ಶಿವಮೊಗ್ಗ: ಈ ಸ್ಪರ್ಧಾತ್ಮಕ ಯುಗದಲ್ಲಿ ಹೋಟೆಲ್ ಮಾಲೀಕರ ಎದುರು ಎರಡು ರೀತಿಯ ಹೋರಾಟಗಳಿದ್ದು, ಮಾಲೀಕರು ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ(ಕೆಎಸ್‌ಎಚ್‌ಎ)ದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ಕೆಎಸ್‌ಎಚ್‌ಎ ಸಹಯೋಗದಲ್ಲಿ ಶಿವಮೊಗ್ಗದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಏ.20ರ ಮಂಗಳವಾರ ಹಮ್ಮಿಕೊಂಡಿದ್ದ ʼಹೋಟೆಲ್ ಉದ್ಯಮದಲ್ಲಿ ಹೊಸ ಪ್ರವೃತ್ತಿಗಳುʼ ಎಂಬ ವಿಷಯ ಕುರಿತ ವಿಶೇಷ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಅಂದರೆ 1970ರ ಸುಮಾರಿಗೆ ಹೋಟೆಲ್ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಆದರೆ ಕಾರ್ಮಿಕ ಸಂಘಟನೆಗಳಿಂದ ಸಮಸ್ಯೆ ಆಗುತ್ತಿತ್ತು. ಈಗ ಹೋಟೆಲ್ ಮಾಲೀಕರಿಗೆ ಕಾರ್ಮಿಕರ ಕೊರತೆ ಇದೆ, ಜೊತೆಗೆ ಸರ್ಕಾರದಿಂದಲೂ ಸಮಸ್ಯೆ ಎದುರಾಗಿದೆ. ಸರ್ಕಾರದ ಹೊಸ ಹೊಸ ಕಾನೂನುಗಳನ್ನು ತಪ್ಪಿಸಿಕೊಳ್ಳಲು ಹೋರಾಟ ಮಾಡುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ತುಂಬಾ ಹಿಂದೆ ಕೆಲಸ ಅನಿವಾರ್ಯವಾಗಿತ್ತು, ಆದರೆ ಈಗ ಕಾಲ ಬದಲಾಗಿದ್ದು, ಕಾರ್ಮಿಕರು ಕಂಫರ್ಟ್ ಇದ್ದರೆ ಮಾತ್ರ ಕೆಲಸ ಮಾಡುತ್ತಾರೆ. ಹೀಗಾಗಿ ಕಾರ್ಮಿಕರನ್ನು ಉಳಿಸಿಕೊಳ್ಳುವ ಸವಾಲುಗಳು ಎದುರಾಗಿವೆ. ಬದಲಾದ ಕಾಲಕ್ಕೆ ತಕ್ಕಂತೆ ಹೋಟೆಲ್ ವಿನ್ಯಾಸಗಳಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಮತ್ತೊಂದೆಡೆ ಜನರು ಆಹಾರ ದರಕ್ಕಿಂತ ತುಂಬಾ ಸಮಯದವರೆಗೆ ಹಸಿವು ನೀಗಿಸುವಂಥ ಹೋಟೆಲ್‌ಗಳನ್ನು ಹುಡುಕಲಾರಂಭಿಸಿದ್ದಾರೆ. ಆದ್ದರಿಂದ ಹೋಟೆಲ್ ಉದ್ಯಮದವರಿಗೆ ತರಬೇತಿ ಅಗತ್ಯವಾಗಿದೆ ಎಂದರು.

ಸರಿಯಾದ ಮಾಹಿತಿ ಇರಲಿ: ಪಿ.ಸಿ.ರಾವ್
ಹೋಟೆಲ್ ಉದ್ಯಮಿಗಳಾಗುವವರು ಕಣ್ಣುಮುಚ್ಚಿಕೊಂಡು ಹೋಟೆಲ್ ಆರಂಭಿಸಬಾರದು. ಎಲ್ಲಕ್ಕಿಂತ ಮೊದಲು ಕಟ್ಟಡ ಮಾಲೀಕರ ಬಗ್ಗೆ ಸರಿಯಾದ ಮಾಹಿತಿ ಪಡೆಯಬೇಕು. ಏಕೆಂದರೆ, ಬೆಂಗಳೂರಿನಲ್ಲಿ ಕಟ್ಟಡ ಮಾಲೀಕರ ಸಮಸ್ಯೆಯಿಂದಾಗಿಯೇ 125 ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ. ಹಾಗೆಯೇ ಕಾರ್ಮಿಕರ ಆಧಾರ್ ಕಾರ್ಡ್ ಮಾಹಿತಿ ಪಡೆದಿಟ್ಟುಕೊಂಡಿರಬೇಕು. ಕಾರ್ಮಿಕರ ನಡವಳಿಕೆ ಮೇಲೆ ನಿಗಾ ಇಟ್ಟಿರಬೇಕು ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಸಲಹೆ ನೀಡಿದರು.
ಚಿಂತನೆಗಳು ಕಾರ್ಯರೂಪಕ್ಕೆ ಬರಲಿ: ಎನ್.ಗೋಪಿನಾಥ್
ಹಲವು ವರ್ಷಗಳ ಹಿಂದೆ ನಮ್ಮ ತಂದೆ-ಚಿಕ್ಕಪ್ಪ ಹನ್ನೆರಡನೇ ವಯಸ್ಸಿಗೆ ಹೋಟೆಲ್ ಕೆಲಸ ಪ್ರಾರಂಭ ಮಾಡಿದ್ದರು. ಆಗ ಬಾಲ ಕಾರ್ಮಿಕ ಕಾಯ್ದೆ ಇರಲಿಲ್ಲ, ಈಗ ಆ ಕಾಯ್ದೆಯನ್ನು ಪಾಲಿಸಬೇಕು ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿವಮೊಗ್ಗ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎನ್. ಗೋಪಿನಾಥ್, ಪ್ರವಾಸೋದ್ಯಮ ಬೆಳವಣಿಗೆ ಕುರಿತ ಚಿಂತನೆಗಳು ಬರೀ ಮಾತುಗಳಾಗಿ ಉಳಿಯದೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸಿದರು. ಎಲ್ಲ ರೀತಿಯಿಂದಲೂ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ಹೋಟೆಲುಗಳ ಸಂಘ(ಬಿಹೆಚ್‌ಎ)ದ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಬಿಎಚ್‌ಎ ಗೌರವ ಕಾರ್ಯದರ್ಶಿ ಎನ್.ವೀರೇಂದ್ರ ಕಾಮತ್ ತಮ್ಮ ವಿಚಾರಗಳನ್ನು ಮಂಡಿಸಿದರು.
ಹೋಟೆಲ್ ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಶಂಕರನಾರಾಯಣ ಹೊಳ್ಳ, ಕುವೆಂಪು ವಿಶ್ವವಿದ್ಯಾಲಯದ ಉಪನ್ಯಾಸಕ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮೀದೇವಿ ಗೋಪಿನಾಥ್ ಕಾರ್ಯಕ್ರಮ ನಿರೂಪಿಸಿದರು.
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ