ಬೆಂಗಳೂರು: ಹೋಟೆಲ್ ವ್ಯವಹಾರದಲ್ಲಿನ ನಷ್ಟದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಾಜಾಜಿನಗರ 2ನೇ ಹಂತದ ನಿವಾಸಿ ತಿಮ್ಮಣ್ಣ ಭಟ್ (40) ಸಾವಿಗೀಡಾದವರು.
ಮಂಗಳವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿದ ಬಳಿಕ ಮಲಗುವ ಕೋಣೆಗೆ ತೆರಳಿದ ಇವರು, ನಂತರ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ 7.30ಕ್ಕೆ ಕಾರು ಚಾಲಕ ಕೋಣೆಗೆ ಹೋದಾಗ ವಿಷಯ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೊಂಡು ಗ್ರಾಮದ ತಿಮ್ಮಣ್ಣ ಭಟ್, ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಒಂಬತ್ತು ವರ್ಷಗಳಿಂದ ಶಾಸಕರ ಭವನದಲ್ಲಿ ʼಕಿಲಾರೆ ಕೆಫೆʼ ಎಂಬ ಹೋಟೆಲ್ ನಡೆಸುತ್ತಿದ್ದರು. ಅಲ್ಲದೆ, ಆರ್ಸಿ ಕಾಲೇಜು ಮತ್ತು ಉದ್ಯೋಗ ಸೌಧದಲ್ಲಿ ಕೂಡ ಕ್ಯಾಂಟೀನ್ ಹೊಂದಿದ್ದರು.
ನಂತರ ತಮ್ಮ ಹೋಟೆಲ್ ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಎರಡು ವರ್ಷಗಳ ಹಿಂದೆ ಸ್ನೇಹಿತರ ಪಾಲುದಾರಿಕೆಯಲ್ಲಿ ಕುಮಟಾ ಮತ್ತು ಮುರುಡೇಶ್ವರದಲ್ಲಿ ಹೋಟೆಲ್ಗಳನ್ನು ಆರಂಭಿಸಿದ್ದರು. ಆದರೆ ಅವುಗಳಿಂದ ನಿರೀಕ್ಷಿತ ಆದಾಯ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದರು.
ಆ ಹೋಟೆಲ್‌ಗಳಿಗೆ ಸ್ನೇಹಿತರು ಸೇರಿದಂತೆ ಕೆಲವೆಡೆ ಲಕ್ಷಾಂತರ ರೂ. ಸಾಲ ಮಾಡಿ ಹೂಡಿಕೆ ಮಾಡಿದ್ದರು. ದುರದೃಷ್ಟವಶಾತ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ತಿಮ್ಮಣ್ಣ, ಅದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಸ್ನೇಹಿತರು ಮತ್ತು ಕುಟುಂಬಸ್ಥರ ಮುಂದೆಯೂ ಹೇಳಿಕೊಂಡು ಕಣ್ಣೀರಿಟ್ಟಿದ್ದರು.
ತಿಮ್ಮಣ್ಣ ಮಂಗಳವಾರ ರಾತ್ರಿಯೂ ಪತ್ನಿ ಮತ್ತು ಮಕ್ಕಳ ಜತೆ ಊಟ ಮಾಡುವಾಗ ಹಣಕಾಸು ಮುಗ್ಗಟ್ಟಿನ ವಿಚಾರ ಪ್ರಸ್ತಾಪಿಸಿ ತೀವ್ರ ನೋವಿನಿಂದ ಮಾತನಾಡಿದ್ದರು. ಆಗ ಪತ್ನಿ ಆಶಾ ಸಮಾಧಾನ ಮಾಡಿ ಧೈರ್ಯ ತುಂಬಿದ್ದರು. ಆ ಬಳಿಕ ತಿಮ್ಮಣ್ಣ ಮಲಗಲು ಕೋಣೆಗೆ ತೆರಳಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: 50 ವರ್ಷಗಳಲ್ಲಿ ಪ್ರಥಮ ಬಾರಿಗೆ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ; ಎಫ್ಎಚ್ಆರ್ಎಐಗೆ ಕೆ. ಶ್ಯಾಮರಾಜು ಆಯ್ಕೆ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ