ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇರುವ ಹೋಟೆಲ್ ಉದ್ಯಮದವರ ಸಂಘಟಿತ ಶಕ್ತಿ ಆಗಿರುವ ಬೆಂಗಳೂರು ಹೋಟೆಲುಗಳ ಸಂಘವು ಉದ್ಯಮಕ್ಕೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಕ್ರಮಕೈಗೊಂಡಿದೆ.
ಅದು ಸಂಘವನ್ನು ಬಲಿಷ್ಠಗೊಳಿಸುವ ಜೊತೆಗೆ ಉದ್ಯಮಿಗಳಿಗೂ ಹೆಚ್ಚಿನ ಶಕ್ತಿ ನೀಡುವ ಸಲುವಾಗಿ ಸದಸ್ಯತ್ವ ವೃದ್ಧಿಗೆ ಮುಂದಾಗಿದೆ. ಅದಕ್ಕೆಂದೇ ಹೊಸ ಸಮಿತಿಯನ್ನೂ ಮಾಡಲಾಗಿದ್ದು, ಅಭಿಯಾನೋಪಾದಿಯಲ್ಲಿ ಸದಸ್ಯತ್ವ ಪಡೆಯಲಾಗುತ್ತಿದೆ.
ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ)ದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್ ಅವರ ನೇತೃತ್ವದಲ್ಲಿ ಸಂಘದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸದಸ್ಯತ್ವಕ್ಕೂ ಹೊಸ ಸಮಿತಿಯೊಂದನ್ನು ಸೃಷ್ಟಿಸಲಾಗಿದೆ.
ಹೆಚ್ಚಿನ ಜವಾಬ್ದಾರಿ
ಬಿಎಚ್‌ಎ ಸದಸ್ಯರ ಸಂಖ್ಯೆ ಹೆಚ್ಚಿಸುವ ಸಲುವಾಗಿ ರೂಪಿಸಲಾಗಿರುವ ಬಿಎಚ್‌ಎ ಸದಸ್ಯತ್ವ ಅಭಿವೃದ್ಧಿ ಸಮಿತಿಗೆ ಬಿಎಚ್‌ಎ ಉಪಾಧ್ಯಕ್ಷ ಎ. ಶಂಕರ್ ಕುಂದರ್ ಅವರನ್ನು ಅಧ್ಯಕ್ಷರನ್ನಾಗಿಸಿ, ಬಿಎಚ್‌ಎ ಜಂಟಿ ಕಾರ್ಯದರ್ಶಿ ಬಿ.ಎಂ. ಧನಂಜಯ ಅವರನ್ನು ಉಪಾಧ್ಯಕ್ಷರನ್ನಾಗಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.
ಸದಸ್ಯತ್ವ ಶುಲ್ಕ ವಿವರ
ಸದಸ್ಯರಾಗುವ ಎಲ್ಲರೂ ನೋಂದಣಿ ಶುಲ್ಕವಾಗಿ ಒಂದು ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಅಲ್ಲದೆ, ಉದ್ಯಮದ ವರ್ಗಕ್ಕೆ ಅನುಗುಣವಾಗಿ 1,200 ಅಥವಾ 2,400 ರೂಪಾಯಿ ವಾರ್ಷಿಕ ವಂತಿಗೆ ಕೂಡ ಇರುತ್ತದೆ.
ಯಾರು ಸದಸ್ಯರಾಗಬಹುದು?
ಹೋಟೆಲ್ ಹಾಗೂ ಹೋಟೆಲ್ ಸಂಬಂಧಿತ ಉದ್ಯಮದಲ್ಲಿದ್ದು ಟ್ರೇಡ್ ಲೈಸೆನ್ಸ್ ಹೊಂದಿರುವ ಎಲ್ಲರೂ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರಾಗಬಹುದು. ಒಂದು ಟ್ರೇಡ್ ಲೈಸೆನ್ಸ್‌ಗೆ ಒಂದರಂತೆ ಸದಸ್ಯತ್ವ ನೀಡಲಾಗುತ್ತದೆ.
ಚಾಟ್ ಸೆಂಟರ್, ಸ್ವೀಟ್ ಸ್ಟಾಲ್, ಕಾಫಿ-ಚಹಾ ಸ್ಟಾಲ್, ಕಾಂಡಿಮೆಂಟ್ಸ್, ಜ್ಯೂಸ್ ಸೆಂಟರ್, ಐಸ್‌ಕ್ರೀಮ್ ಪಾರ್ಲರ್, ಬೇಕರಿಗಳವರು ನೋಂದಣಿ ಶುಲ್ಕದ ಜೊತೆಗೆ 1,200 ರೂ. ನೀಡಿ ಸದಸ್ಯತ್ವ ಪಡೆಯಬಹುದು.
ಹೋಟೆಲು, ಭೋಜನ ಗೃಹ, ಕೇಟರಿಂಗ್ ಕೇಂದ್ರ, ಉಪಾಹಾರ ಗೃಹ, ಬಾರ್ & ರೆಸ್ಟೋರೆಂಟ್, ಪಬ್ & ಬ್ರಿವರೀಸ್, ಫೈನ್ ಡೈನಿಂಗ್, ಲಾಡ್ಜ್, ವಸತಿಗೃಹ, ಪಾರ್ಟಿ ಹಾಲ್‌ಗಳವರು ನೋಂದಣಿ ಶುಲ್ಕದ ಜೊತೆಗೆ 2,400 ವಾರ್ಷಿಕ ವಂತಿಗೆ ನೀಡಬೇಕಾಗುತ್ತದೆ. ಐದು ಅಥವಾ ಅದಕ್ಕಿಂತ ಹೆಚ್ಚು ಶಾಖೆಗಳಿರುವ ಗ್ರೂಪ್ ಹೋಟೆಲ್ ಇತ್ಯಾದಿಗಳಾದರೆ ಪ್ರತಿ ಶಾಖೆಗೆ 1,200 ರೂ. ವಾರ್ಷಿಕ ವಂತಿಗೆ ನೀಡಬೇಕಾಗುತ್ತದೆ.
ಸದಸ್ಯತ್ವದ ಅವಧಿ
ಸದಸ್ಯತ್ವದ ಅವಧಿ ಪ್ರತಿವರ್ಷದ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾ.31ರ ವರೆಗೆ ಇರುತ್ತದೆ. ಸದಸ್ಯರು ಪ್ರತಿ ವರ್ಷದ ಏ.30ರ ಒಳಗೆ ಸದಸ್ಯತ್ವ ಶುಲ್ಕ ನೀಡಿ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಆ ರೀತಿ ಮಾಡದಿರುವ ಸದಸ್ಯರು ಸಂಘದಿಂದ ಲಿಖಿತ ಸೂಚನೆ ನೀಡಿದ 15 ದಿನಗಳ ಒಳಗೆ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ತಪ್ಪಿದರೆ ಅಂಥ ಸದಸ್ಯರು ಕಾರ್ಯಕಾರಿ ಸಮಿತಿ ಸಭೆ, ಸಾಮಾನ್ಯ ಮಹಾಸಭೆಗಳಲ್ಲಿ ಭಾಗವಹಿಸುವ, ಮತ ಚಲಾಯಿಸುವ ಹಾಗೂ ನಾಮನಿರ್ದೇಶನಕ್ಕೆ ಒಳಗಾಗುವ ಇಲ್ಲವೇ ನಾಮನಿರ್ದೇಶನ ಮಾಡುವ ಅವಕಾಶ ಕಳೆದುಕೊಳ್ಳುತ್ತಾರೆ. ಅದಾಗ್ಯೂ ಸದಸ್ಯತ್ವ ನವೀಕರಿಸಿಕೊಳ್ಳದಿದ್ದಲ್ಲಿ ಸದಸ್ಯತ್ವ ರದ್ದುಗೊಳ್ಳುತ್ತದೆ.
ಸದಸ್ಯತ್ವದ ಪ್ರಯೋಜನ
ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆದವರಿಗೆ ವಿಶೇಷ ಪ್ರಯೋಜನಗಳು ಇರುತ್ತವೆ.
- ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಹಲವು ಪ್ರಯೋಜನಕಾರಿ ವಿಷಯಗಳನ್ನು ಹಂಚಿಕೊಳ್ಳಲಾಗುವ ʼಬಿಎಚ್‌ಎ ವಾಟ್ಸ್ಯಾಪ್ ಗ್ರೂಪ್ʼನಲ್ಲಿ ಸದಸ್ಯರ ಫೋನ್ ನಂಬರ್ ಸೇರಿಸಲಾಗುತ್ತದೆ. ಇದರಿಂದಾಗಿ ಎಲ್ಲ ಅಪ್‌ಡೇಟ್ಸ್ ತಕ್ಷಣಕ್ಕೆ ಸಿಗುತ್ತವೆ.
- ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿ ವಿವಿಧ ಇಲಾಖೆಗಳಿಂದ ಹೊರಡುವ ಆದೇಶ ಇತ್ಯಾದಿ ಮಾಹಿತಿಗಳು ಸದಸ್ಯರಿಗೆ ತಕ್ಷಣಕ್ಕೆ ತಲುಪಿಸಲಾಗುತ್ತದೆ.
- ಉದ್ಯಮಕ್ಕೆ ಸಂಬಂಧಿತ ವಿವಿಧ ಇಲಾಖೆಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಪರಿಹರಿಸಲು ಯತ್ನಿಸಲಾಗುತ್ತದೆ.
- ಉದ್ಯಮಕ್ಕೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಮಾಹಿತಿ, ಮಾರ್ಗದರ್ಶನ ಆಗಾಗ್ಯೆ ನೀಡಲಾಗುತ್ತದೆ.
- ಉದ್ಯಮಕ್ಕೆ ಸಂಬಂಧಿಸಿ ಯಾವುದೇ ಇಲಾಖೆಗಳಿಂದ ಅಥವಾ ಬೇರೆ ಇನ್ಯಾವುದೇ ಕಡೆಗಳಿಂದ ಅಡ್ಡಿ-ಆತಂಕಗಳಿದ್ದರೆ ಆ ಕುರಿತು ಮಧ್ಯಪ್ರವೇಶಿಸಿ ಸೂಕ್ತ ಸಹಾಯ ಒದಗಿಸಲಾಗುತ್ತದೆ.
- ಟ್ರೇಡ್ ಲೈಸೆನ್ಸ್, ತೆರಿಗೆ, ಇಎಸ್‌ಐ, ಇಪಿಎಫ್‌ಒ, ಬಿಬಿಎಂಪಿ, ಪೊಲೀಸ್ ಇಲಾಖೆ ಇತ್ಯಾದಿಗಳ ನಡುವಿನ ಅಗತ್ಯ ವ್ಯವಹಾರಕ್ಕೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಒದಗಿಸುವ ಜೊತೆಗೆ ಸಲಹೆ-ಸಹಕಾರ ನೀಡಲಾಗುತ್ತದೆ.
- ವರ್ಷಕ್ಕೊಮ್ಮೆ ಆಯೋಜಿಸುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆ ಆಗುವ ನಿಟ್ಟಿನಲ್ಲಿ ಬಿಎಚ್‌ಎ ಸದಸ್ಯರಿಗೆ ಅವಕಾಶ ಇರುತ್ತದೆ.
- ಕೆಲವೊಂದು ಸಂದರ್ಭಗಳಲ್ಲಿ ಸಂಘ ಯಾವುದಾದರೂ ಸುರಕ್ಷತಾ ಕ್ರಮ ಹಾಗೂ ಕಾನೂನು ವಿನಾಯಿತಿಗಳನ್ನು ಪಡೆಯುತ್ತದೆ. ಅಂಥ ಸಂದರ್ಭಗಳಲ್ಲಿ ಬಿಎಚ್‌ಎ ಸದಸ್ಯತ್ವ ಇರುವವರಿಗೂ ಅದರ ಪ್ರಯೋಜನ ಸಿಗುತ್ತದೆ.
- ಬಿಎಚ್‌ಎ ಸದಸ್ಯರಿಗೆ ಫಾಸ್ಟ್ಯಾಕ್ ಟ್ರೇನಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
- ಎಲ್ಲಕ್ಕಿಂತ ಹೆಚ್ಚು ಬಿಎಚ್‌ಎ ಸದಸ್ಯರಾಗುವುದರಿಂದ ವೈಯಕ್ತಿಕ ಉದ್ಯಮಕ್ಕೆ ಒಂದು ಸಂಘಟಿತ ಶಕ್ತಿ ಲಭಿಸುತ್ತದೆ.
ಬಿಎಚ್‌ಎ ಸದಸ್ಯತ್ವ ಸಮಿತಿ ಪದಾಧಿಕಾರಿಗಳು
- ಎ. ಶಂಕರ್ ಕುಂದರ್: ಅಧ್ಯಕ್ಷ
- ಬಿ.ಎಂ. ಧನಂಜಯ: ಉಪಾಧ್ಯಕ್ಷ
- ಎನ್. ವೀರೇಂದ್ರ ಕಾಮತ್
- ಪಿ.ಸಿ. ರಾವ್
- ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
- ನರಸಿಂಹ ಮೂರ್ತಿ ಮಧ್ಯಸ್ಥ
- ಸುಹಾಸ್ ಉಪಾಧ್ಯಾಯ
- ರೂಪ ಶಾಸ್ತ್ರಿ
- ಪ್ರಭಾಕರ ಹೆಗಡೆ
- ಗುರುಪ್ರಸಾದ್
- ಜಿ.ಕೆ. ಪ್ರಮೋದ್
- ಸುಧಾಕರ್ ಶೆಟ್ಟಿ
- ಶೇಖರ್ ನಾಯ್ಡು
ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!