ಒಳಗೇನಿದೆ!?

ಬೆಂಗಳೂರಿನ 40 ಸಾವಿರ ಹೋಟೆಲ್‌ಗಳು ಬಂದ್‌ ಆಗುವ ಸಾಧ್ಯತೆ; ಹೈಕೋರ್ಟ್‌ ಮೊರೆ ಹೋದ ಬಿಎಚ್‌ಎ

ಹೋಟೆಲ್‌ ಕನ್ನಡ, ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ರಾಜಧಾನಿ ಬೆಂಗಳೂರು ಒಂದರಲ್ಲೇ 40 ಸಾವಿರ ಹೋಟೆಲ್‌ಗಳು ಬಂದ್‌ ಆಗುವ ಭೀತಿ ಎದುರಿಸಲಾರಂಭಿಸಿವೆ. ಹೀಗಾಗಿ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ಹೈಕೋರ್ಟ್‌ ಮೊರೆ ಹೋಗಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಕೊರತೆಯಿಂದ ಉದ್ಯಮಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ ಎಂದು ಬಿಎಚ್‌ಎ ಸಲ್ಲಿಸಿರುವ ಅರ್ಜಿ ವಿಚಾರಣೆ ಮಂಗಳವಾರ ಹೈಕೋರ್ಟ್‌ನಲ್ಲಿ ನಡೆದಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪ್ರತಿವಾದಿ ತೈಲಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ವಾಣಿಜ್ಯ ಎಲ್‌ಪಿಜಿ ದಾಸ್ತಾನು-ಲಭ್ಯತೆ, ಪೂರೈಕೆ ವ್ಯವಸ್ಥೆ ಮತ್ತು ಅನುಸರಿಸುತ್ತಿರುವ ವಿತರಣಾ ಕಾರ್ಯವಿಧಾನ ಮತ್ತು ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಮಾಹಿತಿ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಲಾಗಿದೆ. ಮುಂದಿನ ವಿಚಾರಣೆ ಮಾ. 23ಕ್ಕೆ ನಿಗದಿಯಾಗಿದೆ.

ಇದೂ ಓದಿ: ಎಫ್​ಎಸ್​ಎಸ್​ಎಐ ಪ್ರಮಾಣಪತ್ರಗಳಿಗಿನ್ನು ನವೀಕರಣ ಅನಗತ್ಯ; ಒಮ್ಮೆ ಪಡೆದರೆ ಜೀವಿತಾವಧಿ ಮಾನ್ಯತೆ

ಅರ್ಜಿಯಲ್ಲೇನಿದೆ?: ಅಂತಾರಾಷ್ಟ್ರೀಯ ಉದ್ವಿಗ್ನತೆ ಎಲ್‌ಪಿಜಿ ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ತೈಲ ಕಂಪನಿಗಳು ಮತ್ತು ಏಜೆನ್ಸಿಗಳು ತಿಳಿಸಿವೆ. ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪೆಟ್ರೋಲಿಯಂ ಉತ್ಪನ್ನಗಳ ನಿಯಂತ್ರಣಕ್ಕೆ ಆದೇಶಿಸಿದೆ. ಅದರ ಬೆನ್ನಲೇ ರಾಜ್ಯ ಸರ್ಕಾರವು ದಿನಕ್ಕೆ ಕೇವಲ 1 ಸಾವಿರ ವಾಣಿಜ್ಯ ಸಿಲಿಂಡರ್‌ಗಳನ್ನು ಪೂರೈಸುವ ಮಿತಿ ಹೇರಿದೆ. ಇದು ಬೇಡಿಕೆಯ ಶೇ. 5ಕ್ಕಿಂತಲೂ ಕಡಿಮೆ. ಹೋಟೆಲ್ ಉದ್ಯಮವನ್ನು ಆದ್ಯತಾ ವಲಯದಲ್ಲಿ ಗುರುತಿಸಿದ್ದರೂ ಪೂರೈಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನ ಸುಮಾರು 40 ಸಾವಿರ ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದೂ ಓದಿ: ಮುಟ್ಟಿನ ರಜೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಹೋಟೆಲ್‌ ಉದ್ಯೋಗಿ: ಸರ್ಕಾರಕ್ಕೆ ನೋಟಿಸ್‌ ಜಾರಿ

ಲಕ್ಷಾಂತರ ಕಾರ್ಮಿಕರಿಗೆ ಸಮಸ್ಯೆ: ಹೋಟೆಲ್ ಉದ್ಯಮವು ಬೃಹತ್ ಪೂರೈಕೆ ಸರಪಳಿ ಹೊಂದಿದೆ. ಪ್ರತಿದಿನ 12 ಲಕ್ಷ ಲೀಟರ್ ಹಾಲು, ಟನ್‌ಗಟ್ಟಲೆ ತರಕಾರಿ ಮತ್ತು ಮಾಂಸವನ್ನು ಖರೀದಿಸುತ್ತವೆ. ಸಿಲಿಂಡರ್ ಕೊರತೆಯಿಂದ ಹೋಟೆಲ್‌ಗಳು ಮುಚ್ಚಲ್ಪಟ್ಟರೆ ರೈತರು ಮತ್ತು ಇತರ ಕಾರ್ಮಿಕರಿಗೂ ನಷ್ಟ ಉಂಟಾಗಲಿದೆ. ಅಂದಾಜು 6 ಲಕ್ಷ ಕಾರ್ಮಿಕರ ಉದ್ಯೋಗಕ್ಕೆ ಇದು ಸಮಸ್ಯೆ ಉಂಟು ಮಾಡಲಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಶೀಘ್ರ ಪರಿಹಾರ ಅತ್ಯಗತ್ಯ: ಬೆಂಗಳೂರು ನಗರಕ್ಕೆ ದಿನಕ್ಕೆ ಸಾವಿರಾರು ಸಿಲಿಂಡರ್ ಅಗತ್ಯವಿದೆ. ಆದರೆ, ಇಡೀ ರಾಜ್ಯದ ಹೋಟೆಲ್‌ಗಳಿಗೆ ಸಾವಿರ ಸಿಲಿಂಡರ್ ನಿಗದಿ ಮಾಡಲಾಗಿದೆ. ಈ ಬಿಕ್ಕಟ್ಟು ಬಗೆಹರಿಯದಿದ್ದರೆ ದರ ಏರಿಕೆ ಅಥವಾ ಅನಿರ್ದಿಷ್ಟಾವಧಿಗೆ ಮುಚ್ಚುವಿಕೆ ಅನಿವಾರ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.‌

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ