ಬೆಂಗಳೂರು: ಅಬಕಾರಿ ಸಚಿವರ ಬದಲಾವಣೆ, ಇಲಾಖೆಯಲ್ಲಿನ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿ ಬಂದ್ಗೆ ಈಗಾಗಲೇ ಕರೆ ನೀಡಲಾಗಿದೆ.
ಅಲ್ಲದೆ, ನ. 20ರಂದು ಮದ್ಯ ಮಾರಾಟ ಬಂದ್ ಖಚಿತ ಎಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಸ್ಪಷ್ಟಪಡಿಸಿದೆ. ಇದೀಗ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಹೊಸದೊಂದು ಪ್ರಕಟಣೆ ಹೊರಬಿದ್ದಿದೆ.
ಬೆಂಗಳೂರು ನಗರ ಜಿಲ್ಲೆಯ ಎಲ್ಲ ವರ್ಗದ ಸನ್ನದುದಾರರ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನ. 20ರಂದು ಹಮ್ಮಿಕೊಂಡಿರುವ ಮದ್ಯ ಮಾರಾಟ ಬಂದ್ ಮುಂದೂಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ(ರಿ.) ತಿಳಿಸಿದೆ.
ರಾಜ್ಯದ ಅಬಕಾರಿ ಉದ್ಯಮಕ್ಕೆ ಸಂಬಂಧಿತ ಉನ್ನತ ಅಧಿಕಾರಿಗಳು ಹಾಗೂ ಸಂಘಟನೆಯ ಸದಸ್ಯರನ್ನು ಕರೆಸಿ ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಕುರಿತು ಮುಖ್ಯಮಂತ್ರಿಯವರು ಭರವಸೆ ನೀಡಿರುವುದರಿಂದ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಮದ್ಯ ಮಾರಾಟ ಬಂದ್ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಕರುಣಾಕರ ಹೆಗ್ಡೆ ತಿಳಿಸಿದ್ದಾರೆ.