ನವದೆಹಲಿ: ಯಾವುದೇ ಒಂದು ಆಹಾರೋದ್ಯಮ ಆರಂಭಿಸಬೇಕೆಂದರೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ)ದಿಂದ ಪರವಾನಗಿ ಪಡೆಯಬೇಕಾಗಿರುವುದು ಕಡ್ಡಾಯ. ಹಾಗೆಯೇ ಆಹಾರೋದ್ಯಮದ ಮುಂದುವರಿಕೆಗೆ ಕಾಲಾನುಸಾರ ಆ ಪರವಾನಗಿಯ ನವೀಕರಣ ಕೂಡ ಕಡ್ಡಾಯ. ಆದರೆ ಇದೀಗ ಆಹಾರೋದ್ಯಮವನ್ನು ನಿಲ್ಲಿಸಿದರೂ ಅದನ್ನು ಪ್ರಾಧಿಕಾರದ ಗಮನಕ್ಕೆ ತರುವುದು ಕಡ್ಡಾಯ.
ಏಕೆಂದರೆ ಎಫ್‌ಎಸ್‌ಎಸ್‌ಎಐ ಈ ನಿಟ್ಟಿನಲ್ಲಿ ನಿಯಮವೊಂದನ್ನು ಕಡ್ಡಾಯಗೊಳಿಸಿದೆ. ಅಂದರೆ ಯಾವುದೇ ಆಹಾರೋದ್ಯಮಿಗಳು ಅರ್ಥಾತ್ ಆಹಾರ ವ್ಯವಹಾರ ನಿರ್ವಾಹಕರು(ಎಫ್‌ಬಿಒ) ತಮ್ಮ ಉದ್ಯಮವನ್ನು ಸ್ಥಗಿತಗೊಳಿಸಿದ್ದರೆ ಮುಕ್ತಾಯ ವರದಿ ಸಲ್ಲಿಸಬೇಕಾಗಿದೆ. ಆಹಾರೋದ್ಯಮಿಗಳು 2024-25ನೇ ಆರ್ಥಿಕ ವರ್ಷದಲ್ಲಿ ತಮ್ಮ ಉದ್ಯಮವನ್ನು ಸ್ಥಗಿತಗೊಳಿಸಿದ್ದರೆ ಆ ಕುರಿತು ಮುಕ್ತಾಯ ವರದಿ ಸಲ್ಲಿಸುವುದು ಈ ಹೊಸ ನಿಯಮದ ಪ್ರಕಾರ ಕಡ್ಡಾಯವಾಗಿದೆ.
ಅಂದರೆ ಪರವಾನಗಿ/ನೋಂದಣಿಯ ಅವಧಿ ಮುಗಿದಿದ್ದರೆ, ಸಂಬಂಧಿತ ಆಹಾರ ವ್ಯವಹಾರವನ್ನು ಆ ಸ್ಥಳದಲ್ಲಿ ನಡೆಸಲಾಗುತ್ತಿಲ್ಲ ಎಂದು ಆಹಾರೋದ್ಯಮಿಗಳು ದೃಢೀಕರಿಸಬೇಕು. ಪರವಾನಗಿಯನ್ನು ನವೀಕರಿಸಿದ್ದರೆ ಅಥವಾ ಹೊಸ ಪರವಾನಗಿ ಪಡೆದಿದ್ದರೆ ಅದನ್ನು ದಾಖಲಿಸಬೇಕು, ಇಲ್ಲವಾದರೆ ನವೀಕರಣ ಮಾಡದಿರಲು ಕಾರಣಗಳನ್ನು ನೀಡಬೇಕು ಎಂಬುದನ್ನು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
ಎಫ್‌ಎಸ್‌ಎಸ್‌ಎಐ ಆದೇಶದ ಪ್ರಕಾರ, ಮುಕ್ತಾಯ ವರದಿ ಮತ್ತು ಇತರ ಸಲ್ಲಿಕೆಗಳನ್ನು ಆಹಾರ ಸುರಕ್ಷತಾ ಅನುಸರಣೆ ವ್ಯವಸ್ಥೆ (FoSCoS) ಪೋರ್ಟಲ್ ಮೂಲಕ ಸಲ್ಲಿಸಬೇಕು. ಮುಕ್ತಾಯಗೊಂಡ ಅಥವಾ ಅವಧಿಮೀರಿದ ಎಫ್‌ಎಸ್‌ಎಸ್‌ಎಐ ಪರವಾನಗಿ/ನೋಂದಣಿ ಬಳಸಿ ಆಹಾರ ವ್ಯವಹಾರ ನಡೆಸುವುದು 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್ 31ರ ಉಲ್ಲಂಘನೆಯಾಗಿದ್ದು, ಸೆಕ್ಷನ್ 63ರ ಅಡಿಯಲ್ಲಿ ಗರಿಷ್ಠ 10 ಲಕ್ಷ ರೂ.ವರೆಗಿನ ದಂಡಕ್ಕೆ ಒಳಪಡುತ್ತದೆ ಎಂದೂ ಪ್ರಾಧಿಕಾರ ತಿಳಿಸಿದೆ.
ಪರವಾನಗಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜಾಡಿನ ಸಾಧ್ಯತೆಯನ್ನು ಖಚಿತಪಡಿಸಲು ಈ ಮುಕ್ತಾಯ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಆಹಾರೋದ್ಯಮಿಗಳು ತಮ್ಮ ಇಮೇಲ್ ವಿಳಾಸಗಳನ್ನು FoSCoS ಪೋರ್ಟಲ್‌ನಲ್ಲಿ ನವೀಕರಿಸಿಡಬೇಕೆಂದೂ ಸೂಚಿಸಲಾಗಿದೆ. ಇದರಿಂದ, ಪರವಾನಗಿ/ನೋಂದಣಿ ಮುಕ್ತಾಯದ ಬಗ್ಗೆ ‘ಆಹಾರ ವ್ಯವಹಾರ ಮುಕ್ತಾಯದ ಸೂಚನೆ’ ತಕ್ಷಣವೇ ಪಡೆದುಕೊಳ್ಳುವಂತೆ ಸಂಬಂಧಿತ ಆಹಾರೋದ್ಯಮಿಗಳಿಗೆ ತಿಳಿಸಲು ಅನುಕೂಲವಾಗಲಿದೆ ಎಂದು ಪ್ರಾಧಿಕಾರ ಹೇಳಿದೆ.
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



