ಒಳಗೇನಿದೆ!?

ಈ ಐಷಾರಾಮಿ ಹೋಟೆಲ್‌ನಲ್ಲಿ ಬೀದಿನಾಯಿಗಳಿಗೂ ಮುಕ್ತಪ್ರವೇಶ!; ಗಣ್ಯಾತಿಗಣ್ಯರ ಮಧ್ಯೆ ಬೀದಿನಾಯಿಗಳ ಓಡಾಟ!

ಬೆಂಗಳೂರು: ರೆಸ್ಟೋರೆಂಟ್‌ಗಳ ಮುಂದೆ ಬೀದಿನಾಯಿ ನಿಂತಿದ್ದರೆ ವ್ಯಾಪಾರಕ್ಕೆ ಹಿನ್ನಡೆ ಆಗುತ್ತದೆ ಎಂದು ಅವುಗಳನ್ನು ಅಲ್ಲಿಂದ ಓಡಿಸುವುದು ಸರ್ವೇಸಾಮಾನ್ಯ ಸಂಗತಿ. ಆದರೆ ಈ ಪ್ರತಿಷ್ಠಿತ ಐಷಾರಾಮಿ ಹೋಟೆಲ್‌ನಲ್ಲಿ ಬೀದಿನಾಯಿಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ. ಮಾತ್ರವಲ್ಲ, ಈ ಸ್ಟಾರ್‌ ಹೋಟೆಲ್‌ ಆವರಣದಲ್ಲಿ ಬೀದಿನಾಯಿಗಳು ಮುಕ್ತವಾಗಿ ಓಡಾಡಬಹುದು, ನೆಮ್ಮದಿಯಾಗಿ ನಿದ್ರಿಸಲೂಬಹುದು.

ಅಂದಹಾಗೆ ಇದು ಯಾವುದೋ ದೇಶದಲ್ಲಿನ ವಿದ್ಯಮಾನವಲ್ಲ. ಇದು ಮುಂಬೈನ ಪ್ರತಿಷ್ಠಿತ ತಾಜ್‌ ಹೋಟೆಲ್‌ ಆವರಣದಲ್ಲಿ ಕಾಣಸಿಗುವ ಸಾಮಾನ್ಯ ಹಾಗೂ ಅತ್ಯಪರೂಪದ ದೃಶ್ಯ. ಇದಕ್ಕೆ ಕಾರಣ ನಿನ್ನೆಯಷ್ಟೇ ಅಗಲಿದ ಟಾಟಾ ಸನ್ಸ್‌ನ ಎಮಿರಿಟಸ್‌ ಚೇರ್ಮನ್‌ ರತನ್‌ ಟಾಟಾ ಅವರ ಅಗಾಧ ಶ್ವಾನಪ್ರೇಮ.

ತಾಜ್‌ ಹೋಟೆಲ್‌ನ ಪ್ರವೇಶದ ಬಳಿಯೇ ಬೀದಿನಾಯಿಯೊಂದು ಮುಕ್ತವಾಗಿ ಹಾಗೂ ನೆಮ್ಮದಿಯಾಗಿ ನಿದ್ರಿಸುತ್ತಿದ್ದುದನ್ನು ನಾಲ್ಕು ತಿಂಗಳ ಹಿಂದೆ ಎಚ್‌ಆರ್‌ ಮುಖ್ಯಸ್ಥೆ ರುಬಿ ಖಾನ್‌ ಎಂಬವರು ಗಮನಿಸಿದ್ದು, ಆ ಕುರಿತ ಮಹತ್ವದ ಸಂಗತಿಯೊಂದನ್ನು ತಿಳಿದುಕೊಂಡು ಹಂಚಿಕೊಂಡಿದ್ದರು.

ಇದು ತಾಜ್‌ ಮಹಲ್‌ ಹೋಟೆಲ್‌ನ ಪ್ರವೇಶದ ಬಳಿಯ ದೃಶ್ಯ. ಇದು ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಲಕ್ಷುರಿ ಹೋಟೆಲ್‌ವೊಂದರಲ್ಲಿನ ಚಿತ್ರಣ. ಇದನ್ನು ನೋಡಿ ನನಗೆ ಹೋಟೆಲ್‌ ಸಿಬ್ಬಂದಿ ಬಳಿ ವಿಚಾರಿಸಬೇಕು ಎಂಬ ಕುತೂಹಲ ಉಂಟಾಯಿತು ಎಂದು ಅವರು ತಾಜ್‌ ಹೋಟೆಲ್‌ ಪ್ರವೇಶದಲ್ಲಿ ಮಲಗಿದ್ದ ಬೀದಿನಾಯಿಯ ಫೋಟೋ ಜೊತೆ ಆ ಕುರಿತ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಬೀದಿನಾಯಿ ಹುಟ್ಟಿನಿಂದಲೂ ಇಲ್ಲೇ ಇದೆ ಎನ್ನುವುದು ನನಗೆ ಹೋಟೆಲ್‌ ಸಿಬ್ಬಂದಿಯಿಂದ ತಿಳಿಯಿತು. ಹೋಟೆಲ್‌ ಆವರಣದೊಳಕ್ಕೆ ಬೀದಿನಾಯಿಗಳು ಬಂದರೆ ಅವುಗಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಆದೇಶವನ್ನು ರತನ್‌ ಟಾಟಾ ಮಾಡಿದ್ದರು ಎಂಬುವುದು ಕೂಡ ಗೊತ್ತಾಯಿತು ಎಂದು ರುಬಿ ಖಾನ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ದೇಶ-ವಿದೇಶಗಳ ಹಲವು ಸ್ತರದ ವಿವಿಧ ಗಣ್ಯರಿಗೆ ಆಶ್ರಯ ನೀಡುವ ಪ್ರತಿಷ್ಠಿತ ಹೋಟೆಲ್‌ ತನ್ನ ಆವರಣದಲ್ಲಿನ ಪ್ರತಿಜೀವಿಯನ್ನೂ ಗೌರವಿಸುತ್ತದೆ ಎಂಬ ಸಂಗತಿ ನನಗೆ ಇದರಿಂದ ಅರಿವಾಯಿತು. ಇಂಥ ಹೋಟೆಲ್‌ನ ಪ್ರವೇಶ ಎಂಬುದು ಮಹತ್ವದ್ದು. ಆದರೆ ಈ ಜಾಗದಲ್ಲೇ ಇದು ಇಷ್ಟು ನೆಮ್ಮದಿ ಆಗಿ ನಿದ್ರಿಸುವ ವಾತಾವರಣ ಇರುವುದು ನಿಜಕ್ಕೂ ಅಚ್ಚರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಹಕ ಕೇಂದ್ರಿತ ವ್ಯವಹಾರ ನಡೆಸುವಲ್ಲಿಯೂ ಇತರ ಜೀವಿಗಳನ್ನು ಹೇಗೆ ನೋಡುತ್ತಾರೆ ಎಂಬುದು ಈ ಉದ್ಯಮದ ನಿಜವಾದ ಆತ್ಮವನ್ನು ನನಗೆ ದರ್ಶನ ಮಾಡಿಸಿತು. ನಾವು ಸಾಮಾನ್ಯವಾಗಿ ಹಲವು ಉದಾತ್ತ ಸಂಗತಿಗಳ ಕುರಿತು ಮಾತನಾಡುತ್ತಿರುತ್ತೇವೆ. ಆದರೆ ಅವೆಲ್ಲ ತತ್ವಗಳೂ ಇಲ್ಲಿ ಈ ಕ್ರಿಯೆಯಲ್ಲಿ ಕಾಣಿಸಿದವು ಎಂದು ರುಬಿ ಹೇಳಿಕೊಂಡಿದ್ದಾರೆ.

ನೀವು ಅತ್ಯಂತ ಯಶಸ್ವಿ ಉದ್ಯಮಿ ಆಗಿರಬಹುದು. ಅಷ್ಟುಮಾತ್ರಕ್ಕೆ ಅದು ಇನ್ನೊಬ್ಬರನ್ನು ಗೌರವಿಸುವುದನ್ನು, ಒಪ್ಪಿಕೊಳ್ಳುವುದನ್ನು ಮಾಡದಂತೆ ನಿಮ್ಮನ್ನು ತಡೆಯಬೇಕಂತೇನೂ ಇಲ್ಲ ಎಂಬ ಅಭಿಪ್ರಾಯವನ್ನೂ ಈ ಘಟನೆ ಮೂಲಕ ರುಬಿ ವ್ಯಕ್ತಪಡಿಸಿದ್ದಾರೆ.

 

ನಿಖಿಲ್‌ ಸೈನಿ ಎನ್ನುವವರು ಕೂಡ ತಾಜ್‌ ಹೋಟೆಲ್‌ ಎದುರು ಗಣ್ಯಾತಿಗಣ್ಯರ ನಡುವೆ ಬೀದಿನಾಯಿಗಳು ಓಡಾಡುತ್ತಿರುವ ವಿಡಿಯೋ ಹಂಚಿಕೊಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಜ್‌ ಹೋಟೆಲ್‌ನಲ್ಲಿನ ಈ ದೃಶ್ಯಾವಳಿ, ರತನ್‌ ಟಾಟಾ ಅವರ ಶ್ವಾನಪ್ರೇಮದ ಕುರಿತ ಹಲವು ಫೋಟೋ-ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಗುತ್ತಿವೆ.

ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಇದೂ ಓದಿ: ಮೈಸೂರು ದಸರೆಗೆ ʼಹುಲಿʼ ಬಂದಿದೆ!; ಜಾಗ ಬಿಡಿ ಜಾಗರೀ.. ಇದು ʼಜಾಗರಿ…ʼ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ