ಬೆಂಗಳೂರು: ಪೆಟ್ರೋಲ್-ಡೀಸೆಲ್ ದರವನ್ನು ಇಳಿಸುವಂತೆ ರಾಜಧಾನಿ ಬೆಂಗಳೂರಿನ ಹೊಟೇಲುಗಳ ಸಂಘಟಿತ ವೇದಿಕೆ ಆಗಿರುವ ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ) ಆಗ್ರಹಿಸಿದೆ.
ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ (159 ಲೀಟರ್) ಕೇವಲ 75 ಡಾಲರ್ ಆಗಿರುತ್ತದೆ. ಅದರ ಅನುಸಾರ ಪ್ರಸ್ತುತ ದರ ಒಂದು ಲೀಟರ್‌ಗೆ 39 ರೂಪಾಯಿ. ಈ ರೀತಿ ಬೆಲೆ ಕಡಿಮೆಯಾದರೂ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡದಿರುವುದು ಶೋಚನೀಯ ಎಂದು ಬಿಎಚ್‌ಎ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಅಂದಾಜು ಶೇ.20 ಸೀಮಾ ಸುಂಕ ಹಾಗೂ ರಾಜ್ಯ ಸರ್ಕಾರ ಶೇ. 29.84 ಮಾರಾಟ ತೆರಿಗೆ ವಿಧಿಸಿರುವುದು ಅಸಮಂಜಸ. ಪ್ರಸ್ತುತ ಪೆಟ್ರೋಲ್ ದರ ಲೀಟರ್‌ಗೆ 102.86 ಹಾಗೂ ಡೀಸೆಲ್ ದರ ಲೀಟರ್‌ಗೆ 88.94 ರೂಪಾಯಿ ಆಗಿರುತ್ತದೆ.
ಈ ರೀತಿಯ ದರ ಏರಿಕೆಯಿಂದ ದಿನಬಳಕೆಯ ಹಾಲು, ದವಸ-ಧಾನ್ಯ ಮುಂತಾದವುಗಳ ಸಾಗಾಣಿಕಾ ವೆಚ್ಚ ಕೂಡ ಹೆಚ್ಚಾಗುವುದರ ಜೊತೆಗೆ ಆತಿಥೇಯ, ಆಹಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೂ ಭಾರಿ ಹೊಡೆತ ಬೀಳುತ್ತದೆ.
ಅವೈಜ್ಞಾನಿಕವಾಗಿ ದರ ಏರಿಕೆ ಮಾಡಿ ಜನಸಾಮಾನ್ಯರು ಹಾಗೂ ಉದ್ಯಮಿಗಳ ಮೇಲೆ ಹೊರೆ ಹಾಕುವುದು ನ್ಯಾಯೋಚಿತವಲ್ಲ. ಆದಷ್ಟು ಬೇಗ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವುದರ ಜೊತೆಗೆ ಅವೆರಡನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ಬೆಂಗಳೂರು ಹೋಟೆಲುಗಳ ಸಂಘ ಒತ್ತಾಯಿಸಿದೆ.
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಹೋಟೆಲ್ ಮಾಲೀಕರ ಕುರಿತ ವಿಡಿಯೋ ವೈರಲ್, ಮಾಜಿ ಐಪಿಎಸ್ ಅಧಿಕಾರಿಯಿಂದ ಕ್ಷಮೆ ಯಾಚನೆ
ಇದೂ ಓದಿ: ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಇಳಿಸಲು ನೂರಾರು ಆಹಾರೋದ್ಯಮಿಗಳ ಮನವಿ