ಬೆಂಗಳೂರು: ಫೆಡರೇಷನ್ ಆಫ್ ಹೋಟೆಲ್ & ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ) ಅಧ್ಯಕ್ಷರಾಗಿ ಬೆಂಗಳೂರಿನ ಮೌರ್ಯ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ದಕ್ಷಿಣ ಭಾರತ ಹೋಟೆಲ್ & ರೆಸ್ಟೋರೆಂಟ್ ಅಸೋಸಿಯೇಷನ್ (ಎಸ್ಐಎಚ್ಆರ್ಎ) ಅಧ್ಯಕ್ಷರೂ ಆಗಿರುವ ಕೆ.ಶ್ಯಾಮರಾಜು ಆಯ್ಕೆ ಆಗಿದ್ದಾರೆ. ಈ ಮೂಲಕ ಕಳೆದ ಐವತ್ತು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಸಲ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ.
ದೆಹಲಿಯಲ್ಲಿ ನಡೆದ ಫೆಡರೇಷನ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಶ್ಯಾಮರಾಜು ಮತ್ತು ಇತರ ವ್ಯವಸ್ಥಾಪಕ ಸಮಿತಿ ಸದಸ್ಯರನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಯಿತು. ಶ್ಯಾಮರಾಜು ಅವರು ಹೊಸ ಸ್ಥಾನದ ಜೊತೆಗೆ ಕರ್ನಾಟಕ ಟೂರಿಸಂ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅಧಿಕಾರ ವಹಿಸಿಕೊಂಡ ಅವರು, ಆತಿಥ್ಯ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ಭದ್ರಪಡಿಸುವುದು, ಸಬ್ಸಿಡಿಗಳನ್ನು ಪಡೆಯುವುದು ಮತ್ತು ಮಾನವ ಸಂಪನ್ಮೂಲ ಸವಾಲುಗಳನ್ನು ಎದುರಿಸುವುದು ಸೇರಿದಂತೆ ಎಫ್‌ಎಚ್‌ಆರ್‌ಎಐನ ಆದ್ಯತೆಗಳನ್ನು ವಿವರಿಸಿದರು.
ಮುಂಬರುವ ವರ್ಷಗಳಲ್ಲಿ ಪ್ರವಾಸೋದ್ಯಮವು ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿ ಆಗುವ ನಿರೀಕ್ಷೆ ಇರುವುದರಿಂದ ಹೊಟೇಲ್ ಉದ್ಯಮಿಗಳನ್ನು ಬೆಂಬಲಿಸಲು ಮತ್ತು ಹೊಸ ಹೂಡಿಕೆಗಳಿಗೆ ಅನುಕೂಲವಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಸಹಯೋಗ ಸಾಧಿಸುವಲ್ಲಿ ಫೆಡರೇಷನ್‌ನ ಬದ್ಧತೆಯನ್ನೂ ಅವರು ತಿಳಿಸಿದರು.
ಫೆಡರೇಷನ್ ಆಫ್ ಹೋಟೆಲ್ & ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ) ಭಾರತದ ಆತಿಥ್ಯ ಕ್ಷೇತ್ರದ ಉನ್ನತ ಸಂಸ್ಥೆ ಆಗಿದೆ. ಈ ಸಂಸ್ಥೆ 1955ರಲ್ಲಿ ಸ್ಥಾಪನೆಗೊಂಡಿದ್ದು, 60 ಸಾವಿರ ಹೋಟೆಲ್‌ಗಳು ಹಾಗೂ 5 ಲಕ್ಷ ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುತ್ತಿದೆ.
ಎಫ್‌ಎಚ್‌ಆರ್‌ಎಐನ ನೂತನ ಪದಾಧಿಕಾರಿಗಳು
- ಅಧ್ಯಕ್ಷ: ಕೆ. ಶ್ಯಾಮರಾಜು
- ಉಪಾಧ್ಯಕ್ಷ: ಪ್ರದೀಪ್ ಶೆಟ್ಟಿ
- ಉಪಾಧ್ಯಕ್ಷ: ಸುರೇಂದ್ರ ಕುಮಾರ್ ಜೈಸ್ವಾಲ್
- ಉಪಾಧ್ಯಕ್ಷ: ನಿತಿನ್ ಎಸ್. ಕೊಠಾರಿ
- ಕಾರ್ಯದರ್ಶಿ: ಕೆ.ನಾಗರಾಜು
- ಖಜಾಂಚಿ: ಗರೀಷ್ ಒಬೆರಾಯ್
- ಜಂಟಿ ಕಾರ್ಯದರ್ಶಿ: ನೀರವ್ ಗಾಂಧಿ
- ಜಂಟಿ ಕಾರ್ಯದರ್ಶಿ: ಅಶೋಕ್ ಸಿಂಗ್
ಇದೂ ಓದಿ: ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ