ಒಳಗೇನಿದೆ!?

ಇದು ಅಬಕಾರಿ ಇತಿಹಾಸದಲ್ಲೇ ದಾಖಲೆ!: ಮದ್ಯ ಖರೀದಿಗೆ ಸಾಲವೇ ಮಧ್ಯವರ್ತಿ; ಒಂದೇ ದಿನದಲ್ಲಿ ಮಾರಾಟವಾದ ಮದ್ಯವೆಷ್ಟು ಗೊತ್ತೇ?

ಬೆಂಗಳೂರು: ಹೊಸ ವರ್ಷಾಚರಣೆಯ ಪಾರ್ಟಿಗೆ ಈ ಸಲ ಮದ್ಯ ಸಾಲದು ಎನ್ನುವಂತಿಲ್ಲ. ಏಕೆಂದರೆ ಸಾಕೆನಿಸುವಷ್ಟು ಮದ್ಯವನ್ನು ಒದಗಿಸಲು ಅಬಕಾರಿ ಇಲಾಖೆ ಇದೇ ಮೊದಲ ಸಲ ಸಾಲವನ್ನೂ ನೀಡಿದೆ. ಪರಿಣಾಮವಾಗಿ ಒಂದೇ ದಿನದಲ್ಲಿ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗಿದೆ. ಶನಿವಾರ (ಡಿ.28) ಒಂದೇ ದಿನ 408 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದು, ಅಬಕಾರಿ ಇತಿಹಾಸದಲ್ಲೇ ಇದು ದಾಖಲೆ ಎನ್ನಲಾಗಿದೆ.

ರಾಜ್ಯದಲ್ಲಿ 12,614 ಮದ್ಯದಂಗಡಿಗಳಿದ್ದು, ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ 65-70 ಕೋಟಿ ರೂ. ಆದಾಯ ಬರುತ್ತದೆ. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಸರ್ಕಾರ, ಡಿ.27ರ ಶುಕ್ರವಾರ ರಜೆ ಘೋಷಿಸಿತ್ತು. ನಾಲ್ಕನೇ ಶನಿವಾರವೂ ರಜೆ ಇರುವುದರಿಂದ ಕೆಎಸ್‌ಬಿಸಿಎಲ್‌ ಡಿಪೋಗಳಿಂದ ಮದ್ಯ ಎತ್ತುವಳಿ ಸಾಧ್ಯವಿರಲಿಲ್ಲ. 

ಆದರೆ, ಸತತ ರಜೆ ಹಿನ್ನೆಲೆಯಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡುವಂತೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ವಿನಂತಿ ಮೇರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್) ಸಾಲ ಸೌಲಭ್ಯದ ಮೇರೆಗೆ ಶನಿವಾರ ಮದ್ಯ ಎತ್ತುವಳಿಗೆ ಅನುಮತಿ ನೀಡಿದ್ದು, 327.50 ಕೋಟಿ ರೂ. ಮೌಲ್ಯದ 6.22 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ 6 (ಐಎಂಎಲ್) ಹಾಗೂ 80.58 ಕೋಟಿ ರೂ. ಮೌಲ್ಯದ 4.04 ಲಕ್ಷ ಬಾಕ್ಸ್ ಬಿಯ‌ರ್ ಎತ್ತುವಳಿಯಾಗಿದೆ.

ಸಾಲ ಸೌಲಭ್ಯದ ಆಧಾರದಲ್ಲಿ ಮದ್ಯ ಮಾರಾಟಗಾರರು 150 ಕೋಟಿ ರೂ. ಮೌಲ್ಯದ ಮದ್ಯ ಖರೀದಿಸಿದ್ದಾರೆ. ಒಟ್ಟು 8,341 ಇನ್‌ವಾಯ್ಸ್‌ ಆಗಿವೆ. ಇದಕ್ಕೆ ಸಹಕರಿಸಿದ ಅಬಕಾರಿ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇವೆ. 
| ಬಿ. ಗೋವಿಂದರಾಜ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ.

ಸರ್ಕಾರದ ನಿರೀಕ್ಷೆ ಹೆಚ್ಚಳ

ಹೊಸ ವರ್ಷಕ್ಕೆ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುವ ಸಾಧ್ಯತೆ ಇದೆ. ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಮದ್ಯ, ಬಿಯರ್ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಇನ್ನಷ್ಟು ನಿರೀಕ್ಷೆ ಉಂಟಾಗಿದೆ.

ದೇಶದಲ್ಲೇ ಪ್ರಪ್ರಥಮ 

ಮದ್ಯದಂಗಡಿ ಮಾಲೀಕರ ಮನವಿ ಮೇರೆಗೆ ಹಾಗೂ ರಜೆ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ತೆರೆಯದ ಕಾರಣ ದೇಶದಲ್ಲೇ ಪ್ರಥಮ ಬಾರಿಗೆ ಸಾಲ ಸೌಲಭ್ಯ ಆಧಾರದಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡಲಾಗಿದೆ. ದಾಖಲೆ ಮಟ್ಟದಲ್ಲಿ ಮದ್ಯ ಸೇಲಾಗಿರುವ ಪರಿಣಾಮ ಇಲಾಖೆಗೆ ಹೆಚ್ಚಿನ ಆದಾಯ ಬಂದಿದೆ ಎಂದು ಇಲಾಖೆ ಜಂಟಿ ಆಯುಕ್ತ ಟಿ.ನಾಗರಾಜಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೂ ಓದಿ: ಅಬಕಾರಿ ಸಚಿವರಿಗೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಮನವಿ

ಇದೂ ಓದಿ: ಮೈಸೂರು ದಸರೆಗೆ ʼಹುಲಿʼ ಬಂದಿದೆ!; ಜಾಗ ಬಿಡಿ ಜಾಗರೀ.. ಇದು ʼಜಾಗರಿ ರಮ್‌…ʼ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ