ಬೆಂಗಳೂರು: ಅಸಂಖ್ಯಾತ ಜನರ ದೈನಂದಿನ ಅನಿವಾರ್ಯ ಪೇಯ ಆಗಿರುವ ಕಾಫಿಯ ಬೆಲೆ ಸದ್ಯದಲ್ಲೇ ಏರಿಕೆ ಆಗುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್ (ಐಸಿಟಿಎ) ಸ್ಪಷ್ಟ ಸುಳಿವನ್ನು ನೀಡಿದೆ.
ಹೌದು.. ಕಾಫಿ ಪುಡಿಯ ಬೆಲೆ ಅಕ್ಟೋಬರ್ 15ರಿಂದಲೇ ಪ್ರತಿ ಕಿಲೋಗ್ರಾಮ್‌ಗೆ ಕನಿಷ್ಠ 100 ರೂಪಾಯಿ ಹೆಚ್ಚಾಗಲಿದೆ ಎಂದು ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಅವರು ತಿಳಿಸಿದ್ದಾರೆ. ಈ ದರ ಏರಿಕೆ ಪರಿಣಾಮವಾಗಿ ಹೋಟೆಲ್‌ಗಳಲ್ಲಿ ಕಾಫಿ ಬೆಲೆ ಕೂಡ ಹೆಚ್ಚಳ ಆಗುವುದು ನಿಚ್ಚಳವಾಗಿದೆ.
ಜಗತ್ತಿನಲ್ಲಿ ಕಾಫಿ ಬೆಳೆಯುವ ದೇಶಗಳ ಪೈಕಿ ಭಾರತ ಏಳನೇ ದೊಡ್ಡ ರಾಷ್ಟ್ರ. ಭಾರತದಲ್ಲಿ ವರ್ಷಕ್ಕೆ ಅಂದಾಜು 3.5 ಲಕ್ಷ ಟನ್‌ಗಳಷ್ಟು ಕಾಫಿ ಬೆಳೆಯಲಾಗುತ್ತಿದ್ದು, ಆ ಪೈಕಿ ಶೇ.70 ರೊಬುಸ್ಟಾ ಹಾಗೂ ಉಳಿದಿದ್ದು ಅರೇಬಿಕ ಕಾಫಿ ಆಗಿದೆ.
ಪ್ರಸಕ್ತ ವರ್ಷದ ಜನವರಿಯಿಂದಲೇ ಕಾಫಿ ಬೆಲೆ ಸ್ಥಿರವಾಗಿ ಏರುತ್ತಿದ್ದು, ರೊಬುಸ್ಟಾ ಬೆಲೆ ಒಂದು ಕೆ.ಜಿ.ಗೆ ಸುಮಾರು 200ರಿಂದ 420 ರೂ. ವರೆಗೆ ಹೆಚ್ಚಾಗಿದೆ. ಹಾಗೇ ಅರೇಬಿಕ ಕಾಫಿ ಬೆಲೆ ಕೆಲವು ವರ್ಗಗಳಿಗೆ ಕೆ.ಜಿ.ಗೆ 290ರಿಂದ 465 ರೂ. ವರೆಗೆ ಏರಿಕೆ ಆಗಿದೆ.
ಇನ್ನೊಂದೆಡೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ವಿಶ್ವದ ಕಾಫಿ ಬೆಳೆಯಲ್ಲಿ ಶೇ.20 ಕುಸಿತವಾಗಿದ್ದು, ಮತ್ತೊಂದೆಡೆ ರಫ್ತು ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ದೇಶದಲ್ಲಿ ಕಾಫಿ ಲಭ್ಯತೆ ಕಡಿಮೆ ಇರುವುದರಿಂದ ಕಾಫಿ ಬೆಲೆ ಹೆಚ್ಚಾಗಿದೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ರೊಬುಸ್ಟಾ ಕಾಫಿ ಬೆಲೆ ಒಂದು ವರ್ಷದ ಹಿಂದೆ ಅರೇಬಿಕ ಕಾಫಿ ಬೆಲೆಯ ಮೂರನೇ ಒಂದು ಭಾಗದಷ್ಟು ಇತ್ತು. ಪ್ರಸ್ತುತ ಅರೇಬಿಕ ಮತ್ತು ರೊಬುಸ್ಟಾ ಎರಡೂ ಕಾಫಿಗಳು ಬಹುತೇಕ ಒಂದೇ ಮಟ್ಟದಲ್ಲಿ ವ್ಯಾಪಾರ ಆಗುತ್ತಿವೆ.
ಅಷ್ಟೇ ಅಲ್ಲದೆ, ಈ ವರ್ಷ ಬೆಲೆಗಳ ಅಸ್ಥಿರತೆ ಹಿನ್ನೆಲೆಯಲ್ಲಿ ಭಾರತ ದೊಡ್ಡ ಪ್ರಮಾಣದಲ್ಲಿ ಕಾಫಿಯನ್ನು ರಫ್ತು ಮಾಡಿದೆ. ಇವೆಲ್ಲ ಕಾರಣಗಳಿಂದಾಗಿ ಕಾಫಿ ಪುಡಿ ಬೆಲೆ ಏರಿಸುವುದು ಕಾಫಿ ರೋಸ್ಟರ್ಸ್‌ಗೆ ಅನಿವಾರ್ಯವಾಗಿದ್ದು, ಅ.15ರಿಂದ ಪ್ರತಿ ಕೆ.ಜಿ. ಕಾಫಿ ಪುಡಿಗೆ ಕನಿಷ್ಠ 100 ರೂ. ಏರಿಸಬೇಕಾಗಿದೆ ಎಂದು ಪೆರಿಕಲ್ ಸುಂದರ್ ತಿಳಿಸಿದ್ದಾರೆ.
ಇದೂ ಓದಿ: ಸ್ವಿಗ್ಗಿಗೆ ಹೋಟೆಲ್ ಉದ್ಯಮಿಗಳಿಂದ ಬಹಿಷ್ಕಾರ: ಎಲ್ಲಿ, ಏಕೆ, ಎಂದಿನಿಂದ? ಇಲ್ಲಿದೆ ವಿವರ…
ಇದೂ ಓದಿ: ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?
ಇದೂ ಓದಿ: 50 ವರ್ಷಗಳಲ್ಲಿ ಪ್ರಥಮ ಬಾರಿಗೆ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ; ಎಫ್ಎಚ್ಆರ್ಎಐಗೆ ಕೆ. ಶ್ಯಾಮರಾಜು ಆಯ್ಕೆ



