ನವದೆಹಲಿ: ಭಾರತೀಯ ರೆಸ್ಟೋರೆಂಟ್ ಕ್ಷೇತ್ರದಲ್ಲಿ ಇನ್ನು ಮೂರೇ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆಯೊಂದರ ಸಾಧ್ಯತೆ ಇದೆ. ಈ ಕುರಿತು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮಾಹಿತಿ ಹಂಚಿಕೊಂಡಿದೆ. ಆದರೆ ಇದಕ್ಕೆ ಸರ್ಕಾರದ ಕ್ರಮಗಳು ಸೇರಿ ಇತರ ಬೆಂಬಲಗಳ ಅಗತ್ಯವೂ ಇದೆ ಎನ್ನುವುದಾಗಿ ಎನ್‌ಆರ್‌ಎಐ ತಿಳಿಸಿದೆ.
ಭಾರತದ ರೆಸ್ಟೋರೆಂಟ್ ವಲಯದಲ್ಲಿ ಪ್ರಸ್ತುತ 85 ಲಕ್ಷ ಉದ್ಯೋಗಿಗಳಿದ್ದಾರೆ. ಹೋಟೆಲ್ ಕ್ಷೇತ್ರಕ್ಕೆ ಸರ್ಕಾರದಿಂದ ಉದ್ಯಮ ಸ್ಥಾನಮಾನ ಸಿಗುವ ಜೊತೆಗೆ ಜಿಎಸ್‌ಟಿಯಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನಂಥ ಬೆಂಬಲ, ಸೇವಾಶುಲ್ಕ ವಿವಾದದ ಸಮಸ್ಯೆ ಪರಿಹಾರ, ಅಗ್ರಿಗೇಟರ್‌ಗಳ ಪೂರಕ ಸಹಕಾರವೂ ಸಿಕ್ಕರೆ ರೆಸ್ಟೋರೆಂಟ್ ಕ್ಷೇತ್ರದ ಉದ್ಯೋಗಿಗಳ ಸಂಖ್ಯೆ 2028ರ ಸುಮಾರಿಗೆ 1.5 ಕೋಟಿಗೆ ತಲುಪಬಲ್ಲದು ಎಂದು ಎನ್‌ಆರ್‌ಎಐ ಉಪಾಧ್ಯಕ್ಷ ಜೊರಾವರ್ ಕಲ್ರಾ ತಿಳಿಸಿದ್ದಾರೆ.
ಸದ್ಯದ 85 ಲಕ್ಷ ಉದ್ಯೋಗಿಗಳ ಸಂಖ್ಯೆಯು 2028ರ ವೇಳೆಗೆ ಒಂದು ಕೋಟಿಗೆ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಮೇಲಿನ ಎಲ್ಲ ಬೇಡಿಕೆಗಳು ಈಡೇರಿದರೆ ಉದ್ಯೋಗಿಗಳ ಸಂಖ್ಯೆ ಒಂದೂವರೆ ಕೋಟಿಗೆ ತಲುಪಬಲ್ಲದು ಎಂದು ದೇಶಾದ್ಯಂತ ಐದು ಲಕ್ಷ ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುವ ಎನ್‌ಆರ್‌ಎಐನ ಉಪಾಧ್ಯಕ್ಷರಾಗಿರುವ ಕಲ್ರಾ ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮ ಸ್ಥಾನಮಾನದ ಬೇಡಿಕೆ
ಪ್ರತ್ಯೇಕ ಉದ್ಯಮ ಸ್ಥಾನಮಾನ ಇಲ್ಲದಿರುವುದು ನಮ್ಮ ಧ್ವನಿಯನ್ನು ಕಸಿದುಕೊಂಡಂತಾಗಿದೆ. ಈ ಸ್ಥಾನಮಾನ ನೀಡಿದರೆ ಉದ್ಯಮಕ್ಕೆ ದೊಡ್ಡ ಒಲವು ಸಿಗಲಿದೆ. ಅಲ್ಲದೆ ಜಿಎಸ್‌ಟಿಯಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ ಕೊರತೆ ಕೂಡ ಪ್ರಮುಖ ಸಮಸ್ಯೆ ಎಂದು ವಿವರಿಸಿರುವ ಅವರು, ಈ ವಿಷಯದಲ್ಲಿ ಸರಿಯಾದ ವೇದಿಕೆಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಸೇವಾ ಶುಲ್ಕ ಪ್ರಕರಣ ಮೇ 9ರಂದು ವಿಚಾರಣೆ
ಆಹಾರ ಬಿಲ್‌ಗಳ ಮೇಲಿನ ಸೇವಾ ಶುಲ್ಕದ ಕಡ್ಡಾಯ ವಿಧಾನವನ್ನು ಪ್ರಶ್ನಿಸುವ ಎನ್‌ಆರ್‌ಎಐ ಸೇರಿದಂತೆ ರೆಸ್ಟೋರೆಂಟ್ ಸಂಸ್ಥೆಗಳ ಅರ್ಜಿಗಳ ವಿಚಾರಣೆಯನ್ನುಮೇ 9ರಂದು ನಡೆಸಲು ದೆಹಲಿ ಹೈಕೋರ್ಟ್ ನಿಗದಿಪಡಿಸಿದೆ. ಈ ವಿಷಯ ನ್ಯಾಯಾಲಯದ ವಿಚಾರಣೆಯಲ್ಲಿ ಇರುವುದರಿಂದ ಆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕಲ್ರಾ, ಸೇವಾ ಶುಲ್ಕವು ಜಾಗತಿಕವಾಗಿ ಸ್ವೀಕೃತ ಮತ್ತು ಐಚ್ಛಿಕ ಎಂದು ಸಮರ್ಥಿಸಿಕೊಂಡಿದ್ದಾರೆ. ಗ್ರಾಹಕರು ಸೇವೆ ಬಗ್ಗೆ ಅತೃಪ್ತರಾಗಿದ್ದರೆ, ಶುಲ್ಕ ತೆಗೆದುಹಾಕಬಹುದು. ಅದು ಎಂದಿಗೂ ಕಡ್ಡಾಯ ಆಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ವಿಗ್ಗಿ-ಜೊಮ್ಯಾಟೊ ಬಗ್ಗೆ ಆಕ್ಷೇಪ
ಸ್ವಿಗ್ಗಿ, ಜೊಮ್ಯಾಟೋನಂಥ ಆಹಾರ ವಿತರಣಾ ಅಗ್ರಿಗೇಟರ್ಸ್ ಖಾಸಗಿ-ಲೇಬಲ್ ಬ್ರ್ಯಾಂಡ್‌ಗಳ ಜತೆಗಿನ ತ್ವರಿತ-ವಾಣಿಜ್ಯ ಕ್ಷೇತ್ರದ ಕಾರ್ಯತಂತ್ರಕ್ಕೆ ಎನ್‌ಆರ್‌ಎಐ ಆಕ್ಷೇಪ ವ್ಯಕ್ತಪಡಿಸಿದೆ. ಇದು ನ್ಯಾಯಸಮ್ಮತ ಸ್ಪರ್ಧೆಗೆ ಧಕ್ಕೆ ತಂದು ಸ್ವತಂತ್ರ ರೆಸ್ಟೋರೆಂಟ್‌ಗಳಿಗೆ ಹಾನಿ ಉಂಟುಮಾಡುತ್ತದೆ ಎಂದು ಸಂಘವು ಆರೋಪಿಸಿದೆ.
ಅಗ್ರಿಗ್ರೇಟರ್ಸ್ ಜತೆ ಸಂವಾದ ಅಗತ್ಯ
ಫುಡ್ ಡೆಲಿವರಿ ಅಗ್ರಿಗ್ರೇಟರ್ಸ್ ಉದ್ಯಮಕ್ಕೆ ಒಳಿತು ತಂದರೂ, ಅವರ ಕೆಲವು ಕಾರ್ಯತಂತ್ರಗಳು ಉದ್ಯಮದ ಹಿತಕ್ಕೆ ವಿರುದ್ಧವಾಗಿವೆ ಎಂದು ಕಲ್ರಾ ಆಕ್ಷೇಪಿಸಿದ್ದಾರೆ. ಅಗ್ರಿಗ್ರೇಟರ್ಸ್ ಉದ್ಯಮದ ಸವಾಲುಗಳನ್ನು ಅರ್ಥಮಾಡಿಕೊಂಡು ಇನ್ನಷ್ಟು ಸಂವಾದ ನಡೆಸಬೇಕು. ಈ ವೇದಿಕೆಗಳಿಗೆ ಆಹಾರ ಒದಗಿಸುವುದು ರೆಸ್ಟೋರೆಂಟ್ ಉದ್ಯಮವೇ ಆಗಿದೆ ಎಂದು ಅವರು ಒತ್ತಿಹೇಳಿದ್ದಾರೆ.
ಇದೂ ಓದಿ: ಭಾರತೀಯ ಆಹಾರ ಸೇವಾ ಉದ್ಯಮದ ಗಾತ್ರವೆಷ್ಟು ಗೊತ್ತೇ?; ಎನ್‌ಆರ್‌ಎಐ ಐಎಫ್‌ಎಸ್‌ಆರ್ ಬಿಡುಗಡೆ
ಇದೂ ಓದಿ: ಎನ್‌ಆರ್‌ಎಐ-ಒಎನ್‌ಡಿಸಿ ಒಡನಾಟದಲ್ಲಿ ಒಡಕು ಮೂಡಿತಾ?; ಎರಡೂ ಕಡೆಯಿಂದ ಹೊರಹೊಮ್ಮಿತು ಸ್ಪಷ್ಟನೆ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



