ಬೆಂಗಳೂರು: ಶೀಘ್ರದಲ್ಲೇ ನಿಮ್ಮ ಅಕ್ಕಪಕ್ಕಗಳಲ್ಲೇ ಅಕ್ಕ ಕೆಫೆ ಹಾಗೂ ಕಾಫಿ ಕಿಯೋಸ್ಕ್‌ಗಳು ಕಾಣಿಸಿಕೊಳ್ಳಲಿವೆ. ಏಕೆಂದರೆ ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಮೊದಲ ಹಂತದಲ್ಲಿ 50 ಅಕ್ಕ ಕೆಫೆಗಳನ್ನು ಹಾಗೂ 2,500 ಕಾಫಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಮಾತ್ರವಲ್ಲ, ಈಗಾಗಲೇ ಮೊದಲ ʼಅಕ್ಕ ಕೆಫೆʼಯ ಉದ್ಘಾಟನೆ ಕೂಡ ನೆರವೇರಿದೆ.
ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಅ.8ರ ಮಂಗಳವಾರ ದೇವನಹಳ್ಳಿಯಲ್ಲಿ ʼಅಕ್ಕ ಕೆಫೆʼ ಉದ್ಘಾಟಿಸಿದರು. ರಾಜ್ಯ ಸರ್ಕಾರದ ವತಿಯಿಂದ ಜಾರಿಗೆ ತಂದಿರುವ ʼಅಕ್ಕ ಕೆಫೆʼ ಯೋಜನೆ ಕರ್ನಾಟಕದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ, ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಉದ್ಯಮಶೀಲತೆ ಉತ್ತೇಜಿಸುವ ಯೋಜನೆ ಇದಾಗಿದೆ. ಇದು ಪರಿವರ್ತನೆಯ ಸಾಮರ್ಥ್ಯ ಹೊಂದಿದೆ. ʼಅಕ್ಕ ಕೆಫೆʼ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಉದ್ಯಮಶೀಲತೆಗೆ ಆದ್ಯತೆ ನೀಡಲಿದೆ. ಇದು ಕರ್ನಾಟಕದ ಸಾಮಾಜಿಕ-ಆರ್ಥಿಕ ಕ್ಷೇತ್ರದ ಮೇಲೆ ಶಾಶ್ವತವಾದ ಪರಿಣಾಮ ಬೀರುತ್ತದೆʼ ಎಂದು ಸಚಿವರು ಹೇಳಿದರು.
2024-25ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಚಯಿಸಿದ ʼಅಕ್ಕ ಕೆಫೆʼ ಮಹಿಳೆಯರಿಗೆ ಸುಸ್ಥಿರ ಜೀವನೋಪಾಯ ಸೃಷ್ಟಿಸುವ ಗುರಿ ಹೊಂದಿದೆ. ಇದು ನಿರ್ದಿಷ್ಟವಾಗಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುತ್ತದೆ, ವಿಶೇಷವಾಗಿ ಸ್ವ-ಸಹಾಯ ಗುಂಪುಗಳಿಂದ (SHGs), ಅವರಿಗೆ ಅತ್ಯಾಧುನಿಕ ಕೆಫೆಗಳನ್ನು ನಿರ್ವಹಿಸಲು ಅವಕಾಶಗಳನ್ನು ನೀಡಲಿದೆ. ಈ ಕೆಫೆಗಳು ಗುಣಮಟ್ಟ ಮತ್ತು ನೈರ್ಮಲ್ಯ ಅನುಸರಿಸುವಾಗ ಸ್ಥಳೀಯ ಪಾಕಪದ್ಧತಿಗೂ ಅವಕಾಶ ಇರುತ್ತದೆ ಎಂದು ಸಚಿವ ಪಾಟೀಲ್ ತಿಳಿಸಿದರು.
ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಸ್ವ-ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು ನಿರ್ವಹಿಸುತ್ತವೆ, ಮೂಲಸೌಕರ್ಯ ಬೆಂಬಲ ಸೇರಿದಂತೆ ಸೆಟಪ್ ವೆಚ್ಚಗಳಿಗಾಗಿ 15 ಲಕ್ಷ ರೂ.ವರೆಗೆ ಅನುದಾನ ಒದಗಿಸಲಾಗುವುದು. ಇದಲ್ಲದೇ ರಾಜ್ಯಾದ್ಯಂತ 2500 ಕಾಫಿ ಕಿಯೋಸ್ಕ್‌ಗಳನು ತೆರೆಯಲಾಗುವುದು. ಕೇಂದ್ರ ಕಾಫಿ ಮಂಡಳಿಯ ನೆರವಿನಿಂದ ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ 25 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
ರಾಷ್ಟ್ರೀಯ ಜೀವನೋಪಾಯ ಮಿಷನ್-ಕರ್ನಾಟಕ (NLM) ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ಸ್ಟಾರ್ಟಪ್ ವಿಲೇಜ್ ಆಂಟ್ರಾಪಿನರ್‌ಷಿಪ್ ಪ್ರೋಗ್ರಾಂ (SVEP) ಮೂಲಕ ʼಅಕ್ಕ ಕೆಫೆʼ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ʼಅಕ್ಕ ಕೆಫೆʼ ಉದ್ಘಾಟನಾ ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉಪಸ್ಥಿತರಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಎನ್‌ಆರ್‌ಎಲ್‌ಎಂ ಮಿಷನ್ ನಿರ್ದೇಶಕಿ ಶ್ರೀವಿದ್ಯಾ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್. ಶಿವಶಂಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್. ಅನುರಾಧ ಉಪಸ್ಥಿತರಿದ್ದರು.
ಕ್ಲೌಡ್ ಕಿಚನ್ ಸೌಕರ್ಯ
ʼಅಕ್ಕ ಕೆಫೆʼಯ ರುಚಿಕರ ಕೊಡುಗೆಗಳನ್ನು ಆಸ್ವಾದಿಸಲು ನೀವು ದೇವನಹಳ್ಳಿ ಅಥವಾ ದೂರದ ಸ್ಥಳಗಳಿಗೆ ಹೋಗಬೇಕಾಗಿಲ್ಲ. ʼಅಕ್ಕ ಕೆಫೆʼ ಉತ್ಪನ್ನಗಳನ್ನು ಈಗ ಕ್ಲೌಡ್ ಕಿಚನ್ ಸೇವೆ ಮೂಲಕವೂ ಪಡೆಯಬಹುದು. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ನಿಮ್ಮ ನೆಚ್ಚಿನ ಬೇಕರಿ ವಸ್ತುಗಳನ್ನು ನಿಮ್ಮ ಮನೆ ಬಾಗಿಲಲ್ಲಿ ಪಡೆಯಬಹುದು. ಜೀವನೋಪಾಯ ಇಲಾಖೆ ಈಗ ಈ ಯೋಜನೆಯನ್ನೂ ಜಾರಿಗೆ ತಂದಿದೆ.
ಕೆಫೆಗಳು ಪರಿಣಾಮಕಾರಿ ಆಗಿ ನಿರ್ವಹಿಸಲು ಅಗತ್ಯವಾದ ಕೌಶಲಗಳೊಂದಿಗೆ ಐಎಚ್‌ಎಂ-ಬೆಂಗಳೂರು ಜೊತೆ ಎನ್‌ಎಲ್‌ಎಂ ಪಾಲುದಾರಿಕೆ ಹೊಂದಿದೆ. ಹೆಚ್ಚುವರಿಯಾಗಿ, ಎನ್ಎಲ್ಎಂ ಬೇಕರಿ ಘಟಕವನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಇದನ್ನು ಸ್ವ-ಸಹಾಯ ಮಹಿಳಾ ಉದ್ಯಮಿಗಳು ನಡೆಸುತ್ತಿದ್ದಾರೆ. ಎನ್‌ಜಿಒ ಮೂಲಕ ತರಬೇತಿ ನೀಡಲಾಗುತ್ತದೆ. ಈ ಬೇಕರಿ ಘಟಕವು ಕ್ಲೌಡ್ ಕಿಚನ್ ಆಗಿ ಕಾರ್ಯನಿರ್ವಹಿಸುತ್ತದೆ, ಕುಕೀಸ್, ಮಫಿನ್ ಮತ್ತು ಕೇಕ್‌ಗಳನ್ನು ಬೆಂಗಳೂರಿನ ಅಕ್ಕ ಕೆಫೆಗಳಿಗೆ ಪೂರೈಸಲಾಗುವುದು ಮತ್ತು ದೇವನಹಳ್ಳಿಯಲ್ಲಿ ಪ್ರೀಮಿಯಂ ಬೇಕರಿ ಔಟ್ಲೆಟ್ ಆಗಿ ನಿರ್ವಹಿಸುತ್ತದೆ. ನವೀನ ತಂತ್ರಜ್ಞಾನ ಮತ್ತು ಉತ್ತಮ ವ್ಯಾಪಾರದಿಂದ ಬೆಂಬಲಿತವಾಗಿರುವ ಬೇಕರಿ ಘಟಕವು ಮಹಿಳಾ ಉದ್ಯಮಿಗಳಿಗೆ ಹೆಚ್ಚುವರಿ ಆದಾಯ ಒದಗಿಸುತ್ತದೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆ.
ಇದೂ ಓದಿ: ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ
ಇದೂ ಓದಿ: ಒಂದು ಕಪ್ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ