ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸದ್ಯ ಹೋಟೆಲ್ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಇರುವ ಸಂಪಾದಕರಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಮುಖರು ಹಾಗೂ ಮುಂಚೂಣಿಯಲ್ಲಿ ಇರುವವರು. ಹೋಟೆಲ್ ಉದ್ಯಮಿಗಳ ಜೊತೆ ಉತ್ತಮ ಒಡನಾಟ ಹೊಂದಿರುವ ಇವರು ಹೋಟೆಲ್ ಕ್ಷೇತ್ರದ ವಿಶೇಷ ಸಂಗತಿಗಳನ್ನೂ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ವಿಶ್ವೇಶ್ವರ ಭಟ್ ಅವರು ʼವಿಜಯ ಕರ್ನಾಟಕʼದಲ್ಲಿ ಸಂಪಾದಕರಾಗಿದ್ದಾಗ ವರದಿಗಾರಿಕೆಯಲ್ಲಿ ʼಹೋಟೆಲ್ ಬೀಟ್ʼ ಎಂದು ಆರಂಭಿಸಿ, ಅದಕ್ಕೆಂದೇ ಒಬ್ಬರು ವರದಿಗಾರರನ್ನು ನೇಮಿಸಿದ್ದರು. ರಮಣಶ್ರೀ ಗ್ರೂಪ್‌ನ ಷಡಕ್ಷರಿ, ಅಂದಿನ ಎಂಟಿಆರ್‌ನ ಸದಾನಂದ ಮಯ್ಯ ಅವರಿಂದ ಅಂಕಣಗಳನ್ನು ಬರೆಸಿ ಹೋಟೆಲ್ ಕ್ಷೇತ್ರಕ್ಕೂ ಸಾಹಿತ್ಯ ಕ್ಷೇತ್ರಕ್ಕೂ ಒಂದು ಸೇತು ನಿರ್ಮಿಸಿದ್ದಾರೆ. ಅಂಥ ವಿಶ್ವೇಶ್ವರ ಭಟ್ ಅವರು ʼತಂಬುಳಿ ಮನೆʼ ಕುರಿತು ಹಂಚಿಕೊಂಡ ಅನುಭವ-ಅನಿಸಿಕೆ ಇಲ್ಲಿದೆ.
ಬೆಂಗಳೂರು: ಹೋಟೆಲ್ ಉದ್ಯಮದ ಬಗ್ಗೆ ಆಸಕ್ತಿ, ವಿಶೇಷ ಒಲವು ಇರುವ ಖ್ಯಾತ ಪತ್ರಕರ್ತ, ʼವಿಶ್ವವಾಣಿʼ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಕೆಲವು ದಿನಗಳ ಹಿಂದೆ ʼತಾಜಾ ತಿಂಡಿʼಗೆ ಭೇಟಿ ನೀಡಿ ಶ್ಲಾಘಿಸಿದ್ದರು. ಇದೀಗ ಅವರು ʼತಂಬುಳಿ ಮನೆʼಗೂ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼಕಳೆದ ಎರಡು ತಿಂಗಳುಗಳಿಂದ ರಾಜರಾಜೇಶ್ವರಿನಗರದಲ್ಲಿ ಇರುವ ನಮ್ಮ ಆಫೀಸಿಗೆ ಹೋಗುವಾಗ ‘ತಂಬುಳಿ ಮನೆ’ ಬೋರ್ಡು ಕಣ್ಣಿಗೆ ಬೀಳುತ್ತಲೇ ಇತ್ತು. ಆದರೆ ಹೋಗಲು ಆಗಿರಲಿಲ್ಲ. ಆದರೆ ಮೊನ್ನೆ ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿ ’ತಂಬುಳಿಮನೆʼ ಬೋರ್ಡ್ ಕಂಡಾಗ ಅಲ್ಲಿಗೆ ಹೋಗದೇ ಇರಲು ಆಗಲಿಲ್ಲʼ ಎಂದು ತಾವು ʼತಂಬುಳಿ ಮನೆʼಗೆ ಭೇಟಿ ಕೊಟ್ಟಿದ್ದರ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ತಂಬುಳಿಯ ವೈಶಿಷ್ಟ್ಯದ ಬಗ್ಗೆಯೂ ಮಾಹಿತಿ ಹಂಚಿಕೊಂಡಿರುವ ಅವರು, ʼತಂಬುಳಿ ಮಲೆನಾಡಿನ ಅದರಲ್ಲೂ ವಿಶೇಷವಾಗಿ, ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತೀರಾ ಪರಿಚಿತವಾದ ಪಾನೀಯ. ಇದನ್ನು ಕುಡಿಯಬಹುದು ಮತ್ತು ಅನ್ನಕ್ಕೆ ಕಲಸಿಕೊಂಡು ಉಣ್ಣಬಹುದುʼ ಎಂದಿದ್ದಾರೆ.
ʼಬೇರೆ ಬೇರೆ ಸೊಪ್ಪನ್ನು ಅರೆದು, ಮಜ್ಜಿಗೆಯೊಂದಿಗೆ ಬೆರೆಸಿ, ಉಪ್ಪು, ಒಗ್ಗರಣೆ ಹಿತಮಿತವಾಗಿ ಹಾಕಿದರೆ ತಂಬುಳಿ ಸಿದ್ಧ. ಹಳ್ಳಿಗಳಲ್ಲಿ ಊಟದ ಹೊತ್ತಿಗೆ ಅತಿಥಿಗಳು ಆಕಸ್ಮಿಕವಾಗಿ ಬಂದರೆ ಹತ್ತು ನಿಮಿಷಗಳಲ್ಲಿ ಸುಲಭವಾಗಿ ತಯಾರಿಸುವ ಪದಾರ್ಥಗಳಲ್ಲಿ ತಂಬುಳಿಯೂ ಒಂದು. ಬೇಸಿಗೆಯಲ್ಲಿ ಊಟದಲ್ಲಿ ಪದಾರ್ಥವಾಗಿ, ಬಾಯಾರಿ ಬಂದವರಿಗೆ ಪಾನೀಯವಾಗಿ ತಂಬುಳಿ ಜನಪ್ರಿಯ. ತಂಬುಳಿ ಗೊತ್ತಿಲ್ಲದ ಮಲೆನಾಡಿಗರು ಸಿಗಲಿಕ್ಕಿಲ್ಲʼ ಎಂಬುದಾಗಿ ಅವರು ಅದರ ತಯಾರಿ, ಪ್ರಯೋಜನಗಳ ಬಗ್ಗೆಯೂ ಹೇಳಿದ್ದಾರೆ.
ತಂಬುಳಿ ಮನೆಯಲ್ಲಿ ಅದರ ರೂವಾರಿ ಕಾರ್ತಿಕ್ ಎಚ್. ಶ್ರೀಧರ ಅವರನ್ನು ಭೇಟಿಯಾದ ಭಟ್ಟರು, ಅವರ ಹಿನ್ನೆಲೆಯನ್ನೂ ವಿವರಿಸಿದ್ದಾರೆ. ʼಮೂಲತಃ ಸಾಗರದವರಾದ ಕಾರ್ತಿಕ್ ಶ್ರೀಧರ ಬಿಟ್ಸ್ ಪಿಲಾನಿಯಲ್ಲಿ ಓದಿ, ವಿಪ್ರೋದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ, ನಂತರ ಡ್ಯೂಯಿಷ್ ಬ್ಯಾಂಕ್ ಸೇರಿ, ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು, ಈಗ ತಮ್ಮ ಸ್ನೇಹಿತ ಪ್ರಶಾಂತ ಅವರೊಂದಿಗೆ ಸೇರಿ, ‘ತಂಬುಳಿ ಮನೆʼ ಆರಂಭಿಸಿದ್ದಾರೆ ಎಂದು ಭಟ್ಟರು ʼತಂಬುಳಿ ಮನೆʼಯ ಹಿನ್ನೆಲೆ ಬಗ್ಗೆ ತಮ್ಮ ಓದುಗ ಅಭಿಮಾನಿಗಳಿಗೆ ತಿಳಿಸಿಕೊಟ್ಟಿದ್ದಾರೆ.
ʼಈಗಾಗಲೇ ಬೆಂಗಳೂರಿನ ರಾಜರಾಜೇಶ್ವರಿನಗರ, ಜೆ.ಪಿ.ನಗರ ಮತ್ತು ಬನಶಂಕರಿಯಲ್ಲಿ ತಂಬುಳಿ ಮನೆ ಔಟ್‌ಲೆಟ್ ಇದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದನ್ನು ಗಮನಿಸಿ, ಫ್ರಾಂಚೈಸಿ ನೀಡಲು ನಿರ್ಧರಿಸಿದ್ದು, ಈಗಾಗಲೇ ಏಳು ಶಾಖೆಗಳನ್ನು ತೆರೆಯಲು ಜನ ಮುಂದೆ ಬಂದಿದ್ದಾರೆʼ ಎಂದು ಭಟ್ಟರು ಶುಭ ಹಾರೈಸಿದ್ದಾರೆ.
ಮಲೆನಾಡಿನಲ್ಲಿ ಮಾತ್ರ ಲಭ್ಯ ಇರುವ ಹಲವು ಸೊಪ್ಪು, ಬೇರುಗಳನ್ನು ಅಲ್ಲಿಂದಲೇ ತರಿಸಿ, ಸಂಸ್ಕರಿಸಿ, ಸೆಂಟ್ರಲೈಜ್ಡ್ ಕಿಚನ್‌ನಲ್ಲಿ ತಂಬುಳಿ ತಯಾರಿಸಿ, ಎಲ್ಲ ಶಾಖೆಗಳಿಗೆ ವಿತರಿಸಲಾಗುತ್ತಿದೆ. ಸದ್ಯದಲ್ಲೇ ‘ತಂಬುಳಿ ಮನೆʼ ಬೆಂಗಳೂರಿನ ಎಲ್ಲ ಕಡೆಗಳಲ್ಲಿ ಪಸರಿಸಿ, ಮುಂಬರುವ ದಿನಗಳಲ್ಲಿ ‘ತಂಬುಳಿ ಮನೆʼ ಒಂದು ಜನಪ್ರಿಯ ಬ್ರ್ಯಾಂಡ್ ಆದರೆ ಅಚ್ಚರಿ ಇಲ್ಲ.
| ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ.
ʼತಂಬುಳಿ ಮನೆಯಲ್ಲಿ ಮಧ್ಯಾಹ್ನ ಅಪ್ಪಟ ಮಲೆನಾಡಿನ ಭೋಜನ ವ್ಯವಸ್ಥೆಯೂ ಇದೆ. ಬನಶಂಕರಿ ಆರನೇ ಹಂತದಲ್ಲಿರುವ ಶಾಖೆಯಲ್ಲಿ ಮಧ್ಯಾಹ್ನ ಬಾಳೆ ಎಲೆ ಊಟವೂ ಲಭ್ಯ. ಮಲೆನಾಡಿನ ತಂಬುಳಿಗೆ ಕಾರ್ತಿಕ್ ಮತ್ತು ಅವರ ಸ್ನೇಹಿತರ ಪ್ರಯತ್ನದಿಂದಾಗಿ ಶುಕ್ರದೆಸೆ ಆರಂಭವಾಗಿದೆ. ತಂಬುಳಿಗೆ ಜನರ ಬಾಯಿಚಪಲ ಗೆಲ್ಲುವ ತಾಕತ್ತಿದೆ. ತಂಬುಳಿ ಬರೀ ಪಾನೀಯ ಮಾತ್ರ ಅಲ್ಲ, ಅದಕ್ಕೆ ಔಷಧೀಯ ಗುಣವೂ ಇದೆ. ಆರೋಗ್ಯಕ್ಕೂ ಒಳ್ಳೆಯದು. ಯಾವುದೇ ಅಡ್ಡ ಪರಿಣಾಮವಂತೂ ಇಲ್ಲವೇ ಇಲ್ಲʼ ಎಂಬುದು ಭಟ್ಟರ ಅಭಿಪ್ರಾಯ.
ʼತಂಬುಳಿ ಮನೆ’ ಘೋಷವಾಕ್ಯ ’ನಮ್ಮ ಅಜ್ಜಿ ಹೇಳಿಕೊಟ್ಟಿದ್ದುʼ (My Grandma’s Recipe) ಅಂತಿದೆ. ಇದು ‘ತಂಬುಳಿ ಮನೆʼ ಅಥೆಂಟಿಸಿಟಿಯನ್ನು ಹೆಚ್ಚಿಸಿದೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿನ ಕೆಲಸ ಬಿಟ್ಟು ‘ತಂಬುಳಿ ಮನೆ’ ಆರಂಭಿಸಿರುವ ಕಾರ್ತಿಕ್ ಮತ್ತು ಅವರ ಸ್ನೇಹಿತರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಅಜ್ಜಿಯೊಂದಿಗೇ ಕಾಲಗರ್ಭ ಸೇರಿ ಹೋಗುತ್ತಿದ್ದ ತಂಬುಳಿಗೆ ಕಾಯಕಲ್ಪ ನೀಡುವ ಅವರ ಪ್ರಯತ್ನವನ್ನು ಬೆಂಬಲಿಸಬೇಕಿದೆ. ಬಾಯಾರಿದ ಬೆಂಗಳೂರಿಗರಿಗೆ ‘ತಂಬುಳಿಮನೆ’ ಹೊಸ ಜಾಯಿಂಟ್ ಆಗುವುದರಲ್ಲಿ ಸಂದೇಹವಿಲ್ಲʼ ಎಂದಿರುವ ಭಟ್ಟರು, ಸಾಧ್ಯವಾದರೆ ಒಮ್ಮೆ ‘ತಂಬುಳಿ ಮನೆʼಗೆ ಹೋಗಿ ಬನ್ನಿ, ನಾನು ಅದರ ಬಗ್ಗೆ ಬರೆದಿದ್ದು ಏನೇನೂ ಅಲ್ಲ ಎಂಬುದು ನಿಮಗೆ ಮನವರಿಕೆ ಆದೀತುʼ ಎಂದೂ ಹೇಳಿದ್ದಾರೆ.
ಇದೂ ಓದಿ: ಹೋಟೆಲ್ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ