ಬೆಂಗಳೂರು: ಸುಖ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥಾಪಕ ಪಡುಕೋಣೆ ಸುರೇಶ್ ಎಸ್. ಪೂಜಾರಿ (87) ವಯೋಸಹಜ ಅನಾರೋಗ್ಯದಿಂದ ಜೂನ್ 4ರಂದು ಮುಂಬೈನಲ್ಲಿ ವಿಧಿವಶರಾದರು.
ಕುಂದಾಪುರ ಮೂಲದ ಇವರು ʼಸುಖ್ ಸಾಗರ್ʼ ಹೆಸರಿನಲ್ಲಿ ಮುಂಬೈನಲ್ಲಿ ಹೋಟೆಲ್ ಉದ್ಯಮ ಆರಂಭಿಸಿ ಸುಖ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಎಂಬ ಸಮೂಹ ಸಂಸ್ಥೆಯನ್ನು ಸ್ಥಾಪಿಸಿ, ಹಲವಾರು ಹೋಟೆಲ್‌ಗಳನ್ನು ತೆರೆದು ಆಹಾರೋದ್ಯಮ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದರು.
ಚಿಕ್ಕಂದಿನಲ್ಲೇ ಹುಟ್ಟೂರನ್ನು ತೊರೆದ ಇವರು ಮುಂಬೈಗೆ ತೆರಳಿ ಜೀವನೋಪಾಯ ನಡೆಸುತ್ತ, ಸ್ವ-ಸಾಮರ್ಥ್ಯದಿಂದ ಉದ್ಯಮಿಯಾಗಿ ಬೆಳೆದರು. ಮಾತ್ರವಲ್ಲದೆ, ತಮ್ಮೊಂದಿಗೆ ಹಲವರನ್ನು ಉದ್ಯಮಿಯಾಗಿ ಬೆಳೆಸಿದರು. ಜೊತೆಗೆ ತನ್ನ ಸಮುದಾಯ, ಊರಿನ ಜನರಿಗೆ ನೆರವಾಗುತ್ತ ಜನಾನುರಾಗಿ ಎನಿಸಿಕೊಂಡಿದ್ದರು.
ಸುರೇಶ್ ಪೂಜಾರಿಯವರು ಕುಂದಾಪುರದ ಬಿಲ್ಲವ ಸಮಾಜ ಸೇವಾ ಸಂಘ(ರಿ.) ಗೌರವಾಧ್ಯಕ್ಷರಾಗಿ, ಕುಂದಾಪುರದ ಶ್ರೀ ನಾರಾಯಣಗುರು ಎಜುಕೇಷನಲ್ & ಕಲ್ಚರಲ್ ಟ್ರಸ್ಟ್ (ರಿ.) ಅಧ್ಯಕ್ಷರಾಗಿ ಕಳೆದ 35 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿದ್ದರು.

ಸಮಾಜದ ಅಶಕ್ತರು ಕೂಡ ಅತ್ಯುತ್ತಮ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಸಬೇಕು ಎಂದು 35 ವರ್ಷಗಳ ಹಿಂದೆಯೇ ಕುಂದಾಪುರದಲ್ಲಿ ಸುಸಜ್ಜಿತ ʼಶ್ರೀ ನಾರಾಯಣಗುರು ಕಲ್ಯಾಣ ಮಂಟಪʼ ನಿರ್ಮಿಸಿದ್ದರು.
ವಿದ್ಯೆಗೆ ಬಹಳಷ್ಟು ಒತ್ತು ನೀಡಿದ್ದ ಅವರು ಬಿಲ್ಲವ ಸಂಘದ ಮೂಲಕ ವಿಧ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ, ಕುಟುಂಬಸ್ಥರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ಕರುಣಿಸಲಿ ಎಂದು ಬಿಲ್ಲವರ ಸಮಾಜದ ಗ ಗಣ್ಯರು, ಊರ ಸಾರ್ವಜನಿಕರು ಪ್ರಾರ್ಥಿಸಿಕೊಂಡಿದ್ದಾರೆ.
ನಾಲ್ಕು ರೂಪಾಯಿ ಸಂಬಳಕ್ಕೆ ಕೆಲಸ!
ಅಂದಾಜು ಹತ್ತನೇ ವಯಸ್ಸಿನಲ್ಲಿ ಅಂದರೆ 1950ರ ಸುಮಾರಿಗೆ ಊರನ್ನು ತೊರೆದು ಬಾಂಬೆಯನ್ನು ಸೇರಿದ್ದ ಸುರೇಶ್ ಪೂಜಾರಿ ಅವರು, ಆರಂಭದಲ್ಲಿ ಅಲ್ಲಿನ ದಕ್ಷಿಣ ಬಾಂಬೆಯ ದೇವಸ್ಥಾನವೊಂದರ ಸಣ್ಣ ಹೋಟೆಲ್‌ನಲ್ಲಿ ಹೆಲ್ಪರ್ ಆಗಿ ನಾಲ್ಕು ರೂಪಾಯಿ ಸಂಬಳಕ್ಕೆ ಕೆಲಸ ಮಾಡಲಾರಂಭಿಸಿದ್ದರು. ನಂತರ ಬಾಂಬೆ ಪೋರ್ಟ್ ಟ್ರಸ್ಟ್ ಕ್ಯಾಂಟೀನ್‌ಗೆ ಕೆಲಸಕ್ಕೆ ಸೇರಿದ ಅವರು ತಿಂಗಳಿಗೆ 6 ರೂ. ಸಂಬಳ ಪಡೆಯುತ್ತಿದ್ದರು. ಇದು ಜೀವನಕ್ಕೆ ಏನೇನೂ ಸಾಲದು ಎಂದು ಸ್ವಂತ ಏನಾದರೂ ಮಾಡಬೇಕು ಎಂದು ಯೋಚಿಸಿದ ಅವರು ಸಣ್ಣದಾಗಿ ಜ್ಯೂಸ್ ಹಾಗೂ ಪಾವ್ ಭಾಜಿ ಅಂಗಡಿ ತೆರೆದರು.

ಚೌಪಟಿ ಪ್ರದೇಶದಲ್ಲಿ ಸಣ್ಣ ಗಾಡಿಯಲ್ಲಿ ಈ ವ್ಯಾಪಾರ ಆರಂಭಿಸಿದ್ದ ಸುರೇಶ್ ಅವರು, ದೂರದ ಸಂಬಂಧಿಯೊಬ್ಬರ ಆರ್ಥಿಕ ನೆರವಿನಿಂದಾಗಿ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಎರಡನೇ ಅಂಗಡಿ ತೆರೆದರು. ಇಡ್ಲಿ, ರೈಸ್‌ಬಾತ್, ಸ್ಯಾಂಡ್‌ವಿಚ್ ಮಾರುತ್ತಿದ್ದ ಅಂಗಡಿಗೆ ಅವರು ಸುಖ್ ಸಾಗರ್ ಎಂದು ಹೆಸರಿಟ್ಟಿದ್ದರು. ನಂತರ ಕ್ರಮೇಣ ಯಶಸ್ಸು ಸಾಧಿಸಿದ ಅವರು ಮುಂಬೈ ಮಾತ್ರವಲ್ಲದೆ, ದುಬೈ, ಕತಾರ್, ಬೆಂಗಳೂರು, ಮೈಸೂರು, ಚೆನ್ನೈನಲ್ಲೂ ʼಸುಖ್ ಸಾಗರ್ʼ ಹೆಸರಿನಲ್ಲಿ ಹೋಟೆಲ್‌ಗಳನ್ನು ತೆರೆದರು.
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



