ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದಿಂದ ʼಉದ್ಯಮ ಚೇತನʼ, ʼಪ್ರತಿಭಾ ಚೇತನʼ ಪ್ರಶಸ್ತಿ ಪ್ರದಾನ

ಉದ್ಯಮ ಚೇತನ ಪ್ರಶಸ್ತಿ ಪುರಸ್ಕೃತರು.

ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘವು ಹೋಟೆಲ್ ಕ್ಷೇತ್ರದ ಸಾಧಕರನ್ನು ಗುರುತಿಸಿ ʼಉದ್ಯಮ ಚೇತನʼ ಪ್ರಶಸ್ತಿ ನೀಡಿದ್ದಲ್ಲದೆ, ಹೋಟೆಲಿಗರ ಪ್ರತಿಭಾವಂತ ಮಕ್ಕಳಿಗೆ ʼಪ್ರತಿಭಾ ಚೇತನʼ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದೆ. ಅಲ್ಲದೆ, ಹೋಟೆಲ್ ಕಾರ್ಮಿಕರ 22 ಮಕ್ಕಳಿಗೆ ತಲಾ 5 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಿದೆ.

ಬೆಂಗಳೂರಿನಲ್ಲಿ ನ.13ರಂದು ಆಯೋಜಿಸಿದ್ದ ಬೆಂಗಳೂರು ಹೋಟೆಲುಗಳ ಸಂಘದ 89ನೇ ಸರ್ವ ಸದಸ್ಯರ ಸಭೆ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್​ಕೆಸಿಸಿಐನ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಸಂಜೆ ಐದರಿಂದ ಈ ಕಾರ್ಯಕ್ರಮ ನಡೆಯಿತು.

ಹಿರಿಯ ಹೋಟೆಲ್ ಉದ್ಯಮಿಗಳಾದ ಎನ್.ಎಸ್. ಶ್ರೀನಿವಾಸ ರಾವ್, ಐ. ತಾರಾನಾಥ್ ಶೆಟ್ಟಿ, ಎಚ್.ಆರ್. ವೆಂಕಟೇಶ್ ರಾವ್, ವಿಜಯಕುಮಾರ್ ಮಿಶ್ರಾ ಹಾಗೂ ಸುಬ್ಬ ರಾವ್ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಉದ್ಯಮ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಹೋಟೆಲ್‌ ಉದ್ಯಮಿಗಳು ಮತ್ತು ಗಣ್ಯರು, ಬಿಎಚ್‌ಎ ಪದಾಧಿಕಾರಿಗಳು.

ಹೋಟೆಲ್​ ಬಿರಿಯಾನಿ ಪ್ಯಾಲೇಸ್​ನ ಪ್ರಭಾಕರ್ ಶೆಟ್ಟಿ ಅವರ ಪುತ್ರಿ ಮೇಧ ಪಿ. ಶೆಟ್ಟಿ, ಎಸ್​​ಎಲ್​ವಿ ಸ್ವಾಗತ್ ಹೋಟೆಲ್​ನ ಶಶಿಧರ್ ಉಡುಪ ಅವರ ಪುತ್ರಿ ಮೇಧಶ್ರೀ ಉಡುಪ ಅವರು ಎಸ್​ಎಸ್​ಎಲ್​ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದಕ್ಕೆ ಹಾಗೂ ಬೆಂಗಳೂರು ಹೋಟೆಲುಗಳ ಸಂಘದ ಮ್ಯಾನೇಜರ್ ಕೆ.ವಿ. ತ್ರಿವೇಣಿ ಅವರ ಪುತ್ರ ಎ.ನಿತಿನ್ ಅವರು ಸಿಂಗಾಪುರದಲ್ಲಿ ನಡೆದ ಇಂಟರ್​ನ್ಯಾಷನಲ್​ ರೊಬೊಟಿಕ್ಸ್ ಸ್ಪರ್ಧೆಯ 2 ವಿಭಾಗಗಳಲ್ಲಿ ತೃತೀಯ ಪ್ರಶಸ್ತಿ ಪಡೆದಿದ್ದಕ್ಕೆ ಪ್ರತಿಭಾ ಚೇತನ ಪ್ರಶಸ್ತಿಗೆ ಪಾತ್ರರಾದರು.

ಪ್ರತಿಭಾ ಚೇತನ ಪ್ರಶಸ್ತಿ ಪುರಸ್ಕೃತರೊಂದಿಗೆ ಗಣ್ಯರು ಮತ್ತು ಬಿಎಚ್‌ಎ ಪದಾಧಿಕಾರಿಗಳು.

ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಉಪಾಧ್ಯಕ್ಷ ಸಾಯಿರಾಂ ಪ್ರಸಾದ್‌, ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್.‌ ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್‌, ಉಪಾಧ್ಯಕ್ಷರಾದ ಶಕೀರ್‌ ಹಕ್‌, ಎ. ಶಂಕರ್‌ ಕುಂದರ್‌, ಖಜಾಂಚಿ ಜಿ. ಸುಧಾಕರ್‌ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾದ ಎಸ್‌.ಪಿ. ಕೃಷ್ಣರಾಜ್‌, ಬಿ.ಎಂ. ಧನಂಜಯ, ಶೇಖರ್‌ ನಾಯ್ಡು ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇತನ ಸ್ವೀಕರಿಸಿದವರ ಜೊತೆಗೆ ಗಣ್ಯರು ಮತ್ತು ಬಿಎಚ್‌ಎ ಪದಾಧಿಕಾರಿಗಳು.

ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗಿದ್ದು, ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸಮಸ್ಯೆ-ಸವಾಲುಗಳ ಕುರಿತು ಚರ್ಚೆಗಳು ನಡೆದವು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ