ಒಳಗೇನಿದೆ!?

ಪಹಲ್ಗಾಮ್‌ ದಾಳಿ ಪ್ರಕರಣ; ಸದ್ಯದಲ್ಲೇ ‘ಮೈಸೂರ್‌ ಪಾಕ್‌’ಗೆ ಮರು ನಾಮಕರಣ?

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಉಂಟಾಗಿದ್ದಷ್ಟೇ ಅಲ್ಲದೆ, ಪಾಕಿಸ್ತಾನ ಮತ್ತು ಅದನ್ನು ಬೆಂಬಲಿಸಿದ ರಾಷ್ಟ್ರಗಳ ವಿರುದ್ದ ಭಾರತೀಯರು ಪ್ರವಾಸ-ವಹಿವಾಟು ತಿರಸ್ಕರಿಸಿ ದಿಟ್ಟ ಉತ್ತರವನ್ನು ನೀಡಿದ್ದಾರೆ.

ಮತ್ತೊಂದೆಡೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) ಪಾಕಿಸ್ತಾನ ಧ್ವಜಗಳು ಮತ್ತು ಸಂಬಂಧಿತ ಸರಕುಗಳನ್ನು ಮಾರಾಟ ಮಾಡುತ್ತಿರುವ ಅಮೆಜಾನ್‌-ಫ್ಲಿಪ್‌ಕಾರ್ಟ್‌ನಂಥ ಇ-ಕಾಮರ್ಸ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ಪಾಕಿಸ್ತಾನದ ಚಿಹ್ನೆಗಳ ಮಾರಾಟ ತೀವ್ರ ಕಳವಳಕಾರಿ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಹೇಳಿದೆ. ಇದರ ಮುಂದುವರಿದ ಭಾಗವಾಗಿ ಸದ್ಯದಲ್ಲೇ ʼಮೈಸೂರ್‌ ಪಾಕ್ʼಗೆ ಮರು ನಾಮಕರಣ ಸೂಕ್ತ ಎಂಬ ಮಾತುಗಳು ಕೇಳಿಬಂದಿವೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ನಡೆದ ಭಯೋತ್ಪಾದಕ ದಾಳಿಯಿಂದ 26 ಮಂದಿ ಬಲಿಯಾಗಿದ್ದಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ʼಆಪರೇಷನ್‌ ಸಿಂಧೂರʼ ಪಾಕಿಸ್ತಾನವನ್ನು ತತ್ತರಗೊಳಿಸುವಂತೆ ಮಾಡಿ ಕದನವಿರಾಮಕ್ಕೆ ಮೊರೆಹೋಗುವಂತೆ ಮಾಡಿದೆ. ಅದಾಗ್ಯೂ ಈ ಮಧ್ಯೆ ಪಾಕ್‌ ಭಾರತದತ್ತ ನಡೆಸಿದ್ದ ಕೆಲವು ದಾಳಿಗಳ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಉಂಟಾಗಿತ್ತು.

ಈ ಉದ್ವಿಗ್ನತೆಯ ನಡುವೆ ಭಾರತೀಯರಲ್ಲಿ ದೇಶಭಕ್ತಿ ಜಾಗೃತಗೊಂಡು ಪಾಕಿಸ್ತಾನ ಹಾಗೂ ಅದನ್ನು ಬೆಂಬಲಿಸಿದ ಟರ್ಕಿ, ಅಜರ್‌ಬೈಜನ್‌, ಚೀನಾಗಳ ವಿರುದ್ಧ ತೀವ್ರ ಅಸಹನೆ ಉಂಟಾಗಿದೆ. ಭಾರತೀಯರ ಈ ದೇಶಭಕ್ತಿಯ ನಡೆ ಈಗಾಗಲೇ ಟರ್ಕಿ ಹಾಗೂ ಅಜರ್‌ಬೈಜನ್‌ಗಳ ಪ್ರವಾಸೋದ್ಯಮ ಹಾಗೂ ಸಂಬಂಧಿತ ವಹಿವಾಟುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಲದೆ, ಜನರಲ್ಲಿ ಪಾಕ್‌ ಬಗ್ಗೆ ತೀವ್ರ ಬೇಸರ ಉಂಟಾಗಿದೆ. ಅಂಥದ್ದರಲ್ಲಿ ʼಮೈಸೂರ್‌ ಪಾಕ್‌ʼನಲ್ಲಿ ʼಪಾಕ್‌ʼ ಯಾಕೆ ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಮಾತ್ರವಲ್ಲದೆ, ಹೋಟೆಲ್‌ ಹಾಗೂ ಸಿಹಿತಿನಿಸು ಕ್ಷೇತ್ರದ ಕೆಲವರಲ್ಲೂ ಮೂಡಿದೆ.

ಮೈಸೂರು ಪಾಕ್‌ ಇತಿಹಾಸ

ಮೈಸೂರು ಅರಮನೆಯ ಮುಖ್ಯ ಅಡುಗೆಯವರಾದ ಕಾಕಾಸುರ ಮಾಧಪ್ಪ ಎಂಬವರು 1930ರ ದಶಕದಲ್ಲಿ ಈ ಸಿಹಿತಿನಿಸನ್ನು ಆವಿಷ್ಕರಿಸಿದರು. ಒಂದು ದಿನ ಮಹಾರಾಜರು ಊಟದ ಬಳಿಕ ಸಿಹಿತಿಂಡಿ ಕೇಳಿದಾಗ ಮಾಧಪ್ಪನವರು ತಕ್ಷಣವೇ ಹೊಸ ಸಿಹಿತಿನಿಸು ತಯಾರಿಸಲು ಪ್ರಯತ್ನಿಸಿದರು. ಅವರು ಕಡಲೆಹಿಟ್ಟು, ತುಪ್ಪ, ಮತ್ತು ಸಕ್ಕರೆ ಬೆರೆಸಿ ಸರಿಯಾದ ಶಾಖದಲ್ಲಿ ಬೇಯಿಸಿ, ಮೃದುವಾದ, ಕರಗುವಂತಹ ರುಚಿಕರವಾದ ಸಿಹಿತಿನಿಸನ್ನು ಸೃಷ್ಟಿಸಿದರು. ಈ ಹೊಸ ಸಿಹಿತಿನಿಸು ರಾಜರಿಗೆ ತುಂಬಾ ಇಷ್ಟವಾಯಿತು. ಮೈಸೂರು ಅರಮನೆಯಲ್ಲಿ ಪಾಕದಿಂದ ಮಾಡಿದ್ದು ಎಂಬ ಕಾರಣಕ್ಕೆ ಇದಕ್ಕೆ ʼಮೈಸೂರು ಪಾಕʼ ಎಂಬ ಹೆಸರು ಬಂತು ಎಂಬ ಉಲ್ಲೇಖವಿದೆ.

ಅನ್ಯಭಾಷೆಯ ಪ್ರಭಾವಕ್ಕೆ ಸ್ವರಲೋಪ

ಸುರೇಶ, ರಮೇಶ, ಗಣೇಶ ಎಂಬ ಹೆಸರು ಇಂಗ್ಲಿಷ್‌ ಪ್ರಭಾವಕ್ಕೆ ಒಳಗಾಗಿ ಅದು ಸುರೇಶ್‌, ರಮೇಶ್‌, ಗಣೇಶ್‌ ಎಂದಾಗುವುದು ಸಹಜ. ಅದೇ ರೀತಿ ಊರಿನ ಹೆಸರು ಮೈಸೂರು ಆಗಿದ್ದರೂ ಅದು ಇಂಗ್ಲಿಷ್‌ ಪ್ರಭಾವಕ್ಕೆ ಒಳಗಾಗಿ ಮೈಸೂರ್‌ ಆಗಿತ್ತು. ಕನ್ನಡವನ್ನು ಕೂಡ ಉತ್ತರ ಭಾರತದ ಕೆಲವರು ಕನ್ನಡ್‌ ಎಂದು ಬರೀ ವ್ಯಂಜನ ಬಳಸಿ ಹೇಳುವುದು ಸಾಮಾನ್ಯ. ಹೀಗಾಗಿ ʼಮೈಸೂರು ಪಾಕʼದಲ್ಲಿ ಸ್ವರಲೋಪವಾಗಿ ವ್ಯಂಜನವಷ್ಟೇ ಉಳಿದು ʼಮೈಸೂರ್‌ ಪಾಕ್‌ʼ ಆಯ್ತು ಎಂದು ಹೇಳಲಾಗುತ್ತಿದೆ.

ತಿದ್ದಿಕೊಳ್ಳಲು ಇದು ಸದವಕಾಶ

ಮೈಸೂರು ಪಾಕದಲ್ಲಿನ ಸ್ವರಲೋಪವನ್ನು ಸರಿಪಡಿಸಿಕೊಳ್ಳಲು ಇದು ಸದವಕಾಶ. ಒಂದೇ ನಡೆಯಲ್ಲಿ ದೇಶಪ್ರೇಮದ ಜತೆಗೆ ಭಾಷಾಪ್ರೇಮವನ್ನೂ ವ್ಯಕ್ತಪಡಿಸಲು ಇದು ಸಕಾಲ. ಈಗಾಗಲೇ ಬ್ಯಾಂಗಳೂರ್‌, ಬ್ಯಾಂಗಲೋರ್‌ ಎಂಬುದು ಅಧಿಕೃತವಾಗಿ ಬೆಂಗಳೂರು ಆಗಿದೆ. ಮೈಸೂರ್‌ ಕೂಡ ಮೈಸೂರು ಆಗಿದೆ. ಇದೀಗ ಪಹಲ್ಗಾಮ್‌ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರ್ ಪಾಕ್‌ಗೆ ʼಮೈಸೂರು ಪಾಕʼ ಅಂತ ಮರು ನಾಮಕರಣ ಮಾಡಿ ತಿದ್ದಿಕೊಳ್ಳಲು ಇದೊಂದು ಉತ್ತಮ ಅವಕಾಶ.

ಯಾರು ಮೊದಲು?

ʼಮೈಸೂರಿನಲ್ಲಿ ಪಾಕ್‌ ಇಲ್ಲ, ಮೈಸೂರ್‌ ಪಾಕ್‌ನಲ್ಲಿ ಯಾಕೆ ಪಾಕ್?ʼ‌ ಎಂದು ಕೆಲ ಹೋಟೆಲ್‌ಗಳವರು ʼಮೈಸೂರು ಪಾಕʼ ಎಂದು ಮರು ನಾಮಕರಣದ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಯಾರು ಮೊದಲ ನಿಲುವು ತಳೆಯುತ್ತಾರೆ ಎನ್ನುವುದು ಕುತೂಹಲದ ಸಂಗತಿ.

ಸಂಘಗಳು ಮನಸು ಮಾಡಿದರೆ ಸಾಧ್ಯ

ʼಮೈಸೂರು ಪಾಕʼ ಎಂದು ಮರು ನಾಮಕರಣಗೊಳಿಸುವ ನಿಟ್ಟಿನಲ್ಲಿ ʼಬೆಂಗಳೂರು ಹೋಟೆಲುಗಳ ಸಂಘʼ ಅಥವಾ ʼಕರ್ನಾಟಕ ರಾಜ್ಯ ಹೋಟೆಲುಗಳ ಸಂಘʼದವರು ನಿರ್ಣಾಯಕ ಪಾತ್ರ ತೆಗೆದುಕೊಳ್ಳಬಹುದು. ಈ ಬಗ್ಗೆ ಅವರೇ ತಮ್ಮ ಸದಸ್ಯ ಹೋಟೆಲಿಗರಲ್ಲಿ ಮನವಿ ಮಾಡಬಹುದು. ಹೀಗೆ ಸಂಘಗಳವರು, ಸಂಸ್ಥೆಗಳವರು ಇಲ್ಲವೇ ಸಂಬಂಧಪಟ್ಟವರು ಈ ಬಗ್ಗೆ ಮುಂದಡಿ ಇಟ್ಟರೆ ಸದ್ಯದಲ್ಲೇ ʼಮೈಸೂರ್‌ ಪಾಕ್‌ʼಗೆ ಮರು ನಾಮಕರಣವಾದರೂ ಅಚ್ಚರಿಯೇನಲ್ಲ.

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ