ಬೆಂಗಳೂರು: ಹೋಟೆಲ್ ಉದ್ಯಮಕ್ಕೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಸಲ್ಲಿಸಿದ್ದ ಬೇಡಿಕೆಗಳು ಇನ್ನೂ ಈಡೇರದ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ) ಇನ್ನೊಮ್ಮೆ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದೆ. ಈ ಸಂಬಂಧ ಬೆಂಗಳೂರು ಹೋಟೆಲುಗಳ ಸಂಘ ಪ್ರಕಟಣೆಯೊಂದನ್ನು ಹೊರಡಿಸಿದೆ.
ʼಉದ್ಯಮಿಯಾಗು, ಉದ್ಯೋಗ ಕೊಡು ಎನ್ನುವ ಮಾತು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಉದ್ಯಮದ ಅನಗತ್ಯ ಹಾಗೂ ಅವೈಜ್ಞಾನಿಕವಾದ ಹಲವಾರು ಪರವಾನಗಿಗಳನ್ನು ತೆಗೆದುಹಾಕಿ ಸಬಲೀಕರಣ ಮಾಡಬೇಕು. ನಾವು ಈ ಕುರಿತು ಮನವಿ ಮಾಡುತ್ತಲೇ ಇದ್ದೇವೆ. ತೆರಿಗೆ ಸಂದಾಯ ಮಾಡುವ ಉದ್ಯಮಿಗಳು ಹಾಗೂ ಜನಸಾಮಾನ್ಯರ ಕಡೆ ಎಲ್ಲ ರಾಜಕೀಯ ನಾಯಕರು ಗಮನ ಹರಿಸಬೇಕಾಗಿದೆʼ ಎಂದಿರುವ ಬೆಂಗಳೂರು ಹೋಟೆಲುಗಳ ಸಂಘ, ಉದ್ಯಮವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಹೇಳಿಕೊಂಡಿದೆ.
ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆದಿಡಲು ಸರ್ಕಾರದಿಂದ ಅನುಮತಿ ಇದ್ದರೂ ಪೊಲೀಸ್ ಇಲಾಖೆ ಇನ್ನೂ ಅನುಮತಿ ನೀಡಿರುವುದಿಲ್ಲ. ಪೊಲೀಸ್ ಇಲಾಖೆ ಇದಕ್ಕೆ ಸಹಕರಿಸಬೇಕಾಗಿದೆ. ಬೆಲೆ ಗಗನಕ್ಕೆ ಏರುತ್ತಿದೆ, ಮೂಲಸೌಕರ್ಯಗಳು ಕುಂಠಿತವಾಗಿವೆ. ಅಗತ್ಯ ಇರುವ ಪೊಲೀಸ್ ರಕ್ಷಣೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದೂ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದೆ.
ಎಫ್‌ಎಸ್‌ಎಸ್‌ಎಐ ಪರವಾನಗಿ ಮತ್ತು ಪ್ರೊಫೆಷನಲ್ ಟ್ಯಾಕ್ಸ್ ಇರುವ ಎಲ್ಲ ಉದ್ಯಮಿಗಳ ಟ್ರೇಡ್ ಲೈಸೆನ್ಸ್ ತೆಗೆಸಬೇಕು. ಶಾಪ್ & ಎಸ್ಟಾಬ್ಲಿಷ್‌ಮೆಂಟ್ ಲೈಸೆನ್ಸ್‌ಗಳನ್ನು ಲೈಫ್ ಒನ್ ಟೈಮ್ ಮಾಡಬೇಕು. ಫ್ಯಾಕ್ಟರಿ ಲೈಸೆನ್ಸ್ ಶುಲ್ಕ ಹತ್ತುಪಟ್ಟು ಹೆಚ್ಚಿಸಲು ಹೊರಡಿಸಿರುವ ಮಾರ್ಗಸೂಚಿ ಹಿಂಪಡೆಯಬೇಕು ಎಂಬ ಬೇಡಿಕೆಗಳ ಬಗ್ಗೆ ಬಿಎಚ್‌ಎ ಗಮನ ಸೆಳೆದಿದೆ.
ಉದ್ಯಮಿಗಳಿಗೆ ಅವಕಾಶ ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು. ಜನಸಾಮಾನ್ಯರು ಹಾಗೂ ಉದ್ಯಮಿಗಳ ಬಗ್ಗೆ ತಕ್ಷಣ ಸರ್ಕಾರ ಹಾಗೂ ಅಧಿಕಾರಿಗಳು ಗಮನ ಹರಿಸಿ ಸ್ಪಂದಿಸಬೇಕೆಂದು ಒತ್ತಾಯಿಸುತ್ತೇವೆ ಎಂಬುದಾಗಿ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್ ಮನವಿ ಮಾಡಿಕೊಂಡಿದ್ದಾರೆ.
ಇದೂ ಓದಿ: ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ
ಇದೂ ಓದಿ: ಮೈಸೂರು ದಸರೆಗೆ ʼಹುಲಿʼ ಬಂದಿದೆ!; ಜಾಗ ಬಿಡಿ ಜಾಗರೀ.. ಇದು ʼಜಾಗರಿ ರಮ್…ʼ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ