ಬೆಂಗಳೂರು: ಎಂದೋ ನೆಟ್ಟ ಗಿಡ ಮುಂದೆ ಮರವಾಗಿ ನೆರಳು ನೀಡುವುದು, ಫಲ ನೀಡುವುದು ಸಹಜ. ಆದರೆ ಇಲ್ಲೊಂದು ಗಿಡ ವರ್ಷಗಳ ಬಳಿಕ ಮರವಾಗಿದ್ದಷ್ಟೇ ಅಲ್ಲದೆ, ಅವಘಡವೊಂದರಿಂದ ಅಂಥ ಅಪಾಯ ಆಗದಂತೆ ರಕ್ಷಣೆಯನ್ನೂ ನೀಡಿದೆ.
ಈ ಅಪರೂಪದ ವಿದ್ಯಮಾನ ಮಲ್ಲೇಶ್ವರದಲ್ಲಿರುವ ಜನಪ್ರಿಯ ಹೋಟೆಲ್ ʼಹಳ್ಳಿಮನೆʼ ಎದುರು ಅ.22ರ ಮಂಗಳವಾರ ನಡೆದಿದೆ. ಬೆಂಗಳೂರಿನಾದ್ಯಂತ ಸುರಿದ ಭಾರಿ ಮಳೆಗೆ ಇತರೆಡೆ ವರದಿಯಾದ ಅವಾಂತರಗಳಂತೆ ಹಳ್ಳಿಮನೆ ಎದುರೂ ಅವಘಡವೊಂದು ಸಂಭವಿಸಿದೆ.
ಅರ್ಥಾತ್, ಭಾರಿ ಮಳೆಯಿಂದಾಗಿ ಹೋಟೆಲ್ ಎದುರಿನ ಬೃಹತ್ ಮರವೊಂದು ಬುಡಸಮೇತ ಧರೆಗುರುಳಿದೆ. ಅದಾಗ್ಯೂ ಯಾವುದೇ ಅನಾಹುತ ಉಂಟಾಗಲಿಲ್ಲ. ಅಷ್ಟು ದೊಡ್ಡ ಮರ ಬಿದ್ದರೂ ಅಂಥ ಯಾವುದೇ ದುರಂತ ಸಂಭವಿಸದಂತೆ ಹೋಟೆಲ್ ಸಮೀಪದ ಇನ್ನೊಂದು ಮರವೇ ರಕ್ಷಣೆ ನೀಡಿದೆ. ಇದೊಂದು ಪವಾಡವೇ ಸರಿ ಎಂದು ಹೋಟೆಲ್‌ನವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ʼನಿನ್ನೆಯ ಮಳೆ ಸಂದರ್ಭ ಹಳ್ಳಿಮನೆ ಬಳಿ ಅನಿರೀಕ್ಷಿತ ಘಟನೆಯೊಂದು ನಡೆದಿದ್ದು, ದೊಡ್ಡ ಮರವೊಂದು ನಮ್ಮ ಆವರಣದಲ್ಲಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಅಲ್ಲದೆ, ಹಾನಿ ಕೂಡ ತೀರಾ ಕನಿಷ್ಠ ಪ್ರಮಾಣದಲ್ಲಿ ಆಗಿದೆ. ಏಕೆಂದರೆ ಬುಡ ಕಿತ್ತುಬಂದ ಮರ ನೇರವಾಗಿ ಅಲ್ಲೇ ಪಕ್ಕದ ಇನ್ನೊಂದು ಮರದ ಮೇಲೆ ಬಿದ್ದಿದೆ. ಈ ಮೂಲಕ ಸಂಭಾವ್ಯ ಭಾರಿ ಹಾನಿ ಆ ಇನ್ನೊಂದು ಮರದ ಕಾರಣದಿಂದಾಗಿ ತಪ್ಪಿದಂತಾಗಿದೆ. ವಿಶೇಷವೆಂದರೆ, ಇದನ್ನು 25 ವರ್ಷಗಳ ಹಿಂದೆ ಹೋಟೆಲ್ ನಿರ್ಮಾಣ ವೇಳೆ ನಾವು ನೆಟ್ಟಿದ್ದೆವುʼ ಎಂದು ಹಳ್ಳಿಮನೆಯವರು ತಿಳಿಸಿದ್ದಾರೆ.

ʼಹಳ್ಳಿಮನೆ ಎಂದಿನಂತೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆʼ ಎಂದು ತಿಳಿಸಿರುವ ಹೋಟೆಲ್ ಆಡಳಿತ, ಈ ಸಣ್ಣ ದುರ್ಘಟನೆಯ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ಸಹಕರಿಸಿ, ಸಾರ್ವಜನಿಕರು ಬೆಂಬಲ ಮುಂದುವರಿಸುತ್ತಿರುವುದನ್ನು ಮೆಚ್ಚಿ ಸಂತಸವನ್ನೂ ವ್ಯಕ್ತಪಡಿಸಿದೆ.
"ಹಳ್ಳಿಮನೆ" ಬಳಿ 25 ವರ್ಷಗಳ ಹಿಂದೆ ನೆಟ್ಟಿದ್ದ ಗಿಡವೇ ಮರವಾಗಿ ರಕ್ಷಿಸಿತು!
— ಹೋಟೆಲ್ ಕನ್ನಡ / Hotel Kannada (@HotelKannada) October 23, 2024
ವಿವರಗಳಿಗೆ: https://t.co/U5t17ljGCU ನೋಡಿ.#HotelKannada #Hallimane #Rain pic.twitter.com/DhymQATE6i
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಬೆಂಗಳೂರಿಗೂ ಬಂತು ತಂಬುಳಿ: ʼತಂಬುಳಿ ಮನೆʼಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರ ಮೆಚ್ಚುಗೆ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ