ಬೆಂಗಳೂರು: ಭಾರತದ ಹೋಟೆಲ್ ಉದ್ಯಮದ ಗಾತ್ರ ಹಾಗೂ ಸಾಮರ್ಥ್ಯ ಸರ್ಕಾರ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿದೆ ಎಂದು ಫೆಡರೇಷನ್ ಆಫ್ ಹೋಟೆಲ್ & ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್‌ಎಚ್‌ಆರ್‌ಎಐ) ಅಧ್ಯಕ್ಷ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.
ದೇಶದಲ್ಲಿ ನೀತಿ ರೂಪಿಸುವವರ ಬಳಿ ಈಗ ಇದೆ ಎನ್ನಲಾದ ಮಾಹಿತಿಗಳೆಲ್ಲವೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಂಗ್ರಹಿಸಿದಂಥವು. ಅವುಗಳಿಂದ ಹೋಟೆಲ್ ಕ್ಷೇತ್ರದ ಗಾತ್ರ-ಸಾಮರ್ಥ್ಯದ ಬಗ್ಗೆ ನಿಜವಾದ ಚಿತ್ರಣ ಸಿಗುತ್ತಿಲ್ಲ. ಕ್ಷೇತ್ರದ ಶೇ.80 ಭಾಗ ಅಸಂಘಟಿತ ವಲಯದಲ್ಲಿದ್ದು, ಆ ವರದಿಗಳಲ್ಲಿ ಅವುಗಳ ಮಾಹಿತಿ ಅಡಕವಾಗಿಲ್ಲ ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಹೀಗಾಗಿ ಹೋಟೆಲ್ ಕ್ಷೇತ್ರದ ಸ್ಪಷ್ಟ ಮಾಹಿತಿಗಾಗಿ ಎಫ್‌ಎಚ್‌ಆರ್‌ಎಐ ʼಸೆಂಟರ್ ಆಫ್ ಎಕ್ಸೆಲೆನ್ಸ್ʼ ರಚಿಸಿದ್ದು, ಅದು ಸಂಗ್ರಹಿಸಿರುವ ಪ್ರಾಥಮಿಕ ಮಾಹಿತಿಯಲ್ಲೇ ದೇಶದಲ್ಲಿ 16 ಲಕ್ಷ ಹೋಟೆಲ್ ರೂಮ್‌ಗಳಿರುವುದು ಕಂಡುಬಂದಿದೆ. ಎಫ್‌ಎಚ್‌ಆರ್‌ಎಐ ಸದಸ್ಯ ಹೋಟೆಲ್‌ಗಳಲ್ಲೇ 2.5 ಲಕ್ಷ ಹೋಟೆಲ್ ರೂಮ್‌ಗಳಿವೆ. ಆದರೆ ದೇಶದಲ್ಲಿ 1.7 ಲಕ್ಷ ಹೋಟೆಲ್ ರೂಮ್‌ಗಳಷ್ಟೇ ಇವೆ ಎಂಬುದನ್ನೇ ನೀತಿ ರೂಪಿಸುವವರು ನಂಬಿಕೊಂಡಿದ್ದಾರೆ ಎಂದು ಪ್ರದೀಪ್ ಶೆಟ್ಟಿ ಹೇಳಿದ್ದಾರೆ.
ಹೋಟೆಲ್ ಕ್ಷೇತ್ರದ ಸಾಮರ್ಥ್ಯ ಇನ್‌ಫಾರ್ಮೇಷನ್ ಟೆಕ್ನಾಲಜಿ ಅಥವಾ ಆಟೋಮೊಬೈಲ್ ಕ್ಷೇತ್ರಕ್ಕಿಂತಲೂ ದೊಡ್ಡದಿದ್ದು, ಇದನ್ನು ಕೃಷಿ ಕ್ಷೇತ್ರದ ನಂತರದ ಅತಿದೊಡ್ಡ ಕ್ಷೇತ್ರ ಎನ್ನಬಹುದು. ಹೀಗಾಗಿ ಹೋಟೆಲ್ ಉದ್ಯಮಕ್ಕೆ ಸಂಬಂಧಿತ ಕಾನೂನು-ಸುಧಾರಣೆ ನಿಟ್ಟಿನಲ್ಲಿ ನೀತಿರೂಪಕರು ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ.
| ಪ್ರದೀಪ್ ಶೆಟ್ಟಿ, ಅಧ್ಯಕ್ಷ, ಎಫ್‌ಎಚ್‌ಆರ್‌ಎಐ
ನೀತಿ ರೂಪಕರಲ್ಲಿ ಈಗಾಗಲೇ ಇರುವ ವರದಿಗಳಲ್ಲಿ ಹೋಟೆಲ್ ಗಾತ್ರ-ಸಾಮರ್ಥ್ಯದ ಕುರಿತ ಮಾಹಿತಿ ಸಮರ್ಪಕವಾಗಿಲ್ಲ. ಅದೇ ಕಾರಣಕ್ಕೆ ನೀತಿ ರೂಪಿಸುವ ವೇಳೆ ಹೋಟೆಲ್ ಕ್ಷೇತ್ರಕ್ಕೆ ಸರಿಯಾದ ಆದ್ಯತೆ ಸಿಗುತ್ತಿಲ್ಲ. ಆ ಮಾಹಿತಿಯನ್ನು ಸಮಗ್ರವಾಗಿ ಕಲೆ ಹಾಕಿದರೆ ಹೋಟೆಲ್ ಕ್ಷೇತ್ರದ ಗಾತ್ರ-ಸಾಮರ್ಥ್ಯ, ದೇಶದ ಜಿಡಿಪಿಗೆ ಅದರ ಕೊಡುಗೆ ಎಲ್ಲವೂ ಅಧಿಕ ಆಗಿರುವುದು ಗೊತ್ತಾಗಲಿದೆ ಎಂದು ಪ್ರದೀಪ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಇದೂ ಓದಿ: ಇನ್ನು ಊರು-ಕೇರಿ, ಗಲ್ಲಿಗಳಲ್ಲೂ ಬೊಂಬಾಟ್ ಭೋಜನ; ಜೊತೆಗೆ ಹಳೇ/ಜನಪ್ರಿಯ ಹೋಟೆಲ್‌ಗಳ ದರ್ಶನ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ