ಒಳಗೇನಿದೆ!?

ನ್ಯಾಯಕ್ಕಾಗಿ ಚಹಾ ಮೊರೆ ಹೋದ ವಿವಾಹಿತ; ಕೈಯಲ್ಲಿ ಬೇಡಿ, ಪತ್ನಿ ಮನೆ ಬಳಿಯೇ ಟೀ ಸ್ಟಾಲ್!

ಬೆಂಗಳೂರು: ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದು ಸಹಜ, ಆದರೆ ಇಲ್ಲೊಬ್ಬರು ಟೀ ಸ್ಟಾಲ್‌ವೊಂದರ ಮೊರೆ ಹೋಗಿದ್ದಾರೆ. ಈ ಮೂಲಕ ಚಹಾಕ್ಕೂ ನ್ಯಾಯ ಒದಗಿಸುವ ಶಕ್ತಿ ಇದೆ ಎಂಬ ವಿಶ್ವಾಸದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂಥದ್ದೊಂದು ವಿಶಿಷ್ಟ ಪ್ರತಿಭಟನೆಗೆ ರಾಜಸ್ಥಾನದ ಬೀದಿಯೊಂದು ಸಾಕ್ಷಿಯಾಗಿದೆ.

ರಾಜಸ್ಥಾನದ ಬಾರಾನ್ ಜಿಲ್ಲೆಯ ಅಂತಾ ಕಸ್ಬಾದಲ್ಲಿ ಕೃಷ್ಣಕುಮಾರ್ ಧಾಕಡ್ ಎಂಬವರು ತಮ್ಮ ಪತ್ನಿಯಿಂದ ದಾಖಲಿಸಲಾದ ಕೌಟುಂಬಿಕ ಹಿಂಸೆ ಮತ್ತು ಒತ್ತಡದ ಆರೋಪಗಳ ವಿರುದ್ಧ ಈ  ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಕೃಷ್ಣಕುಮಾರ್, ತನ್ನ ಮೇಲೆ ಮಾಡಲಾದ ತಪ್ಪು ಆರೋಪಗಳಿಂದ ಬೇಸತ್ತು, “498ಎ ಟೀ ಕೆಫೆ” ಎಂಬ ಹೆಸರಿನ ಚಹಾ ಅಂಗಡಿಯನ್ನು ತಮ್ಮ ಪತ್ನಿಯ ಮನೆ ಬಳಿಯೇ ತೆರೆದಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498ಎ ಅಡಿ ದಾಖಲಾದ ದೌರ್ಜನ್ಯ ಕೇಸ್‌ನ ವಿರುದ್ಧ ಈ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ.

ಕೃಷ್ಣಕುಮಾರ್ ಧಾಕಡ್ ತಮ್ಮ ಕೈಗೆ ಬೇಡಿ ಧರಿಸಿ ಚಹಾ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಕೆಫೆಯ ಹೊರಗೆ ಒಂದು ದೊಡ್ಡ ಹೋರ್ಡಿಂಗ್‌ನಲ್ಲಿ, “ನ್ಯಾಯ ಸಿಗುವವರೆಗೆ ಚಹಾ ಕುದಿಯುತ್ತಲೇ ಇರುತ್ತದೆ” ಎಂಬ ಸಂದೇಶ ಬರೆಸಿದ್ದಾರೆ. ಅವರ ಈ ಅನನ್ಯ ಪ್ರತಿಭಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು  ಶ್ಲಾಘಿಸಿದ್ದಾರೆ.

ಕೃಷ್ಣಕುಮಾರ್‌ಗೆ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸುವ ಉದ್ದೇಶವಿದ್ದು, ಈ ಕೆಫೆಯ ಮೂಲಕ ಸಮಾಜದ ಗಮನವನ್ನು ಸೆಕ್ಷನ್ 498ಎನ ದುರ್ಬಳಕೆ ಕಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಈ ವಿಷಯವು ಸ್ಥಳೀಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದು, ಜನರಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಕೈಗೆ ಬೇಡಿ ಧರಿಸಿ ಚಹಾ ತಯಾರಿ

ಕೆಲವರು ಇದನ್ನು ಒಂದು ಧೈರ್ಯದ ಹೆಜ್ಜೆ ಎಂದು ಕೊಂಡಾಡಿದರೆ, ಇನ್ನು ಕೆಲವರು ಕಾನೂನಿನ ದುರ್ಬಳಕೆಯ ಕುರಿತು ಚರ್ಚೆ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನದ ಒಂದು ಸಣ್ಣ ಕಸ್ಬಾದಲ್ಲಿನ ಕೃಷ್ಣಕುಮಾರ್ ಧಾಕಡ್‌ ಆರಂಭಿಸಿದ ಈ ಹೋರಾಟವು ದೇಶಾದ್ಯಂತ ಗಮನ ಸೆಳೆಯುತ್ತಿದೆ.

ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ಇದೂ ಓದಿ: ಇನ್ನು ಮೂರೇ ವರ್ಷಗಳಲ್ಲಿ ರೆಸ್ಟೋರೆಂಟ್‌ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧ್ಯತೆ: ಏನದು?

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ