ಬೆಂಗಳೂರು: ಅಬಕಾರಿ ಸಚಿವರನ್ನು ಬದಲಾಯಿಸುವುದು, ಇಲಾಖೆಯಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿ ಬಂದ್ ಮಾಡುವ ಮೂಲಕ ಕರೆಕೊಟ್ಟಿರುವ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಸ್ಪಷ್ಟಪಡಿಸಿದೆ.
ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ವೈನ್ ಮರ್ಚೆಂಟ್ಸ್‌ನ ಹೊನ್ನಗಿರಿಗೌಡ ಹಾಗೂ ಕರ್ನಾಟಕ ಲಿಕ್ಕರ್ ಮರ್ಚೆಂಟ್ಸ್ ಸೊಸೈಟಿ ಅಧ್ಯಕ್ಷ ಎಸ್. ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಆದರೆ ಅವರು ನಮ್ಮ ಒಕ್ಕೂಟದ ಸದಸ್ಯರಲ್ಲ. ಹಿಂದೆ ನಾವು ನಡೆಸಿದ ಹೋರಾಟದಲ್ಲಿ ತೆಗೆದುಕೊಂಡ ತೀರ್ಮಾನಗಳಲ್ಲಿ ಅವರು ಭಾಗವಹಿಸಿರಲೂ ಇಲ್ಲ ಎಂದು ಒಕ್ಕೂಟದ ಅಧ್ಯಕ್ಷ ಎಸ್.ಗುರುಸ್ವಾಮಿ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಸನ್ನದುದಾರರು ಸೇರಿ ನಡೆಸಿರುವ ಪ್ರತಿಭಟನೆಗಳ ಯಶಸ್ಸು ಸಹಿಸದ ಕೆಲವು ವ್ಯಕ್ತಿಗಳು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ನ.20ರ ನಂತರ ಸುದ್ದಿಗೋಷ್ಠಿ ನಡೆಸಿ ಇಂತಹ ವಿರೋಧಿ ಹೇಳಿಕೆ ನೀಡಲು ಕಾರಣರಾದವರ ಹಾಗೂ ಅಬಕಾರಿ ಸಚಿವರ ಬಗ್ಗೆಯೂ ತಿಳಿಸಲಾಗುವುದು. ನಮ್ಮ ಹೋರಾಟವನ್ನು ಹಾದಿ ತಪ್ಪಿಸುವ ನಿಟ್ಟಿನಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಇಬ್ಬರು ಸನ್ನದುದಾರರು, ಸಚಿವರ ಜತೆ ಮಾತುಕತೆ ನಡೆಸಿರುವ ಭಾವಚಿತ್ರ ನಮಗೆ ಸಿಕ್ಕಿದೆ. ನಮ್ಮ ಒಕ್ಕೂಟದ 31 ಜಿಲ್ಲಾ ಪದಾಧಿಕಾರಿಗಳು, ಸನ್ನದುದಾರರು ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನದಂತೆ ಪ್ರತಿಭಟನೆ ನಡೆಯಲಿದೆ ಎಂದು ಗುರುಸ್ವಾಮಿ ಹೇಳಿದ್ದಾರೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಮನವಿ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ