು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರ ಉದ್ಯಮಿಗಳ ಮುಖದಲ್ಲಿ ನಗು ಮೂಡಿಸಿತ್ತು.
ಜೊತೆಗೆ, ಜಿಎಸ್‌ಟಿ ವ್ಯವಸ್ಥೆಯಲ್ಲಿನ ಸಂಕೀರ್ಣತೆಯಿಂದಾಗಿ ಬಿಲ್ಲಿಂಗ್ ಮಾಡಲೂ ಸಮಸ್ಯೆ ಆಗುತ್ತಿದೆ ಎಂಬುದನ್ನೂ ಸಚಿವರಿಗೆ ಶ್ರೀನಿವಾಸನ್ ತಿಳಿಸಿದರು. ಜಿಎಸ್‌ಟಿಯನ್ನು ರಾಜ್ಯಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕುವುದಿಲ್ಲ ಎಂದ ವಿತ್ತ ಸಚಿವರು, ಅದಾಗ್ಯೂ ಜಿಎಸ್‌ಟಿ ಕುರಿತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ಆಮೇಲಾಗಿದ್ದೇ ಬೇರೆ…
ಶ್ರೀನಿವಾಸನ್ ಅವರು ವಿತ್ತ ಸಚಿವರಿಗೆ ಅಹವಾಲು ಸಲ್ಲಿಸಿದ ಬಳಿಕ ಖಾಸಗಿಯಾಗಿ ನಡೆದ ಸಂಭಾಷಣೆಯೇ ಈ ವಿಷಯ ದೇಶದ ಗಮನ ಸೆಳೆಯಲು ಕಾರಣವಾಗಿದೆ. ಏಕೆಂದರೆ, ಸಂವಾದದಲ್ಲಿ ಸಚಿವರ ಮುಂದೆ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದ ಹೋಟೆಲ್ ಉದ್ಯಮಿ ಶ್ರೀನಿವಾಸನ್, ಬಳಿಕ ವಿತ್ತ ಸಚಿವೆ ಬಳಿ ಕ್ಷಮೆ ಯಾಚಿಸಿದರು.
ನಂತರ ನಡೆದ ಖಾಸಗಿ ಭೇಟಿಯಲ್ಲಿ ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್ ಸಮ್ಮುಖದಲ್ಲಿ ಹೋಟೆಲ್ ಮಾಲೀಕ ಶ್ರೀನಿವಾಸನ್, ‘ನನ್ನ ಮಾತುಗಳಿಗಾಗಿ ದಯವಿಟ್ಟು ಕ್ಷಮಿಸಿ, ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ..ʼ ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರಲ್ಲಿ ಕ್ಷಮೆ ಕೋರಿದರು.
ಕ್ಷಮೆ ಕೋರಿದ ಅಣ್ಣಾಮಲೈ
ವಿತ್ತ ಸಚಿವೆ ಬಳಿ ಹೋಟೆಲ್ ಉದ್ಯಮಿ ಕ್ಷಮೆ ಯಾಚಿಸಿದ್ದ ವಿಡಿಯೋ ತುಣುಕನ್ನು ತಮಿಳುನಾಡು ಬಿಜೆಪಿ ಸೋಷಿಯಲ್ ಮೀಡಿಯಾ ಘಟಕ ಹಂಚಿಕೊಂಡಿತ್ತು. ಅದು ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಈ ಕ್ಷಮೆ ಯಾಚನೆ ವಿಚಾರ ವಿವಾದಕ್ಕೀಡಾಯಿತು. ವಿಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವಂತಾಯಿತು.
ತಮಿಳುನಾಡು ಬಿಜೆಪಿ ಸೋಷಿಯಲ್ ಮೀಡಿಯಾ ಈ ಖಾಸಗಿ ಸಂಭಾಷಣೆಯ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಕೂಡ ಕ್ಷಮೆ ಯಾಚಿಸಿದರು.
ರಾಹುಲ್-ಖಗೆ ಟೀಕೆ
‘ಸಣ್ಣ ಉದ್ಯಮಗಳ ಮಾಲೀಕರು ಸರಳೀಕೃತ ಜಿಎಸ್‌ಟಿಗಾಗಿ ಮಾಡಿಕೊಂಡಿದ್ದ ಬೇಡಿಕೆಯನ್ನು ಜನಪ್ರತಿನಿಧಿಗಳು ದುರಹಂಕಾರ ಹಾಗೂ ಅಗೌರವದಿಂದ ನೋಡಿದ್ದಾರೆʼ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಬಡ ಹಾಗೂ ಮಧ್ಯಮ ವರ್ಗದವರಿಗೆ ತೆರಿಗೆ ಭಯ, ಆದರೆ ಮೋದಿ ಅವರ ಆಪ್ತರಿಗೆ ತೆರಿಗೆ ಕಡಿತʼ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ವಿಚಾರವಾಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮನವಿ
ಇದೂ ಓದಿ: ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…
ಇದೂ ಓದಿ: ಹೋಟೆಲಿಗರ ಪ್ರಮುಖ ಬೇಡಿಕೆ ಸಂಬಂಧ ವಿತ್ತ ಸಚಿವರ ಪ್ರತಿಕ್ರಿಯೆ ಇದು…