ಬೆಂಗಳೂರು: ವಾರ್ಷಿಕ ಮಿತಿಗೂ ಮೀರಿ ವಹಿವಾಟು ನಡೆಸಿದ ಹಿನ್ನೆಲೆಯಲ್ಲಿ ಜಿಎಸ್‌ಟಿ ಕಟ್ಟುವಂತೆ ನೋಟಿಸ್ ಎದುರಿಸುತ್ತಿರುವ ಹಲವಾರು ಸಣ್ಣ ಉದ್ದಿಮೆದಾರರು ಇದೀಗ ಯುಪಿಐ ಮೂಲಕ ಹಣ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದು, ಅಂಗಡಿಗಳಲ್ಲಿನ ಕ್ಯೂಆರ್ ಕೋಡ್ ಕೂಡ ತೆಗೆದುಹಾಕುತ್ತಿದ್ದಾರೆ. ಇನ್ನು ಕೆಲವರು ಯುಪಿಐ ವಹಿವಾಟು ನಿಲ್ಲಿಸಿಬಿಟ್ಟರೆ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಬಹುದೇನೋ ಎಂಬ ಲೆಕ್ಕಚಾರದಲ್ಲಿದ್ದಾರೆ.
ತೆರಿಗೆ ಪಾವತಿ ಸಂಬಂಧ ನೋಟಿಸ್ ಜಾರಿಯಾದ್ದರಿಂದ ಉಂಟಾಗಿರುವ ಸಮಸ್ಯೆ ಹಾಗೂ ಗೊಂದಲಗಳ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಅಪರ ಆಯುಕ್ತ ಚಂದ್ರಶೇಖರ್ ನಾಯಕ್ ಸ್ಪಷ್ಟನೆ ನೀಡಿದ್ದು, ಆ ಮೂಲಕ ಸಾಕಷ್ಟು ವಿಷಯಗಳನ್ನು ಮನವರಿಕೆ ಮಾಡಲು ಮುಂದಾಗಿದ್ದಾರೆ.
ಇಲಾಖೆ ನೋಟಿಸ್ ನೀಡಿದ ಬೆನ್ನಲ್ಲೇ ಕೆಲವು ವರ್ತಕರು ಯುಪಿಐ ಮೂಲಕ ಹಣಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ನಗದು, ಯುಪಿಐ, ಪಿಒಎಸ್ ಮೆಷಿನ್, ಬ್ಯಾಂಕ್ ಖಾತೆ ಇತರ ಯಾವುದೇ ವಿಧಾನಗಳಿಂದ ಆರ್ಥಿಕ ವರ್ಷದಲ್ಲಿ 40 ಲಕ್ಷ ರೂ. ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರೂ. ಮೀರಿದರೆ ಅಂತಹ ವರ್ತಕರು ಜಿಎಸ್‌ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಮಾತ್ರವಲ್ಲದೆ, ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ನಗದು ರೂಪದಲ್ಲಿ ಹಣ ಸ್ವೀಕರಿಸಿದರೂ ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತದೆ. ಅಂಥ ವರ್ತಕರಿಂದ ಜಿಎಸ್‌ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆ ಸಂಗ್ರಹಿಸಲು ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಅವರು ಮತ್ತೊಮ್ಮೆ ಖಚಿತಪಡಿಸಿದ್ದಾರೆ.
ಇದೂ ಓದಿ: ರಜತಗಿರಿ ಪ್ಯಾಲೇಸ್‌ನಲ್ಲಿ ವಾರಪೂರ್ತಿ ಹಲಸಿನ ಖಾದ್ಯ ಮೇಳ; ಇಲ್ಲಿದೆ ಪೂರ್ತಿ ವಿವರ..
ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳು ಸೇರಿರುತ್ತವೆ. ವರ್ತಕರು ಜಿಎಸ್‌ಟಿ ಅಡಿಯಲ್ಲಿ ಸಾಮಾನ್ಯ ನೋಂದಣಿ ಪಡೆದಿದ್ದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲೆ ಹೂಡುವಳಿ ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ನಿವ್ವಳ ತೆರಿಗೆ ಪಾವತಿಸಬೇಕಾಗಿರುತ್ತದೆ. ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ ಎಂದು ವಿವರಿಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿರುತ್ತಾರೆ. ಈಗಾಗಲೇ ವಾರ್ಷಿಕ ವಹಿವಾಟು ಸರಕು ಪೂರೈಕೆಯಲ್ಲಿ 40 ಲಕ್ಷ ರೂಪಾಯಿ, ಸೇವೆಗಳ ಪೂರೈಕೆಯಲ್ಲಿ 20 ಲಕ್ಷ ರೂಪಾಯಿ ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ನೋಂದಾಯಿತ ವರ್ತಕರು ಇನ್ನು ಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ.1 ರಂತೆ ತೆರಿಗೆ ಪಾವತಿಸುವುದು ಕಷ್ಟವಾಗಲಾರದು. ಈಗಾಗಲೇ ಶೇ. 90 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿದ ಶೇ.10 ವರ್ತಕರು ತೆರಿಗೆ ಪಾವತಿಸದಿರುವುದು ಸಮಂಜಸವಲ್ಲ. ಜಿಎಸ್‌ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಏನಿದು ರಾಜಿ ತೆರಿಗೆ ಪದ್ಧತಿ?
ವ್ಯಾಪಾರಿಯ ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಿಂತ ಕಡಿಮೆ ಇದ್ದಲ್ಲಿ ಜಿಎಸ್‌ಟಿಯಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡು ವಹಿವಾಟಿನ ಮೇಲೆ ಶೇ. 0.5 ಎಸ್‌ಜಿಎಸ್‌ಟಿ ಮತ್ತು ಶೇ 0.5 ಸಿಜಿಎಸ್‌ಟಿ ತೆರಿಗೆ ಪಾವತಿಸಬಹುದು. ಆದರೆ, ನೋಂದಣಿ ಪಡೆಯದೇ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ.
ಇದೂ ಓದಿ: ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕಳ್ಳನ ಗೆಸ್ಟ್ ಅಪಿಯರೆನ್ಸ್; ಉಂಡೂ ಹೋದ, ಕದ್ಕೊಂಡೂ ಹೋದ..
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



