ಒಳಗೇನಿದೆ!?

ಹೋಟೆಲ್ ಉದ್ಯಮಕ್ಕೆ ಮತ್ತೆ ಭಾರಿ ಸಂಕಷ್ಟ: ಕಾರ್ಮಿಕರ ಭವಿಷ್ಯಕ್ಕೂ ಕುತ್ತು.‌.

ಹೋಟೆಲ್ ಕನ್ನಡ, ಬೆಂಗಳೂರು: ಇಂದು ಬುದ್ಧ ಪೂರ್ಣಿಮೆ ಹಾಗೂ ಕಾರ್ಮಿಕರ ದಿನ. ಆದರೆ ಕಾಕತಾಳೀಯ ಎಂಬಂತೆ ಇಂದಿನ ಒಂದು ವಿದ್ಯಮಾನ ಹೋಟೆಲ್ ನಡೆಸಬೇಕೆಂದು ಆಸೆ ಇಟ್ಟುಕೊಳ್ಳುವುದೇ ದುಃಖಕ್ಕೆ ಮೂಲ ಎಂಬಂತಾಗಿದೆ. ಅಲ್ಲದೆ, ಜೀವನೋಪಾಯಕ್ಕಾಗಿ ಹೋಟೆಲ್‌ಗಳನ್ನು ಅವಲಂಬಿಸಿರುವ ಕಾರ್ಮಿಕರ ಭವಿಷ್ಯಕ್ಕೂ ಈ ಕಾರ್ಮಿಕರ ದಿನದಿಂದೇ ಆತಂಕವೊಂದು ಎದುರಾಗಿದೆ.

ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಬೆಲೆ ಏಕಾಏಕಿ ಭಾರಿ ಏರಿಕೆ ಆಗಿರುವುದೇ ಈ ಸಂಕಷ್ಟಕ್ಕೆ ಮೂಲ ಕಾರಣವಾಗಿದೆ. ದೇಶದ ಹಲವೆಡೆ ಸನ್ ಸ್ಟ್ರೋಕ್ ಬಾಧಿಸುತ್ತಿರುವುದರ ಜೊತೆಗೆ ಈ ಬೆಲೆ ಏರಿಕೆಯಿಂದ ಇದೀಗ ಗ್ಯಾಸ್ ಸ್ಟ್ರೋಕ್ ಕೂಡ ಬಾಧಿಸುವಂತಾಗಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಪ್ರತಿ ತಿಂಗಳ ಮೊದಲನೇ ದಿನ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಪರಿಷ್ಕೃತ ಬೆಲೆ ಪ್ರಕಟವಾಗುತ್ತದೆ. ಹಾಗೇ ಮೇ 1ರಂದು ಪ್ರಕಟವಾಗಿರುವ ಪರಿಷ್ಕೃತ ದರ ಬರೀ ಬೆಲೆ ಏರಿಕೆಯಾಗಿಯಷ್ಟೇ ಉಳಿಯದೆ ಹೋಟೆಲ್ ಉದ್ಯಮಿಗಳು ಮತ್ತು ಕಾರ್ಮಿಕರ ಪಾಲಿಗೆ ಬಿರುಬಿಸಿಲಿನ ಈ ಬೇಸಿಗೆಯಲ್ಲೂ ಬರಸಿಡಿಲಾಗಿ ಎರಗಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

‘ವಾಣಿಜ್ಯ ಬಳಕೆಯ, 19 ಕೆ.ಜಿ. ಅಡುಗೆ ಅನಿಲ ಸಿಲಿಂಡರ್‌ವೊಂದರ ಬೆಲೆ ಏಪ್ರಿಲ್‌ನಲ್ಲಿ 2,161 ರೂಪಾಯಿ ಇದ್ದಿದ್ದು, ಮೇ 1ರ ಪರಿಷ್ಕೃತ ದರದಲ್ಲಿ ಅದರ ಬೆಲೆ ಏಕಾಏಕಿ 991 ರೂ. ಏರಿಕೆ ಆಗಿ, 3,152 ರೂಪಾಯಿಗೆ ತಲುಪಿದೆ. ನಾವು ಇದುವರೆಗೂ ಒಂದೇ ಸಲ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದ್ದನ್ನು ಕಂಡಿಲ್ಲ’ ಎಂದು ಹೋಟೆಲ್ ಉದ್ಯಮಿಗಳನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

‘ಮಧ್ಯಪ್ರಾಚ್ಯದ ಪ್ರಕ್ಷುಬ್ಧತೆ ಹಿನ್ನೆಲೆಯಲ್ಲಿ ಎದುರಾಗಿದ್ದ ಅಡುಗೆ ಅನಿಲ ಬಿಕ್ಕಟ್ಟಿನಿಂದಾಗಿ ಈಗಾಗಲೇ ನಾನಾ ರೀತಿಯಲ್ಲಿ ಸಂಕಷ್ಟ ಅನುಭವಿಸಿರುವ ಹೋಟೆಲ್ ಉದ್ಯಮಿಗಳಿಗೆ ಈ ಭಾರಿ ಪ್ರಮಾಣದ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಯಾವತ್ತೂ ಹೀಗಾಗಿಲ್ಲ..

ಈಗ ಒಂದೇ ಬಾರಿಗೆ ಗ್ಯಾಸ್ ಸಿಲಿಂಡರ್ ಬೆಲೆ 991 ರೂ. ಏರಿಕೆ ಆಗಿದ್ದು, ಹೋಟೆಲೋದ್ಯಮದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬೆಲೆ ಏರಿಕೆ ಯಾವತ್ತೂ ಆಗಿರಲಿಲ್ಲ. ಸಾಮಾನ್ಯವಾಗಿ ತಿಂಗಳಿಗೆ 50, 100, 150, 200ರ ಹಾಗೆ ಏರುತ್ತಿದ್ದ ಬೆಲೆ ಈ ಸಲ ಹೆಚ್ಚೂಕಡಿಮೆ 1,000 ರೂ. ಏರಿಕೆ ಆಗಿದೆ. ಮಾರ್ಚ್‌ನಲ್ಲಿ 1,804 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಈಗ 3,152 ರೂ. ಆಗಿದೆ. ಅಂದರೆ ಕಳೆದ 60 ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಬರೋಬ್ಬರಿ 1,348 ರೂ. ಏರಿಕೆ ಆಗಿದೆ ಎಂದು ಪಿ.ಸಿ. ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಸರ್ಕಾರಿ ಆದೇಶದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರು ಹೋಟೆಲುಗಳ ಸಂಘ

ಚುನಾವಣೆ ಮುಗಿದ ತಕ್ಷಣವೇ ಕೇಂದ್ರ ಸರ್ಕಾರ ಈ ರೀತಿ ಭಾರಿ ಪ್ರಮಾಣದ ದರ ಏರಿಕೆ ಮಾಡಿರುವುದು ಅತ್ಯಂತ ಬೇಸರದ ಸಂಗತಿ. ಹೋಟೆಲ್ ಕ್ಷೇತ್ರ ಅಗತ್ಯ ಸೇವೆಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ದರ ಏರಿಕೆ ಭಾರಿ ಹೊಡೆತ ನೀಡುತ್ತಿದೆ. ಸರ್ಕಾರ ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳದಿದ್ದರೆ ತಿಂಡಿ-ತಿನಿಸು, ಕಾಫೀ-ಟೀ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗುತ್ತದೆ.
| ಪಿ.ಸಿ. ರಾವ್, ಗೌರವಾಧ್ಯಕ್ಷ, ಬೆಂಗಳೂರು ಹೋಟೆಲುಗಳ ಸಂಘ

ಈಗಾಗಲೇ ನೊಂದು ಬೆಂದಿರುವ ಹೋಟೆಲ್ ಉದ್ಯಮಿಗಳಿಗೆ ಗ್ಯಾಸ್ ಸಿಲಿಂಡರ್ ಮೇಲಿನ ಈ ಭಾರಿ ದರ ಏರಿಕೆ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೋಟೆಲ್‌ಗಳವರು ತೀರಾ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಕ್ಷಣ ಇಳಿಸದಿದ್ದರೆ ಹೋಟೆಲೋದ್ಯಮಿಗಳು ಮತ್ತು ಕಾರ್ಮಿಕರ ಬದುಕು ದುಸ್ತರವಾಗುತ್ತದೆ. ಕೆಲವರು ಹೋಟೆಲ್‌ಗಳನ್ನು ಮುಚ್ಚಬೇಕಾದ ದುಸ್ಥಿತಿ ಎದುರಾಗುತ್ತದೆ. ಸರ್ಕಾರ ಇಂಥದ್ದಕ್ಕೆ ಆಸ್ಪದ ನೀಡಬಾರದು ಎಂದಿರುವ ಪಿ.ಸಿ. ರಾವ್, ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ:‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಇದೂ ಓದಿ:‘ತಾಜಾ ತಿಂಡಿ’ಯೂ‌, ಖ್ಯಾತ ಐರಿಷ್‌ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್‌!

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ