ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಗೂಡ್ಸ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್-ಜಿಎಸ್ಟಿ) ಜಾರಿಗೆ ಬಂದು ಎಂಟು ವರ್ಷಗಳಾಗಿದ್ದು, ಇದೀಗ ಇದೇ ಮೊದಲ ಸಲ ಇದರಲ್ಲಿ ಹಲವು ಬದಲಾವಣೆಗಳಾಗುವುದು ನಿಚ್ಚಳವಾಗಿದೆ. ಇದು 2017ರಲ್ಲಿ ಜಾರಿಗೆ ಬಂದಿದ್ದು, ಈಗ ಪ್ರಮುಖ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದಕ್ಕೆ ಪ್ರಧಾನ ಮಂತ್ರಿಯವರ ಕಚೇರಿಯಿಂದಲೂ ಹಸಿರುನಿಶಾನೆ ಸಿಕ್ಕಿದೆ.
ಜಿಎಸ್ಟಿಯಲ್ಲಿ ತರಲು ಉದ್ದೇಶಿಸಿರುವ ಬದಲಾವಣೆಗಳಲ್ಲಿ ಸ್ಲ್ಯಾಬ್ಗಳ ಮರುವಿಂಗಡಣೆ, ಶೇ. 12ರ ಸ್ಲ್ಯಾಬ್ ರದ್ದು ಹಾಗೂ ಅದರಲ್ಲಿರುವ ವಸ್ತುಗಳನ್ನು ಇತರ ಸ್ಲ್ಯಾಬ್ಗಳಿಗೆ ವರ್ಗಾಯಿಸುವುದು ಮುಂತಾದ ಉಪಕ್ರಮಗಳು ಇರಲಿವೆ. ಜಿಎಸ್ಟಿ ವ್ಯವಸ್ಥೆಯಲ್ಲಿನ ಈ ಗಣನೀಯ ಬದಲಾವಣೆಗೆ ಪ್ರಧಾನಮಂತ್ರಿ ಕಚೇರಿ (ಪಿಎಂಒ) ತಾತ್ವಿಕ ಅನುಮೋದನೆ ನೀಡಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದ ನಂತರ ಅಂದರೆ ಆಗಸ್ಟ್ನಲ್ಲಿ ನಡೆಯುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಹೊಸ ಬದಲಾವಣೆಗಳ ಪ್ರಸ್ತಾವನೆ ಮಂಡನೆ ಆಗಲಿದೆ ಎನ್ನಲಾಗಿದೆ.
ಇದೂ ಓದಿ: ಬೇಕರಿ-ಕಾಂಡಿಮೆಂಟ್ಸ್ ತೆರಿಗೆ ವಿಚಾರ ಪರಿಹಾರಕ್ಕಾಗಿ ಸಿಎಂ ಮಧ್ಯಪ್ರವೇಶಿಸಬೇಕೆಂದು ಕಾರ್ಮಿಕ ಪರಿಷತ್ ಮನವಿ
ಸರಕು ಮತ್ತು ಸೇವಾ ತೆರಿಗೆಯಲ್ಲಿ ಪ್ರಸ್ತುತ ಶೇ. 0, 5, 12, 18, 28 ಎಂಬ ಐದು ತೆರಿಗೆ ದರಗಳಿವೆ. ಬೆಲೆ ಬಾಳುವ ಲೋಹಗಳಿಗೆ ಶೇ. 0.25 ಮತ್ತು ಶೇ. 3ರ ವಿಶೇಷ ದರಗಳಿವೆ. ಶೇ. 5ರ ಸ್ಲ್ಯಾಬ್ನಲ್ಲಿ ಶೇ. 21ರಷ್ಟು ವಸ್ತುಗಳು, ಶೇ. 12ರ ಸ್ಲ್ಯಾಬ್ನಲ್ಲಿ ಶೇ. 44ರಷ್ಟು ವಸ್ತುಗಳು ಹಾಗೂ ಶೇ. 28ರ ಸ್ಲ್ಯಾಬ್ನಲ್ಲಿ ಕೇವಲ ಶೇ. 3ರಷ್ಟು ವಸ್ತುಗಳು ಇವೆ.
ಈ ಚೊಚ್ಚಲ ಬದಲಾವಣೆಯಲ್ಲಿ ಶೇ.12ರ ಸ್ಲ್ಯಾಬ್ ತೆಗೆದು ಅದರಲ್ಲಿನ ವಸ್ತುಗಳನ್ನು ಶೇ. 5 ಮತ್ತು ಶೇ. 18ರ ಸ್ಲ್ಯಾಬ್ಗಳಿಗೆ ಸೇರಿಸುವಂಥ ಮರುವಿಂಗಡಣೆ ಮಾಡುವ ಚಿಂತನೆ ನಡೆದಿದೆ. ಆಟೋಮೊಬೈಲ್ನಂಥ ಐಷಾರಾಮಿ, ಸಿಗರೇಟ್ನಂಥ ಹಾನಿಕಾರಕ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ ರೂಪದಲ್ಲಿ ಶೇ. 28ರ ಸ್ಲ್ಯಾಬ್ನಲ್ಲಿ ಕಾಂಪೆನ್ಸೇಷನ್ ಸೆಸ್ 2026ರ ಮಾರ್ಚ್ 31ರವರೆಗೆ ಅನ್ವಯಿಸುತ್ತದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಅಂದಹಾಗೆ, ಜಿಎಸ್ಟಿ ಸುಧಾರಣೆ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರುವ ಮುನ್ನ ಕೇಂದ್ರ ಸರ್ಕಾರವು ರಾಜಕೀಯ ಒಮ್ಮತಕ್ಕಾಗಿ ರಾಜ್ಯಗಳ ಜತೆ ಚರ್ಚೆ ನಡೆಸಲಿದೆ. ಅಲ್ಲದೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜೊತೆ ಆಂತರಿಕ ಸಮಾಲೋಚನೆ ಈಗಾಗಲೇ ಪ್ರಾರಂಭವಾಗಿದೆ.
ಮತ್ತೊಂದೆಡೆ ಆದಾಯ ತೆರಿಗೆ ಕಾಯ್ದೆಯ ಸುಧಾರಣೆಗೂ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಮುಂಗಾರು ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸುವ ನಿರೀಕ್ಷೆಯೂ ಇದೆ.
ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ರಜತಗಿರಿ ಪ್ಯಾಲೇಸ್ನಲ್ಲಿ ವಾರಪೂರ್ತಿ ಹಲಸಿನ ಖಾದ್ಯ ಮೇಳ; ಇಲ್ಲಿದೆ ಪೂರ್ತಿ ವಿವರ..
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



