ಚೆನ್ನೈ: ಹೋಟೆಲ್ ಮಾಲೀಕರಿಗೊಬ್ಬರಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಕ್ಷಮೆ ಯಾಚಿಸುವಂತಾಗಿದೆ. ಅಲ್ಲದೆ, ಖಾಸಗಿ ಸಂಭಾಷಣೆಯ ಆ ವಿಡಿಯೋ ರಾಜಕೀಯ ಸಂಚಲನಕ್ಕೂ ಕಾರಣವಾಯಿತು.
ಆ ಸಂಬಂಧ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷರೂ ಆಗಿರುವ ಕೆ. ಅಣ್ಣಾಮಲೈ ಅವರು ತಮಿಳುನಾಡಿನ ಶ್ರೀ ಅನ್ನಪೂರ್ಣ ರೆಸ್ಟೋರೆಂಟ್ ಮಾಲೀಕ, ತಮಿಳುನಾಡು ಹೋಟೆಲ್ ಓನರ್ಸ್ ಫೆಡರೇಷನ್‌ನ ಅಧ್ಯಕ್ಷರೂ ಆಗಿರುವ ಶ್ರೀನಿವಾಸನ್ ಅವರ ಕ್ಷಮೆ ಯಾಚಿಸಿದ್ದಾರೆ.
ಆಹಾರಗಳ ಮೇಲಿನ ಜಿಎಸ್‌ಟಿ ವಿಧಿಸುವಿಕೆಯಲ್ಲಿನ ಸಂಕೀರ್ಣತೆ ಕುರಿತು ಕೊಯಮತ್ತೂರು ಜಿಲ್ಲೆಯಲ್ಲಿ ಸೆ.11ರಂದು ಆಯೋಜಿಸಿದ್ದ ವಿತ್ತ ಸಚಿವರು ಹಾಗೂ ಉದ್ಯಮಗಳ ಮಾಲೀಕರ ನಡುವಿನ ಸಂವಾದದಲ್ಲಿ ಶ್ರೀನಿವಾಸನ್ ಸಚಿವೆ ನಿರ್ಮಲಾ ಸೀತಾರಾಮನ್ ಗಮನಕ್ಕೆ ತಂದಿದ್ದರು.
ಆದರೆ, ಬಳಿಕ ಖಾಸಗಿಯಾಗಿ ಈ ಬಗ್ಗೆ ವಿತ್ತ ಸಚಿವೆ ಬಳಿ ಕ್ಷಮೆ ಯಾಚಿಸಿದ್ದರು. ತಮಿಳುನಾಡು ಬಿಜೆಪಿ ಸೋಷಿಯಲ್ ಮೀಡಿಯಾ ಈ ಖಾಸಗಿ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಅದು ವೈರಲ್ ಆಗಿದ್ದು, ಆ ಬಗ್ಗೆ ವಿಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದವು. ಕೊನೆಗೆ ಆ ಖಾಸಗಿ ವಿಡಿಯೋ ಬಹಿರಂಗ ಸಂಬಂಧ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಕ್ಷಮೆ ಯಾಚಿಸುವಂತಾಯಿತು.
ಖಾಸಗಿ ಸಂಭಾಷಣೆಯ ವಿಡಿಯೋವನ್ನು ತಮಿಳುನಾಡು ಬಿಜೆಪಿಯವರು ಹಂಚಿಕೊಂಡಿದ್ದಕ್ಕಾಗಿ ಅವರ ಪರವಾಗಿ ನಾನು ಹೋಟೆಲ್ ಉದ್ಯಮಿ ಮಾತ್ರವಲ್ಲದೆ, ನಮ್ಮ ಗೌರವಾನ್ವಿತ ವಿತ್ತ ಸಚಿವರ ಕ್ಷಮೆಯನ್ನೂ ಯಾಚಿಸುತ್ತಿದ್ದೇನೆ.
ಅನ್ನಪೂರ್ಣ ರೆಸ್ಟೋರೆಂಟ್ ಸಮೂಹದ ಶ್ರೀನಿವಾಸನ್ ಅವರ ಜೊತೆ ನಾನು ಮಾತನಾಡಿದ್ದು, ಖಾಸಗಿತನದ ಉಲ್ಲಂಘನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಶ್ರೀನಿವಾಸನ್ ಅಣ್ಣ ಅವರು ತಮಿಳುನಾಡು ಉದ್ಯಮ ಸಮುದಾಯದ ಆಧಾರಸ್ತಂಭ ಆಗಿದ್ದು, ರಾಜ್ಯ ಹಾಗೂ ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದ ಅಣ್ಣಾಮಲೈ, ವಿಡಿಯೋ ಬಹಿರಂಗ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ʼಸಿಹಿತಿನಿಸುಗಳ ಮೇಲೆ ಶೇ.5 ಜಿಎಸ್‌ಟಿ ಇದ್ದರೆ ಖಾರ ಪದಾರ್ಥಗಳ (ಸವರೀಸ್) ಮೇಲೆ ಶೇ.18 ಜಿಎಸ್‌ಟಿ ಇದೆ. ಕ್ರೀಮ್ ತುಂಬಿದ ಬನ್‌ಗಳ ಮೇಲೆ ಶೇ. 18 ಜಿಎಸ್‌ಟಿ ಇದ್ದರೆ ಬರೀ ಬನ್ ಮೇಲೆ ಜಿಎಸ್‌ಟಿ ಇಲ್ಲ. ನಮಗೆ ಬರೀ ಬನ್ ಕೊಡಿ, ಕ್ರೀಮ್ ಮತ್ತು ಜಾಮ್ ನಾವು ಹಾಕಿಕೊಳ್ಳುತ್ತೇವೆ ಎಂದು ಗ್ರಾಹಕರು ದೂರುತ್ತಾರೆʼ ಎಂದು ಶ್ರೀನಿವಾಸನ್ ವಿತ್ತ ಸಚಿವರ ಗಮನಕ್ಕೆ ತಂದಿದ್ದರು. ಈ ಮಾತು ನಿರ್ಮಲಾ ಸೀತಾರಾಮನ್ ಹಾಗೂ ಇತರ ಉದ್ಯಮಿಗಳ ಮುಖದಲ್ಲಿ ನಗು ಮೂಡಿಸಿತ್ತು.
ಜಿಎಸ್‌ಟಿಯಲ್ಲಿನ ಸಂಕೀರ್ಣತೆಯಿಂದಾಗಿ ಬಿಲ್ಲಿಂಗ್ ಮಾಡಲೂ ಸಮಸ್ಯೆ ಆಗುತ್ತಿದೆ ಎಂದು ಶ್ರೀನಿವಾಸನ್ ಗಮನ ಸೆಳೆದಿದ್ದರು. ಜಿಎಸ್‌ಟಿಯನ್ನು ರಾಜ್ಯಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕುವುದಿಲ್ಲ ಎಂದ ವಿತ್ತ ಸಚಿವರು, ಅದಾಗ್ಯೂ ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದರು.
ನಂತರ ನಡೆದ ಖಾಸಗಿ ಭೇಟಿಯಲ್ಲಿ ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್ ಸಮ್ಮುಖದಲ್ಲಿ ಹೋಟೆಲ್ ಮಾಲೀಕ ಶ್ರೀನಿವಾಸನ್ ವಿತ್ತ ಸಚಿವರ ಕ್ಷಮೆ ಯಾಚಿಸಿದ್ದರು. ‘ನನ್ನ ಮಾತುಗಳಿಗಾಗಿ ದಯವಿಟ್ಟು ಕ್ಷಮಿಸಿ, ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲʼ ಎಂಬುದಾಗಿ ಕ್ಷಮೆ ಕೋರಿದ್ದರು.
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ
ಇದೂ ಓದಿ: ವಿದ್ಯುತ್ ಸಂಪರ್ಕ ನಾಳೆಯಿಂದಲೇ ಕಡಿತ; ಯಾರಿಗೆಲ್ಲ ಅನ್ವಯ? ಇಲ್ಲಿದೆ ವಿವರ…