ಒಳಗೇನಿದೆ!?

ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?

ಸಾಂಕೇತಿಕ ಚಿತ್ರ

ಬೆಂಗಳೂರು: ಅಂಗಡಿ-ಹೋಟೆಲ್‌ ಮುಂತಾದ ಆಹಾರ ಮಳಿಗೆಗಳಲ್ಲಿ ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವ ಕಾನೂನನ್ನು ಮೊದಲ ಬಾರಿಗೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ.

ಅದರ ಬೆನ್ನಿಗೇ ಹಿಮಾಚಲಪ್ರದೇಶದ ಕಾಂಗ್ರೆಸ್‌ ಸರ್ಕಾರ ಕೂಡ ಇದೇ ಕಾನೂನನ್ನು ಜಾರಿಗೆ ತಂದಿದ್ದು, ಎಲ್ಲ ಥರದ ಆಹಾರ ಮಳಿಗೆಗಳಲ್ಲೂ ಮಾಲೀಕರು, ಮ್ಯಾನೇಜರ್‌ ಮತ್ತು ಆಪರೇಟರುಗಳ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆದೇಶ ಮಾಡಿದೆ.

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಎಲ್ಲ ಅಂಗಡಿ-ಹೋಟೆಲ್‌-ಢಾಬಾಗಳಲ್ಲಿ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಮಂಗಳವಾರವಷ್ಟೇ ಆದೇಶ ಹೊರಡಿಸಿತ್ತು. ರೋಟಿ-ಚಪಾತಿ ಮೇಲೆ ಉಗುಳುವುದು, ಹಣ್ಣಿನ ಜ್ಯೂಸ್‌ನಲ್ಲಿ ಮೂತ್ರ ಬೆರೆಸುವುದು ಮುಂತಾದ ಘಟನೆಗಳು ನಡೆದ ಕಾರಣ ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ಉತ್ತರಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ.

ಹಿಮಾಚಲಪ್ರದೇಶದ ಕಾಂಗ್ರೆಸ್ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಇಂಥದ್ದೇ ಆದೇಶವನ್ನೂ ಹೊರಡಿಸಿದೆ. ಹಿಮಾಚಲ ಪ್ರದೇಶದಲ್ಲಿರುವ ಎಲ್ಲ ಆಹಾರ ಮಳಿಗೆಗಳ ಫಲಕದಲ್ಲಿ ಮಾಲೀಕರು, ಮ್ಯಾನೇಜರ್‌ಗಳು ಮತ್ತು ಆಪರೇಟರ್‌ಗಳ ಹೆಸರು ಹಾಕುವುದನ್ನು ಕಡ್ಡಾಯ ಮಾಡಿ ಅಲ್ಲಿನ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಹಿಮಾಚಲಪ್ರದೇಶದಲ್ಲಿ ಅಂಗಡಿಗಳ ಫಲಕದಲ್ಲಿ ಹೆಸರು ನಮೂದು ಕಡ್ಡಾಯ ಮಾಡಿರುವುದನ್ನು ಕಾಂಗ್ರೆಸ್ ನಾಯಕ, ಸಚಿವ ವಿಕ್ರಮಾದಿತ್ಯ ಸಿಂಗ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ.

‘ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳ ಜೊತೆ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಆಗದಿರಲಿ ಎಂಬ ಉದ್ದೇಶ ಈ ಆದೇಶದ ಹಿಂದಿದೆʼ ಎಂದು ಅವರು ವಿವರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಆಹಾರ ಕಲಬೆರಕೆ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದ ಸಿಎಂ ಯೋಗಿ ಆದಿತ್ಯನಾಥ, ಇಂಥ ಘಟನೆಗಳಿಂದ ಕಿರಿಕಿರಿ ಆಗುವುದು ಮಾತ್ರವಲ್ಲದೆ ಈ ಆಹಾರ ಪದಾರ್ಥ ಸೇವಿಸಿದವರ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತದೆ ಎಂದು ಹೇಳಿದ್ದರು. ಇಂಥದ್ದೇ ಅಭಿಪ್ರಾಯವನ್ನು ಹಿಮಾಚಲಪ್ರದೇಶದ ಕಾಂಗ್ರೆಸ್‌ ಸಚಿವ ವಿಕ್ರಮಾದಿತ್ಯ ಸಿಂಗ್‌ ಕೂಡ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ʼಶ್ರೀಬ್ರಹ್ಮಲಿಂಗೇಶ್ವರʼ ಎಂಬ ಹೆಸರಿನಲ್ಲಿ ಬೇರೆ ಧರ್ಮದವರು ಬೇಕರಿ-ಕಾಂಡಿಮೆಂಟ್ಸ್‌ ಸ್ಟೋರ್‌ವೊಂದನ್ನು ನಡೆಸುತ್ತಿದ್ದುದನ್ನು ಗಮನಿಸಿದ್ದ ಸಾಮಾಜಿಕ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂಥ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು/ಗುರುತು ಪ್ರದರ್ಶಿಸುವ ಕಾನೂನು ಕಡ್ಡಾಯವಾದರೆ ಹೇಗೆ ಎಂಬ ಜಿಜ್ಞಾಸೆಯೂ ಕೆಲವರಲ್ಲಿ ಮೂಡಿದೆ.

ಈ ಹಿನ್ನೆಲೆಯಲ್ಲಿ ಅಂಗಡಿ-ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಅದನ್ನು ಮತ ಚಲಾವಣೆ ಮೂಲಕ ಕಲೆ ಹಾಕಲಾಗುತ್ತಿದೆ. ʼಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕರ್ನಾಟಕದಲ್ಲೂ ಕಡ್ಡಾಯ ಆಗಬೇಕೇ ಬೇಡವೇ?’ ಎಂಬುದನ್ನು ನಿರ್ಧರಿಸಲು ನಿಮ್ಮ ಅಭಿಪ್ರಾಯವೇ ನಿರ್ಣಾಯಕವಾಗಲಿ. ನೀವು ಮತ ಚಲಾಯಿಸುವ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.

ಸಮೀಕ್ಷೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಇದೂ ಓದಿ: ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ