ಒಳಗೇನಿದೆ!?

ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ನವದೆಹಲಿ: ಬಹುತೇಕ ಎಲ್ಲರಿಗೂ ಆದಷ್ಟೂ ಜಾಸ್ತಿ ದಿನ ಬದುಕಬೇಕು ಎಂಬ ಆಸೆ ಇರುತ್ತದೆ. ಸಾವು ತಡವಾಗಿಯೇ ಬರಲಿ ಎನ್ನುವುದು ಸಾಮಾನ್ಯವಾಗಿ ಎಲ್ಲರ ಆಸೆಯೂ ಆಗಿರುತ್ತದೆ. ಇದು ಅಂಥವರಿಗೆ ಖುಷಿ ಕೊಡಬಹುದಾದ ಸುದ್ದಿ. ಏಕೆಂದರೆ ಸಾಯುವ ಸಾಧ್ಯತೆಯನ್ನು ತಗ್ಗಿಸಬಹುದಾದ ಮಾಹಿತಿ ಹೊರಬಿದ್ದಿದೆ.

ದೈನಂದಿನ ಅಭ್ಯಾಸವೊಂದರ ಮೂಲಕ ಸಾವನ್ನು ಒಂದಷ್ಟು ಮುಂದೂಡಲು ಸಾಧ್ಯ ಎನ್ನುವುದು ಅಧ್ಯಯನವೊಂದರಿಂದ ಬಹಿರಂಗವಾಗಿದೆ. ʼದಿ ಜರ್ನಲ್‌ʼನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದೆ. ಕಾಫಿಗೆ ಸಾವನ್ನೂ ಮುಂದೂಡುವ ಶಕ್ತಿ ಇದೆ ಎಂಬುದಾಗಿ ಈ ಅಧ್ಯಯನ ತಿಳಿಸಿದೆ.

ಪ್ರತಿದಿನ ಒಂದೆರಡು ಕಪ್‌ ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಸಾವಿನ ಸಂಭವವನ್ನು ಶೇ. 14ರಷ್ಟು ಕಡಿಮೆ ಮಾಡಬಹುದು, ಆದರೆ ಹಾಲು ಅಥವಾ ಸಕ್ಕರೆ ಸೇರಿಸಿದರೆ ಈ ಪ್ರಯೋಜನ ಕಡಿಮೆ ಆಗಬಹುದು ಎಂದು ಈ ಅಧ್ಯಯನ ತಿಳಿಸಿದೆ.

ಕಾಫಿಯ ಆರೋಗ್ಯ ಪ್ರಯೋಜನಗಳು ಅದರ ಜೈವಿಕ ಸಕ್ರಿಯ ಸಂಯುಕ್ತಗಳಿಂದ ಕೂಡಿರಬಹುದು, ಆದರೆ ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್‌ ಸೇರಿಸುವುದರಿಂದ ಸಾವಿನ ತಗ್ಗಿಸುವಿಕೆಯ ಪ್ರಯೋಜನ ಕಡಿಮೆ ಆಗಬಹುದು ಎಂದು ಅಮೆರಿಕಾದ ಟಫ್ಟ್ಸ್ ವಿಶ್ವವಿದ್ಯಾಲಯದ ಸಂಶೋಧಕಿ ಮತ್ತು ಈ ಅಧ್ಯಯನದ ಹಿರಿಯ ಲೇಖಕಿ ಫಾಂಗ್ ಫಾಂಗ್ ಝಾಂಗ್ ತಿಳಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕತೆ ಪರೀಕ್ಷೆ ಸಮೀಕ್ಷೆ (NHANES) ಡೇಟಾವನ್ನು 1999ರಿಂದ 2018ರವರೆಗಿನ ಒಂಬತ್ತು ಸತತ ಚಕ್ರಗಳ ರಾಷ್ಟ್ರೀಯ ಸಾವಿನ ದತ್ತಾಂಶದ ಜೊತೆ ಸಂಯೋಜಿಸಿ ವಿಶ್ಲೇಷಿಸಲಾಗಿದೆ. ಇದಕ್ಕಾಗಿ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 46 ಸಾವಿರಕ್ಕೂ ಹೆಚ್ಚು ವಯಸ್ಕರ ಒಂದು ದಿನದ 24 ಗಂಟೆಗಳ ಆಹಾರ ಪಕ್ರಿಯೆ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಲಾಗಿದೆ.

ಕಾಫಿ ಸೇವನೆಯನ್ನು ಕೆಫೀನ್‌ಯುಕ್ತ ಅಥವಾ ಕೆಫೀನ್‌-ಮುಕ್ತ, ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್‌ನ ಪ್ರಮಾಣದ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಅಲ್ಲದೆ ಯಾವುದೇ ರೀತಿಯ ಕ್ಯಾನ್ಸರ್ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಂದಾದ ಸಾವಿನ ಫಲಿತಾಂಶಗಳನ್ನೂ ಸೇರಿಸಿ  ಅಧ್ಯಯನ ಮಾಡಲಾಗಿದೆ.

ಕಾಫಿ ಸೇವನೆ ಮತ್ತು ಸಾವಿನ ಸಂಭವದ ನಡುವಿನ ಸಂಬಂಧ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಶೀಲಿಸಿದ ಕೆಲವೇ ಅಧ್ಯಯನಗಳಿವೆ. ಹಾಗೇ ಎಷ್ಟು ಸಿಹಿಕಾರಕ ಮತ್ತು ಸ್ಯಾಚುರೇಟೆಡ್ ಫ್ಯಾಟ್‌ ಸೇರಿಸಲಾಗುತ್ತಿದೆ ಎಂಬುದನ್ನು ಪ್ರಮಾಣೀಕರಿಸಿದ ಮೊದಲ ಅಧ್ಯಯನಗಳಲ್ಲಿ ನಮ್ಮದೂ ಒಂದಾಗಿದೆ ಎಂದು ಟಫ್ಟ್ಸ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವೀಧರ ಬಿಂಗ್‌ಜೀ ಝೌ ಹೇಳಿದ್ದಾರೆ.

ಬ್ಲ್ಯಾಕ್‌ ಕಾಫಿ ಮತ್ತು ಕಡಿಮೆ ಸಕ್ಕರೆ ಹಾಗೂ ಸ್ಯಾಚುರೇಟೆಡ್ ಫ್ಯಾಟ್‌ ಇರುವ ಕಾಫಿ ಸೇವಿಸುವವರಲ್ಲಿ, ಕಾಫಿ ಕುಡಿಯದವರಿಗೆ ಹೋಲಿಸಿದರೆ ಎಲ್ಲ ಕಾರಣಗಳಿಂದ ಸಾವಿನ ಸಂಭವ ಶೇ. 14 ರಷ್ಟು ಕಡಿಮೆ ಎಂದು ಲೇಖಕರು ಬರೆದಿದ್ದಾರೆ.

ದಿನಕ್ಕೆ ಎರಡರಿಂದ ಮೂರು ಕಪ್‌ ಕಾಫಿ ಸೇವಿಸುವುದರಿಂದ ಯಾವುದೇ ಕಾರಣದಿಂದ ಸಾವಿನ ಸಂಭವವನ್ನು ಶೇ.17ರಷ್ಟು ಕಡಿಮೆ ಮಾಡಬಹುದು. ಆದರೆ ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್‌ ಕುಡಿಯುವುದರಿಂದ ಹೆಚ್ಚುವರಿ ಕಡಿತವಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಲ್ಲದೆ, ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್‌ ಕಾಫಿ ಕುಡಿದರೆ ಹೃದಯರಕ್ತನಾಳದ ಕಾಯಿಲೆಯಿಂದ ಸಾವಿನ ಸಂಭವ ಕಡಿಮೆಯಾಗುವ ಸಂಬಂಧವು ದುರ್ಬಲವಾಗುತ್ತದೆ ಎಂದೂ ಅವರು ಸೇರಿಸಿದ್ದಾರೆ.

ಇದೂ ಓದಿ: ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!

ಇದೂ ಓದಿ: ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಇದೂ ಓದಿ: ಇನ್ನು ಅಕ್ಕಪಕ್ಕಗಳಲ್ಲೇ ಕಾಣಿಸಲಿದೆ ʼಅಕ್ಕ ಕೆಫೆʼ, ʼಕಾಫಿ ಕಿಯೋಸ್ಕ್‌ʼ; ಮೊದಲ ʼಅಕ್ಕ ಕೆಫೆʼ ಉದ್ಘಾಟನೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ