ಒಳಗೇನಿದೆ!?

ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ಅಧಿಕಾರಿಗಳು ಈಗಾಗಲೇ ಹೋಟೆಲ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಪ್ರಕರಣಗಳನ್ನೂ ದಾಖಲಿಸುತ್ತಿದ್ದಾರೆ.

ಇದರಿಂದಾಗಿ ಈಗಾಗಲೇ ಎಚ್ಚರಿಕೆಯಿಂದ ಉದ್ಯಮ ನಡೆಸಬೇಕಾಗಿರುವ ಹೋಟೆಲಿಗರು ಇನ್ನು ಕೆಲವು ದಿನಗಳ ಮಟ್ಟಿಗೆ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಏಕೆಂದರೆ ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಈ ತಪಾಸಣೆ ತೀವ್ರಗೊಳಿಸುವ ನಿಟ್ಟಿನಲ್ಲಿ ಎಫ್‌ಎಸ್‌ಎಸ್‌ಎಐ ಹೊಸ ಆದೇಶ ಹೊರಡಿಸಿದೆ. ಈ ಕುರಿತು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷಾ ಆಯುಕ್ತರು, ಎಫ್‌ಎಸ್‌ಎಸ್‌ಎಐ ಪರವಾನಗಿ ನೀಡುವ ಎಲ್ಲ ಕೇಂದ್ರೀಯ ಪ್ರಾಧಿಕಾರಗಳು ಮತ್ತು ಎಫ್‌ಎಸ್‌ಎಸ್‌ಎಐನ ಎಲ್ಲ ಪ್ರಾದೇಶಿಕ ನಿರ್ದೇಶಕರಿಗೂ ಸುತ್ತೋಲೆ ಕಳುಹಿಸಿದೆ.

ದಸರಾ-ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿನಿಸು-ಖಾರ ಪದಾರ್ಥಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ತುಪ್ಪ, ಖೋವಾ, ಪನೀರ್‌ ಇತ್ಯಾದಿಗಳಲ್ಲಿನ ಕಲಬೆರಕೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಈ ವಿಶೇಷ ಅಭಿಯಾನ ನಡೆಸಲು ಎಫ್‌ಎಸ್‌ಎಸ್‌ಎಐ ಮುಂದಾಗಿದೆ.

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಸಿಹಿತಿನಿಸು, ಖಾರ ಪದಾರ್ಥಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ತುಪ್ಪ, ಖೋವಾ, ಪನೀರ್ ಮುಂತಾದವುಗಳ ಬೇಡಿಕೆ ಹೆಚ್ಚಾಗುವುದರಿಂದ ಅವುಗಳ ಕಲಬೆರಕೆ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಅಂಕಿತ ಅಧಿಕಾರಿಗಳು ತಂತಮ್ಮ ವ್ಯಾಪ್ತಿಗಳಲ್ಲಿ ವಿಶೇಷ ಪರಿಶೀಲನೆ, ಅನುಷ್ಠಾನ ಅಭಿಯಾನಗಳನ್ನು ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ ಸಿಹಿತಿನಿಸು, ಖಾರ ಪದಾರ್ಥ, ತುಪ್ಪ, ಖೋವಾ, ಪನೀರ್‌ಗಳ ಉತ್ಪಾದನೆ ನಡೆಯುವ ಸ್ಥಳಗಳಿಗೆ ತೆರಳಿ ತಪಾಸಣೆ ನಡೆಸಬೇಕು. ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಫುಡ್‌ ಸೇಫ್ಟಿ ಆನ್‌ ವ್ಹೀಲ್ಸ್‌ ಕೂಡ ಇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಆದೇಶವನ್ನು ಅತಿ ಮುಖ್ಯವಾದದ್ದು ಎಂದು ಪರಿಗಣಿಸಿ ಕಾರ್ಯಪ್ರವೃತ್ತರಾಗುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದೂ ಓದಿ: ಬಿಬಿಎಚ್‌ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್‌ಎಸ್‌ಎಸ್ಎಐ ಫಾಸ್ಟ್ಯಾಕ್‌ ಟ್ರೇನಿಂಗ್

ಇದೂ ಓದಿ: ಭಾರತೀಯ ಆಹಾರ ಸೇವಾ ಉದ್ಯಮದ ಗಾತ್ರವೆಷ್ಟು ಗೊತ್ತೇ?; ಎನ್‌ಆರ್‌ಎಐ ಐಎಫ್‌ಎಸ್‌ಆರ್‌ ಬಿಡುಗಡೆ

ಇದೂ ಓದಿ:ಕಬಾಬ್‌-ಮಂಚೂರಿಯನ್‌ ಬಳಿಕ ಚಹಾ ಪುಡಿಯದ್ದೂ ಬಣ್ಣ ಬಯಲು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ