ನವದೆಹಲಿ: ವ್ಯಾಪಾರಿಗಳಿಗೆ ಇನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಖ್ಯೆ ಪಡೆಯುವ ತಲೆನೋವು ಕಡಿಮೆ ಆಗಲಿದೆ. ಏಕೆಂದರೆ ಇನ್ಮುಂದೆ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳುವುದು ಬರೀ ಏಳು ದಿನಗಳ ಒಳಗೆ ಸಾಧ್ಯವಾಗಲಿದೆ.
ಅಪಾಯಕಾರಿ ಎಂದು ಪರಿಗಣಿಸಲಾದ ಅರ್ಜಿಗಳನ್ನು ಮಾತ್ರ ಇದು ಒಂದು ತಿಂಗಳವರೆಗೆ ಸಮಯ ತೆಗೆದುಕೊಳ್ಳಲಿದೆ. ಇಂಥ ಪ್ರಕರಣಗಳಲ್ಲಿ ಖುದ್ದು ಸ್ಥಳ ಪರಿಶೀಲನೆ ಬಳಿಕ 30 ದಿನಗಳೊಳಗೆ ಜಿಎಸ್‌ಟಿ ವಿಲೇವಾರಿ ಮಾಡಲಾಗುತ್ತದೆ.
ಕೆಲವು ಅಧಿಕಾರಿಗಳು ಅನುಮಾನಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟು ಅನಗತ್ಯ ದಾಖಲೆಗಳನ್ನು ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಈ ಮಾರ್ಗಸೂಚಿ ಹೊರಡಿಸಿದೆ. ಅಲ್ಲದೆ, ಅಧಿಕಾರಿಗಳು ವ್ಯಾಪಾರ ಸಂಸ್ಥೆಗಳಿಂದ ಆನ್‌ಲೈನ್ ಮೂಲಕ ಕೇಳಬಹುದಾದ ದಾಖಲೆಗಳ ಪಟ್ಟಿ ಬಿಡುಗಡೆ ಮಾಡಿದೆ. ನೋಂದಣಿ ಅರ್ಜಿ ಇತ್ಯರ್ಥಗೊಳಿಸುವಾಗ ಈ ದಾಖಲೆಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಸೂಚಿಸಬಾರದು ಎಂದೂ ಸ್ಪಷ್ಟಪಡಿಸಿದೆ.
ಪ್ರಿನ್ಸಿಪಲ್ ಪ್ಲೇಸ್ ಆಫ್ ಬಿಜಿನೆಸ್‌ಗೆ (ಪಿಪಿಒಬಿ) ಸಂಬಂಧಿಸಿದಂತೆ ಅರ್ಜಿದಾರರು ಇತ್ತೀಚಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮುನಿಸಿಪಲ್ ಖಾತಾ ಪ್ರತಿ, ಮಾಲೀಕರ ವಿದ್ಯುತ್ ಬಿಲ್ ಪ್ರತಿ, ಸ್ಥಳದ ಮಾಲೀಕತ್ವ ಖಚಿತಪಡಿಸುವ ನೀರಿನ ಬಿಲ್ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಅಪ್‌ಲೋಡ್ ಮಾಡಬೇಕು. ಜಾಗವನ್ನು ಬಾಡಿಗೆಗೆ ಪಡೆದಿದ್ದರೆ ಪಿಪಿಒಬಿಗೆ ಸಂಬಂಧಿಸಿದ ಯಾವುದಾದರೂ ಒಂದು ದಾಖಲೆಯ ಜೊತೆ ಬಾಡಿಗೆ/ಲೀಸ್ ಒಪ್ಪಂದದ ಪ್ರತಿ ಅಪ್‌ಲೋಡ್ ಮಾಡಬೇಕು.
‘ಕಾನ್ ಸ್ಟಿಟ್ಯೂಷನ್ ಆಫ್ ಬಿಜಿನೆಸ್’ಗೆ ಸಂಬಂಧಿಸಿದಂತೆ ಅರ್ಜಿದಾರರು ಪಾಲುದಾರರಾಗಿದ್ದಲ್ಲಿ ಪಾಲುದಾರಿಕೆ ಒಪ್ಪಂದವನ್ನು ಅಪ್‌ಲೋಡ್ ಮಾಡಬೇಕು. ಉದ್ಯಮ್ ಸರ್ಟಿಫಿಕೇಟ್, ಎಂಎಸ್‌ಎಂಇ ಸರ್ಟಿಫಿಕೇಟ್, ಟ್ರೇಡ್ ಲೈಸೆನ್ಸ್ ಮುಂತಾಗಿ ಬೇರಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇಲ್ಲ ಎಂದು ಕೂಡ ಸಿಬಿಐಸಿ ಸ್ಪಷ್ಟಪಡಿಸಿದೆ.
ಇದೂ ಓದಿ: ಪಿಎಫ್ ಹಣ ಹಿಂಪಡೆಯುವುದು ಈಗ ಮತ್ತಷ್ಟು ಸುಲಭ; ಕ್ಲೇಮ್ ಇತ್ಯರ್ಥ ಸರಾಗ..
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ