ಒಳಗೇನಿದೆ!?

ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ

ಬೆಂಗಳೂರು: ಟೀ ಸ್ಟಾಲ್‌ ನಡೆಸುತ್ತಿರುವವರೊಬ್ಬರ ಪತ್ನಿಯ ಖಾತೆಗೆ 999 ಕೋಟಿ ರೂಪಾಯಿ ಜಮೆ ಆಗಿರುವ ಅಚ್ಚರಿಯ ಪ್ರಕರಣ ನಡೆದಿದೆ. ಆದರೆ ಅಂಥದ್ದೊಂದು ಸಂತಸದ ನಡುವೆಯೇ ಆಘಾತವೂ ಆಗಿದ್ದು, ಅದೇ ಕಾರಣಕ್ಕೆ ಆಕೆಯ ಪತಿ ಈಗ ಫಜೀತಿ ಪಡುವಂತಾಗಿದೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆವರಣದಲ್ಲಿ ಚಿಕ್ಕ ಟೀ ಸ್ಟಾಲ್‌ ನಡೆಸುತ್ತಿರುವ ಎಸ್‌. ಪ್ರಭಾಕರ್‌ ಎನ್ನುವವರೇ ಅಂಥದ್ದೊಂದು ಫಜೀತಿಗೆ ಒಳಗಾಗಿರುವ ವ್ಯಕ್ತಿ. ಮೊನ್ನೆಮೊನ್ನೆಯಷ್ಟೇ ಇವರ ಪತ್ನಿಯ ಹೆಸರಿನಲ್ಲಿರುವ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾತೆಗೆ 999 ಕೋಟಿ ರೂ. ಜಮೆ ಆಗಿದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ.

ಪತ್ನಿಯ ಮೊಬೈಲ್‌ಫೋನ್‌ಗೆ ಬಂದ ಎಸ್‌ಎಂಎಸ್‌ ಚೆಕ್‌ ಮಾಡಿದ ಪ್ರಭಾಕರ್‌ ಅವರಿಗೆ 999 ಕೋಟಿ ರೂ. ಜಮೆ ಆಗಿರುವುದು ಕಂಡುಬಂದಿತ್ತು. ಒಮ್ಮೆ ಅನುಮಾನ, ಅಚ್ಚರಿ ಎರಡೂ ಆದ ಕಾರಣಕ್ಕೆ ಅವರು ಮತ್ತೊಮ್ಮೆ ಪರಿಶೀಲಿಸಿ ನೋಡಿದಾಗ ಅದು ನಿಜವಾಗಿಯೂ 999 ಕೋಟಿ ರೂ. ಜಮೆ ಆಗಿರುವ ಕುರಿತ ಬ್ಯಾಂಕ್‌ ಮೆಸೇಜ್‌ ಆಗಿತ್ತು.

ಬಹುಶಃ ತಪ್ಪಾಗಿ ಜಮೆ ಆಗಿರಬೇಕು, ಬ್ಯಾಂಕ್‌ನವರ ಬಳಿ ವಿಚಾರಿಸಿ ಬಗೆಹರಿಸಿಕೊಳ್ಳಬೇಕು ಎಂದು ಪ್ರಭಾಕರ್‌ ಅಂದುಕೊಂಡ ಕೆಲವೇ ಗಂಟೆಗಳಲ್ಲಿ ಅಷ್ಟೂ ಮೊತ್ತ ವಾಪಸ್‌ ಹೋಗಿತ್ತು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಬೃಹತ್‌ ಮೊತ್ತ ಡಿಪಾಸಿಟ್‌ ಆದ ಹಿನ್ನೆಲೆಯಲ್ಲಿ ಅವರ ಬ್ಯಾಂಕ್‌ ಖಾತೆ ಸ್ಥಗಿತಗೊಂಡಿದೆ. ಅವರೀಗ ಒಂದು ಸಣ್ಣ ಸಾಮಾನ್ಯ ಟ್ರ್ಯಾನ್ಸ್ಯಾಕ್ಷನ್‌ ಕೂಡ ನಡೆಸದ ರೀತಿಯಲ್ಲಿ ಬ್ಯಾಂಕ್‌ ಖಾತೆ ನಿಷ್ಕ್ರಿಯವಾಗಿದೆ. ಪರಿಣಾಮವಾಗಿ, ದೈನಂದಿನ ವ್ಯವಹಾರಕ್ಕೆ ಆ ಖಾತೆಯನ್ನು ನೆಚ್ಚಿಕೊಂಡಿರುವ ಅವರು ಖಾತೆ ಮೂಲಕ ಯಾವುದೇ ವಹಿವಾಟು ನಡೆಸಲಾಗದೆ ಫಜೀತಿ ಪಡುವಂತಾಗಿದೆ.

ಈ ಸಂಬಂಧ ಬ್ಯಾಂಕ್‌ಗೆ ಇ-ಮೇಲ್‌ ಮಾಡಿದ್ದಲ್ಲದೆ, ಖುದ್ದಾಗಿ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ನನ್ನ ಸಮಸ್ಯೆ ಪರಿಹರಿಸುವ ಬದಲು ನನ್ನ ಬಳಿಯೇ ಹಲವು ಪ್ರಶ್ನೆ-ದಾಖಲಾತಿಗಳನ್ನು ಕೇಳುತ್ತಿದ್ದಾರೆ. ಘಟನೆ ನಡೆದು 2-3 ದಿನ ಕಳೆದರೂ ಯಾವತ್ತು ನನ್ನ ಖಾತೆ ಸಕ್ರಿಯ ಆಗುತ್ತದೆ ಎನ್ನುವ ಕುರಿತು ಕೂಡ ಬ್ಯಾಂಕ್‌ನವರು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪ್ರಭಾಕರ್‌ ಪತ್ರಕರ್ತರಿಗೆ ತಿಳಿಸಿದ್ದಾರೆ.

ಇದೂ ಓದಿ: ಮೈಸೂರು ದಸರೆಗೆ ʼಹುಲಿʼ ಬಂದಿದೆ!; ಜಾಗ ಬಿಡಿ ಜಾಗರೀ.. ಇದು ʼಜಾಗರಿ ರಮ್‌…ʼ

ಇದೂ ಓದಿ: ತಾಜ್‌ ಹೋಟೆಲ್‌ ಉದ್ಯೋಗಿಗಳಿಗೆ ಸಾವಿನ ಬಳಿಕವೂ ಜೀವನಪರ್ಯಂತದ ಸಂಬಳ ನೀಡಿದ್ದ ರತನ್‌ ಟಾಟಾ!

ಇದೂ ಓದಿ: ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ